ಬೆಂಗಳೂರು ಎಚ್‌ಎಎಲ್‌ ಸ್ಥಳಾಂತರ ಕೇಳಿಲ್ಲ : ನಾಯ್ಡು

KannadaprabhaNewsNetwork |  
Published : May 28, 2025, 11:51 PM ISTUpdated : May 29, 2025, 04:49 AM IST
ಚಂದ್ರಬಾಬು ನಾಯ್ಡು | Kannada Prabha

ಸಾರಾಂಶ

ಬೆಂಗಳೂರಿನ ಎಚ್‌ಎಎಲ್‌ ಯುದ್ಧ ವಿಮಾನ ನಿರ್ಮಾಣ ಘಟಕವನ್ನು ತಮ್ಮ ರಾಜ್ಯಕ್ಕೆ ಕೊಂಡೊಯ್ಯಲು   ತಮ್ಮಿಂದ ಅಂಥ ಯಾವುದೇ ಯತ್ನ ನಡೆದಿಲ್ಲ ಎಂದು ಸ್ವತಃ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.

 ಅಮರಾವತಿ: ಬೆಂಗಳೂರಿನ ಎಚ್‌ಎಎಲ್‌ ಯುದ್ಧ ವಿಮಾನ ನಿರ್ಮಾಣ ಘಟಕವನ್ನು ತಮ್ಮ ರಾಜ್ಯಕ್ಕೆ ಕೊಂಡೊಯ್ಯಲು ಆಂಧ್ರ ಸರ್ಕಾರ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸಿದೆ ಎಂಬ ವರದಿ ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ತಮ್ಮಿಂದ ಅಂಥ ಯಾವುದೇ ಯತ್ನ ನಡೆದಿಲ್ಲ ಎಂದು ಸ್ವತಃ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾಯ್ಡು, ‘ಬೆಂಗಳೂರಿನಲ್ಲಿರುವ ಎಚ್‌ಎಎಲ್‌ ಅನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವಂತೆ ನಾನು ಕೇಳಿಲ್ಲ. ಇದು ಬೃಹತ್ತಾದ ಮತ್ತು ವ್ಯೂಹಾತ್ಮಕ ಸೌಲಭ್ಯ. ಅಂತಹ ಸಂಸ್ಥೆಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಮತ್ತು ಸ್ಥಳಾಂತರಿಸಬಾರದು. ಯಾವುದೇ ಯೋಜನೆಯನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸುವಂತೆ ನಾನು ಕೇಳಿಲ್ಲ ಮತ್ತು ಅಂತಹ ಯೋಚನೆ ನನ್ನ ಇತಿಹಾಸದಲ್ಲೇ ಇಲ್ಲ’ ಎಂದು ಹೇಳಿದರು.

ಅಲ್ಲದೆ, ‘ಆಂಧ್ರದ ಅನಂತಪುರ ಜಿಲ್ಲೆಯ ಲೇಪಾಕ್ಷಿಯು ವಿಮಾನ ಉತ್ಪಾದನೆ ಮತ್ತು ಇತರ ರಕ್ಷಣಾ ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತವಾದ ಸ್ಥಳ ಎಂದು ಹೇಳಿದ್ದೆ. ದುರದೃಷ್ಟವಶಾತ್, ಕರ್ನಾಟಕದ ಕೆಲವು ರಾಜಕಾರಣಿಗಳು ಇದನ್ನು ಎಚ್‌ಎಎಲ್ ಅನ್ನು ಆಂಧ್ರಪ್ರದೇಶಕ್ಕೆ ವರ್ಗಾಯಿಸುವ ಪ್ರಯತ್ನ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ‘ ಎಂದು ಚಾಣಾಕ್ಷತನದ ಮಾತು ಆಡಿದರು.

ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ನಾಯ್ಡು ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ನಲ್ಲಿ ಸೌಕರ್ಯದ ಕೊರತೆಯಿದೆ ಎಂಬ ಕಾರಣ ನೀಡಿ, ಎಚ್‌ಎಎಲ್‌ನ ಯುದ್ಧವಿಮಾನ ತಯಾರಿಕಾ ಘಟಕವನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಲಾಬಿ ನಡೆಸಿದ್ದಾರೆ ಎಂಬ ವಿಚಾರ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿತ್ತು. ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್‌ ಸೇರಿದಂತೆ ಅನೇಕ ನಾಯಕರು ಈ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ವಿವಾದ ತೀವ್ರವಾಗುತ್ತಿದ್ದಂತೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಯು, ಅಸ್ತಿತ್ವದಲ್ಲಿರುವ ಯಾವುದೇ ಸೌಲಭ್ಯವನ್ನು ಸ್ಥಳಾಂತರಿಸುವ ಪ್ರಸ್ತಾಪವನ್ನು ತಾವು ಕೇಂದ್ರದ ಮುಂದಿಟ್ಟಿಲ್ಲ. ಬೆಂಗಳೂರಿನಲ್ಲಿ ಹೆಚ್ಚುವರಿ ವಿಸ್ತರಿತ ಘಟಕಕ್ಕೆ ಜಾಗ ಇಲ್ಲ ಎಂಬ ಕಾರಣಕ್ಕೆ ನಾವು ಗಡಿ ಪ್ರದೇಶದಲ್ಲಿ ಜಾಗದ ಪ್ರಸ್ತಾಪ ಮಾಡಿದ್ದೆವು ಎಂದು ಸ್ಪಷ್ಟಪಡಿಸಿತ್ತು. ಅದಾದ ಬಳಿಕ ಸ್ವತಃ ಮುಖ್ಯಮಂತ್ರಿ ನಾಯ್ಡು ಈ ಸ್ಪಷ್ಟೀಕರಣ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸ್ವಾತಂತ್ರ್ಯ ಬಳಿಕ ಮೊದಲ ಬಾರಿಪಾಕ್‌ ವಿವಿಯಲ್ಲಿ ಸಂಸ್ಕೃತ ಕಲಿಕೆ!
ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ