ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ. ಏಕೆಂದರೆ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ನನ್ನ ಬಳಿ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಟೈಮ್ಸ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ‘ಪಕ್ಷದ ವತಿಯಿಂದ ನನಗೆ ಆಂಧ್ರ ಇಲ್ಲವೇ ತಮಿಳುನಾಡಿನಿಂದ ಸ್ಪರ್ಧಿಸಲು ಆಹ್ವಾನ ಬಂದಿತ್ತು. ಆದರೆ ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವಷ್ಟು ಹಣ ಇಲ್ಲ. ಅಲ್ಲದೇ ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಮುಖ ಮಾನದಂಡವಾಗಿರುವ ಪ್ರಬಲ ಜಾತಿಯ ಬಲವೂ ನನಗಿಲ್ಲ. ಈ ಹಿನ್ನೆಲೆಯಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ’ ಎಂದರು.