‘ಐ ಲವ್‌ ಮಹಾದೇವ್‌’ ಘೋಷಣೆ ಈಶ್ವರನಿಗೆ ಅವಮಾನ : ಬದರಿ ಶ್ರೀ

KannadaprabhaNewsNetwork |  
Published : Oct 06, 2025, 01:00 AM IST
ಸ್ವಾಮಿ | Kannada Prabha

ಸಾರಾಂಶ

ದೇಶದ ಕೆಲವೆಡೆ ನಡೆದಿರುವ ‘ಐ ಲವ್‌ ಮೊಹಮ್ಮದ್’ ಹಾಗೂ ‘ಐ ಲವ್‌ ಮಹಾದೇವ್‌’ ಘೋಷಣೆ-ಪ್ರತಿಘೋಷಣೆಗಳ ವಿವಾದದ ತಿಕ್ರಿಯಿಸಿರುವ ಬದರಿ ಜ್ಯೋತಿರ್ಮಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಗಳು, ‘ಈ ಘೋಷಣೆ ಮಹಾದೇವರಿಗೆ ಮಾಡಿದ ಅವಮಾನ’ ಎಂದಿದ್ದಾರೆ.

ಪಟನಾ: ದೇಶದ ಕೆಲವೆಡೆ ನಡೆದಿರುವ ‘ಐ ಲವ್‌ ಮೊಹಮ್ಮದ್’ ಹಾಗೂ ‘ಐ ಲವ್‌ ಮಹಾದೇವ್‌’ ಘೋಷಣೆ-ಪ್ರತಿಘೋಷಣೆಗಳ ವಿವಾದದ ತಿಕ್ರಿಯಿಸಿರುವ ಬದರಿ ಜ್ಯೋತಿರ್ಮಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಗಳು, ‘ಈ ಘೋಷಣೆ ಮಹಾದೇವರಿಗೆ ಮಾಡಿದ ಅವಮಾನ’ ಎಂದಿದ್ದಾರೆ. ಜತೆಗೆ, ನಿಜವಾದ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಈ ಗಲಾಟೆ ಶುರು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬಿಹಾರದಲ್ಲಿ ಮಾತನಾಡಿದ ಸ್ವಾಮಿಗಳು, ‘ಮೊಹೊಮ್ಮದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಐ ಲವ್‌ ಮಹಾದೇವ್‌ ಎನ್ನುವುದು ಅವಮಾನ. ಮಹಾದೇವನು ಪೂಜಿಸಲು ಇದ್ದಾನೆಯೇ ಅಥವಾ ಪ್ರೀತಿಸಲು ಇದ್ದಾನೆಯೇ’ ಎಂದು ಕಿಡಿ ಕಾರಿದರು.

ದುರ್ಗಾ ಮೆರವಣಿಗೆ ವೇಳೆ ಕಟಕ್‌ನಲ್ಲಿ ಹಿಂಸೆ: ಸ್ಥಿತಿ ಉದ್ವಿಗ್ನ

ಕಟಕ್‌: ದುರ್ಗಾ ಪೂಜೆ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಹಿಂಸಾಚಾರ ಭುಗಿಲೆದ್ದ ನಂತರ ಒಡಿಶಾದ ಕಟಕ್ ನಗರವು ಭಾನುವಾರವೂ ಉದ್ವಿಗ್ನವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೋಮವಾರ 12 ಗಂಟೆಗಳ ನಗರ ಬಂದ್‌ಗೆ ಕರೆ ನೀಡಿದೆ.ಬೆಳಗಿನ ಜಾವ 1.30 ರಿಂದ 2 ಗಂಟೆಗೆ ಮೆರವಣಿಗೆಯಲ್ಲಿ ಹೆಚ್ಚಿನ ಡೆಸಿಬಲ್‌ನಲ್ಲಿ ಡಿಜೆ ಸಂಗೀತ ನುಡಿಸುವುದನ್ನು ಕೆಲವು ಸ್ಥಳೀಯರು ಆಕ್ಷೇಪಿಸಿದಾಗ ಹಿಂಸೆ ಭುಗಿಲೆದ್ದಿದೆ. ಗುಂಪೊಂದು ಮೆರವಣಿಗೆಯ ಮೇಲೆ ಕಲ್ಲುಗಳು ಮತ್ತು ಗಾಜಿನ ಬಾಟಲಿಗಳನ್ನು ಎಸೆದಿದೆ. ಆಗ ಪೊಲೀಸರು ಸೇರಿ ಅನೇಕರು ಗಾಯಗೊಂಡಿದ್ದಾರೆ. ಹಿಂಸೆ ವೇಳೆ, ಅಂಗಡಿ, ವಾಹನಗಳನ್ನು ಧ್ವಂಸ ಮಾಡಲಾಗಿದೆ.

ಗಾಜಾ ಬಿಡದಿದ್ರೆ ಹಮಾಸ್‌ ನಿರ್ನಾಮ: ಟ್ರಂಪ್‌ ಎಚ್ಚರಿಕೆ

ವಾಷಿಂಗ್ಟನ್‌: ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಸಂಘರ್ಷವನ್ನು ನಿಲ್ಲಿಸಲು ತುದಿಗಾಲಲ್ಲಿ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗಾಜಾ ತೊರೆಯುವಂತೆ ಹಮಾಸ್‌ಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ.‘ನಾನು ಪ್ರಸ್ತಾಪಿಸಿರುವ ಶಾಂತಿ ಒಪ್ಪಂದದಂತೆ ಹಮಾಸ್‌ ಗಾಜಾದಲ್ಲಿನ ತಮ್ಮ ಅಧಿಕಾರ ಮತ್ತು ನಿಯಂತ್ರಣವನ್ನು ತೊರೆಯದಿದ್ದರೆ ಅವರನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತೇನೆ’ ಎಂದು ಟ್ರಂಪ್‌ ಗುಡುಗಿದ್ದಾರೆ. ಜತೆಗೆ, ಗಾಜಾ ಮೇಲೆ ದಾಳಿ ನಿಲ್ಲಿಸಿ ಶಾಂತಿ ಸ್ಥಾಪನೆಗೆ ಸಹಕರಿಸಲು ಇಸ್ರೇಲ್‌ ಪ್ರಧಾನಿ ಬೆಂಬಮಿನ್‌ ನೆತನ್ಯಾಹು ಒಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಹೌದು. ಬೀಬಿಯ ಒಪ್ಪಿಗೆ ಇದೆ’ ಎಂದಿದ್ದಾರೆ.ಒತ್ತೆಯಾಳು ಬಿಡುಗಡೆ ಸೇರಿದಂತೆ ತಮ್ಮ ಎಲ್ಲಾ 20 ಅಂಶಗಳನ್ನು ಪಾಲಿಸಲು ಟ್ರಂಪ್‌ ಹಮಾಸ್‌ಗೆ ಭಾನುವಾರ ಸಂಜೆ 6 ಗಂಟೆ(ವಾಷಿಂಗ್ಟನ್‌ ಸಮಯ) ವರೆಗೆ ಅವಕಾಶ ಕೊಟ್ಟಿದ್ದರು.

ಯುಪಿ: ಮುಸ್ಲಿಮರಿಂದಲೇ ಜೆಸಿಬಿ ಕರೆಸಿ ಅನಧಿಕೃತ ಮಸೀದಿ ನೆಲಸಮ

ಸಂಭಲ್‌: ಉತ್ತರ ಪ್ರದೇಶದ ರಾಯಾ ಬುಜುರ್ಗ್‌ ಹಳ್ಳಿಯಲ್ಲಿ ಅಕ್ರಮವಾಗಿ ಕಟ್ಟಿದ್ದ ಗೌಸುಲ್ಬರಾ ಮಸೀದಿಯನ್ನು, ಜಿಲ್ಲಾಡಳಿತ ಕ್ರಮ ಕೈಗೊಳ್ಳುವ ಮುಂಚೆ ಮುಸಲ್ಮಾನರೇ ಬುಲ್ಡೋಜರ್‌ ಕರೆಸಿ ನೆಲಸಮ ಮಾಡಿದ ಘಟನೆ ಭಾನುವಾರ ನಡೆದಿದೆ.ಅನಧಿಕೃತ ಮಸೀದಿ ತೆರವಿಗೆ ಜಿಲ್ಲಾಡಳಿತ ಸೂಚನೆ ನೀಡಿ, ತಾನೇ ಧ್ವಂಸಕ್ಕೆ ಮುಂದಾಗಿತ್ತು. ಆದರೆ 4 ದಿನ ಸಮಯಾವಕಾಶ ಕೋರಿದ ಮಸೀದಿ ಸದಸ್ಯರು, ತಾವೇ ನೆಲಸಮ ಮಾಡಿದ್ದಾರೆ. ಮೊದಲಿಗೆ ಸುತ್ತಿಗೆ ಬಳಸಿ ಕೆಡವಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದಾಗ ಜೆಸಿಬಿ ಬಳಸಿದರು.ಅ.2ರಂದು ಇದೇ ಪ್ರದೇಶದಲ್ಲಿ ಅನಧಿಕೃತ ಮದುವೆ ಹಾಲ್‌ ಒಂದನ್ನು ಅಧಿಕಾರಿಗಳು ನೆಲಸಮ ಮಾಡಿದ್ದರು.

ಮಸೂದೆಗೆ ಸಹಿ ಹಾಕದ ಗೌರ್ನರ್‌ ವಿರುದ್ಧ ತ.ನಾಡು ಸರ್ಕಾರ ಕೋರ್ಟ್‌ಗೆ

ನವದೆಹಲಿ: ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ಅವರ ನಡುವೆ ಮತ್ತೊಂದು ಕಾನೂನು ಹೋರಾಟ ಶುರುವಾಗಿದೆ. ಕಲೈನಾರ್‌ ವಿವಿವಿ ಮಸೂದೆ-2025ಗೆ ಸಹಿ ಹಾಕದೇ ರಾಷ್ಟ್ರಪತಿಗೆ ಕಳಿಸಿರುವ ರಾಜ್ಯಪಾಲರ ನಡೆ ಪ್ರಶ್ನಿಸಿ ಇದೀಗ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.ಈ ವಿಧೇಯಕವು ಭಾರತಿದಾಸನ್‌ ವಿವಿಯನ್ನು ವಿಭಜಿಸಿ ಕುಂಬಕೋಣಂನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಹೆಸರಿನಲ್ಲಿ ಕಲೈನಾರ್ ವಿವಿ ಎಂಬ ಹೊಸ ವಿವಿ ಆರಂಭಿಸುವ ಉದ್ದೇಶ ಹೊಂದಿದೆ. ಅರಿಯಲ್ಲೂರು, ನಾಗಾಪಟ್ಟಣಂ, ತಂಜಾವೂರು ಮತ್ತು ತಿರುವರೂರು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಈ ವಿವಿ ಅನುಕೂಲ ಮಾಡಿಕೊಡಲಿದೆ.

ಆದರೆ ರಾಜ್ಯಪಾಲರು ಈ ವಿಧೇಯಕಕ್ಕೆ ಒಪ್ಪಿಗೆ ನೀಡುವ ಬದಲು ಸಚಿವ ಸಂಪುಟದ ಅಭಿಪ್ರಾಯಕ್ಕೆ ವಿರುದ್ಧವಾಗಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಅನಿವಾರ್ಯವಾಗಿ ಕೋರ್ಟ್‌ ಮೆಟ್ಟಿಲೇರಬೇಕಾಯಿತು ಎಂದು ರಾಜ್ಯ ಸರ್ಕಾರವು ತನ್ನ ರಿಟ್‌ ಅರ್ಜಿಯಲ್ಲಿ ಹೇಳಿಕೊಂಡಿದೆ.ರಾಜ್ಯಪಾಲರ ಕ್ರಮ ಅಸಾಂವಿಧಾನಿಕ, ಅಲ್ಲದೆ, ಈ ಹಿಂದೆ ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿದ ಕಾಲಮಿತಿಯ ತೀರ್ಪಿಗೂ ವಿರುದ್ಧವಾಗಿದೆ ಎಂದು ಹೇಳಿಕೊಂಡಿರುವ ಸರ್ಕಾರ, ವಿಧೇಯಕಕ್ಕೆ ಸಂಬಂಧಿಸಿ ಸೂಕ್ತ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಸರ್ಕಾರ ಮನವಿ ಮಾಡಿದೆ.

ಯುಜಿಸಿ ನಿಯಮಗಳು ಮತ್ತು ಕುಲಪತಿಗಳ ನೇಮಕಾತಿ ವಿಚಾರಗಳಿಗೆ ಸಂಬಂಧಿಸಿದ ಕಳವಳಗಳ ಕುರಿತು ಪರಿಶೀಲನೆ ನಡೆಸಲು ರಾಜ್ಯಪಾಲರು ಈ ವಿಧೇಯಕವನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿಕೊಟ್ಟಿದ್ದರು.

PREV
Read more Articles on

Recommended Stories

ಕಾಫ್‌ ಸಿರಪ್‌ ಬಗ್ಗೆ ರಾಜ್ಯದಲ್ಲೂ ಆತಂಕ
ದೋಷಪೂರಿತ ಕಾಫ್‌ ಸಿರಪ್‌ಗಳ ಮೇಲೆ ಕಠಿಣ ಕ್ರಮ : ಕೇಂದ್ರ ಸೂಚನೆ