ಅಮೆರಿಕದಲ್ಲಿ ಗುಂಡಿಕ್ಕಿ ತೆಲಂಗಾಣ ವಿದ್ಯಾರ್ಥಿ ದಾರುಣ ಹತ್ಯೆ

KannadaprabhaNewsNetwork |  
Published : Oct 05, 2025, 01:02 AM ISTUpdated : Oct 05, 2025, 03:27 AM IST
ಸಾವು | Kannada Prabha

ಸಾರಾಂಶ

ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಹೈದರಾಬಾದ್ ಮೂಲದ ಚಂದ್ರಶೇಖರ ಪೋಳ್‌ ಎಂಬ ವಿದ್ಯಾರ್ಥಿಯನ್ನು ಅಮೆರಿಕದ ಡಲ್ಲಾಸ್‌ನಲ್ಲಿ ಅನಾಮಿಕರು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಹೈದರಾಬಾದ್‌: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಹೈದರಾಬಾದ್ ಮೂಲದ ಚಂದ್ರಶೇಖರ ಪೋಳ್‌ ಎಂಬ ವಿದ್ಯಾರ್ಥಿಯನ್ನು ಅಮೆರಿಕದ ಡಲ್ಲಾಸ್‌ನಲ್ಲಿ ಅನಾಮಿಕರು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಪೋಳ್‌ (27), 6 ತಿಂಗಳ ಹಿಂದೆ ಅಮೆರಿಕದಲ್ಲಿ ದಂತ ವೈದ್ಯಕೀಯ ಶಿಕ್ಷಣದಲ್ಲಿ ಮಾಸ್ಟರ್ಸ್‌ ಪದವಿ ಪಡೆದಿದ್ದರು. ಅಲ್ಲಿಯೇ ಪೂರ್ಣಾವಧಿ ನೌಕರಿಗಾಗಿ ಪ್ರಯತ್ನಿಸುತ್ತಿದ್ದರು. ಜೊತೆಗೆ ಗ್ಯಾಸ್‌ ಸ್ಟೇಷನ್‌ನಲ್ಲಿ (ಪೆಟ್ರೋಲ್‌ ಬಂಕ್‌) ಅಲ್ಪಾವಧಿಗೆ ಕೆಲಸ ಮಾಡುತ್ತಿದ್ದರು. ಶುಕ್ರವಾರ ತಡರಾತ್ರಿ ಅನಾಮಿಕರು ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ಹೈದರಾಬಾದ್‌ನಲ್ಲಿರುವ ಪೋಲೆ ಅವರ ಪೋಷಕರು ಶವವನ್ನು ಭಾರತಕ್ಕೆ ತರಿಸುವಂತೆ ಸರ್ಕಾರದ ಬಳಿ ಆಗ್ರಹಿಸಿದ್ದಾರೆ.

ಪಾಕ್‌ ನನ್ನ ಜನ್ಮಭೂಮಿ, ಭಾರತ ಮಾತೃಭೂಮಿ: ಕನೇರಿಯಾ

ಇಸ್ಲಾಮಾಬಾದ್‌: ‘ಪಾಕಿಸ್ತಾನ ನನ್ನ ಜನ್ಮಭೂಮಿಯಾದರೂ ಭಾರತ ಮಾತೃಭೂಮಿ. ಹಾಗಂತ ಭಾರತದ ಬಗ್ಗೆ ನಾನು ನೀಡುವ ಸಕಾರಾತ್ಮಕ ಹೇಳಿಕೆಗಳ ಹಿಂದೆ, ಆ ದೇಶದ ಪೌರತ್ವ ಪಡೆಯುವ ಉದ್ದೇಶವಿಲ್ಲ’ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಸ್ಪಷ್ಟಪಡಿಸಿದ್ದಾರೆ. 

ಹಿಂದೂ ಧರ್ಮೀಯರಾದ ಕನೇರಿಯಾ ಭಾರತದ ಬಗ್ಗೆ ಆಗಾಗ ಮೆಚ್ಚುಗೆಯ ಟ್ವೀಟ್‌ ಮಾಡುತ್ತಿರುತ್ತಾರೆ. ಇದರ ಬೆನ್ನಲ್ಲೇ ಅವರಿಗೆ ಭಾರತೀಯ ಪೌರತ್ವ ಪಡೆಯಿರಿ ಎಂದು ನೆಟಿಜನ್‌ಗಳು ಆಗ್ರಹಿಸಿದ್ದರು.

ಈ ಬಗ್ಗೆ ಅವರು ಪ್ರತಿಕ್ರಿಯಿಸಿ, ‘ನನ್ನ ಅನಿಸಿಕೆಗಳ ಹಿಂದೆ ಭಾರತೀಯ ಪೌರತ್ವ ಪಡೆವ ಉದ್ದೇಶವಿಲ್ಲ. ಪಾಕಿಸ್ತಾನ ತಮ್ಮ ಜನ್ಮಭೂಮಿಯಾಗಿದ್ದರೂ, ನಮ್ಮ ಪೂರ್ವಜರ ನಾಡು ಭಾರತ. ಅದು ನಮ್ಮ ಮಾತೃಭೂಮಿ. ಹೀಗಾಗಿ ಆ ಬಗ್ಗೆ ಟ್ವೀಟ್‌ ಮಾಡುತ್ತಿರುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಅ.8ಕ್ಕೆ ಬ್ರಿಟನ್ ಪ್ರಧಾನಿ ಸ್ಟಾರ್ಮರ್‌ ಭಾರತಕ್ಕೆ: ಮೊದಲ ಭೇಟಿ

ನವದೆಹಲಿ: ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅ.8 ಹಾಗೂ 9ಕ್ಕೆ ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.ಸ್ಟಾರ್ಮರ್ ಅ. 9ರಂದು ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜತೆ ವಿಸ್ತೃತ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ವ್ಯಾಪಾರ, ರಕ್ಷಣೆ, ಭಯೋತ್ಪಾದನೆ ನಿಗ್ರಹ, ಪ್ರಸಕ್ತ ಜಾಗತಿಕ ಪರಿಸ್ಥಿತಿ- ಮೊದಲಾದ ವಿಷಯಗಳ ಬಗ್ಗೆ ಸಮಾಲೋಚಿಸಲಿದ್ದಾರೆ.

ಜುಲೈನಲ್ಲಿ ಮೋದಿ ಲಂಡನ್‌ಗೆ ಭೇಟಿ ನೀಡಿದ ವೇಳೆ ಭಾರತ ಮತ್ತು ಬ್ರಿಟನ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಕ್ರಿಪ್ಟೋ ಕರೆನ್ಸಿ ವಂಚನೆ: ಬೆಂಗ್ಳೂರು ಸೇರಿ 5 ಕಡೆ ಸಿಬಿಐ ದಾಳಿ, 5 ಸೆರೆ 

 ನವದೆಹಲಿ :  ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬೆಂಗಳೂರು, ಹೈದರಾಬಾದ್‌, ದೆಹಲಿ ಎನ್‌ಸಿಆರ್‌ ಸೇರಿ ದೇಶದ 5 ನಗರಗಳ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದೆ. ಜೊತೆಗೆ ಹಲವು ಡಿಜಿಟಲ್‌ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಎಚ್‌ಪಿಜೆಡ್‌ ಕ್ರಿಪ್ಟೋ ಕರೆನ್ಸಿ ಕಂಪನಿ ಮೇಲೆ ವಂಚನೆ ಆರೋಪವಿದ್ದು, ಅದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ಕಂಪನಿಯು ಜನರಿಗೆ ಉದ್ಯೋಗ, ಸಾಲ, ಹೂಡಿಕೆ, ಕ್ರಿಪ್ಟೋ ಕರೆನ್ಸಿ ಯೋಜನೆ ಹೆಸರಿನಲ್ಲಿ ವಂಚಿಸಿ ಹಣ ಹೂಡಿಸಿಕೊಂಡು 2021ರಿಂದ 2023ರ ಅವಧಿಯಲ್ಲಿ ವಂಚನೆ ಮಾಡಿತ್ತು.ಈ ಬಗ್ಗೆ ಸಿಬಿಐ ಹೇಳಿಕೆ ನಿಡಿದ್ದು, ‘ಜನರಿಂದ ಹಣ ತೊಡಗಿಸಿಕೊಂಡು ಬೇನಾಮಿ ಕಂಪನಿಗಳ ಮೂಲಕ ಬೇನಾಮಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಲಾಗುತ್ತಿತ್ತು. ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪತಿವರ್ತಿಸಿ ವಿದೇಶಗಳಿಗೆ ವರ್ಗಾಯಿಸುತ್ತಿತ್ತು. ಈ ಜಾಲದಲ್ಲಿ ವಿದೇಶಿಗರ ಕೈವಾಡವೂ ಇದೆ’ ಎಂದು ತಿಳಿಸಿದೆ.

ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಅರ್ಚಕರಿಗೆ ಬೆದರಿಕೆ: ಇಬ್ಬರು ಸೆರೆ

ವಾರಾಣಸಿ: ದೇಗುಲದ ಧ್ವನಿವರ್ಧಕದಲ್ಲಿ ‘ಹನುಮಾನ್‌ ಚಾಲೀಸಾ’ ಹಾಕಿದ್ದಕ್ಕಾಗಿ ಅರ್ಚಕರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಇಲ್ಲಿನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಅರ್ಚಕ ಸಂಜಯ್‌ ಪ್ರಜಾಪತಿ ಇಲ್ಲಿನ ಮದನ್‌ಪುರದಲ್ಲಿ ದೇಗುಲದಲ್ಲಿ ಶುಕ್ರವಾರ ಹನುಮಾನ್‌ ಚಾಲೀಸಾ ಹಾಕಿದ್ದರು. ಈ ವೇಳೆ ಅಬ್ದುಲ್‌ ನಾಸಿರ್‌ ಮತ್ತು ಆತನ ಮಗ ಬಂದು ಪ್ರಜಾಪತಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಮತ್ತೊಂದಷ್ಟು ಜನರು ಬಂದು, ‘ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಘಟನೆ ಸಂಬಂದ ಅರ್ಚಕರು ನೀಡಿದ ದೂರಿನ ಮೇರೆಗೆ ಪೊಲೀಸರು ನಾಸಿರ್‌ ಮತ್ತು ಆತನ ಮಗನನ್ನು ಬಂಧಿಸಿದ್ದಾರೆ.

PREV
Read more Articles on

Recommended Stories

ಪಾಕ್‌ ದೂತಾವಾಸದಲ್ಲಿ ಭಾರತದ ವಿರುದ್ಧ ಗೂಢಚಾರಿಗಳ ನೇಮಕ?
ಮುಂದುವರಿದ ಗ್ಯಾರಂಟಿ ಭರಾಟೆ : ಪದವೀಧರರಿಗೆ ₹1000 ಭತ್ಯೆ - ಚಾಲಕರಿಗೆ ₹15000 ಫ್ರೀ