ಕೋಲ್ಕತಾ ವೈದ್ಯೆ ರೇಪ್‌ ಕೇಸಲ್ಲಿ ಮಹತ್ವದ ದಾಖಲೆ ನಾಪತ್ತೆ!

KannadaprabhaNewsNetwork |  
Published : Sep 10, 2024, 01:40 AM IST
 ಸುಪ್ರೀಂ | Kannada Prabha

ಸಾರಾಂಶ

ಇಡೀ ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ರಾಜಧಾನಿಯ ಸರ್ಕಾರಿ ಮೆಡಿಕಲ್‌ ಕಾಲೇಜೊಂದರಲ್ಲಿ ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ದಾಖಲೆಯೊಂದು ನಾಪತ್ತೆಯಾಗಿದೆ.

ಕೋಲ್ಕತಾ: ಇಡೀ ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ರಾಜಧಾನಿಯ ಸರ್ಕಾರಿ ಮೆಡಿಕಲ್‌ ಕಾಲೇಜೊಂದರಲ್ಲಿ ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ದಾಖಲೆಯೊಂದು ನಾಪತ್ತೆಯಾಗಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆದಾಗ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಪೀಠ, ‘ಶವವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸುವಾಗ ಪೋಸ್ಟ್‌ಮಾರ್ಟಂ ನಡೆಸುವ ವೈದ್ಯರಿಗೆ ಪೊಲೀಸರು ನೀಡಿದ ಫಾರ್ಮ್‌ ಎಲ್ಲಿದೆ?’ ಎಂದು ಪ್ರಶ್ನಿಸಿದರು. ಆ ಫಾರ್ಮ್‌ನಲ್ಲಿ ಶವದ ಮೈಮೇಲೆ ಇದ್ದ ಬಟ್ಟೆ ಇತ್ಯಾದಿ ಪರಿಕರಗಳ ವಿವರವಿರುತ್ತದೆ. ಇದು ಮಹತ್ವದ ದಾಖಲೆಯಾಗಿದ್ದು, ಇದನ್ನು ಪೊಲೀಸರು ನೀಡುವುದು ಕಡ್ಡಾಯವಾಗಿರುತ್ತದೆ. ಏಕೆಂದರೆ ಶವದ ಮೈಮೇಲಿನ ಬಟ್ಟೆಯೂ ಪ್ರಮುಖ ಸಾಕ್ಷ್ಯವಾಗಿರುತ್ತದೆ.

ಆದರೆ, ನ್ಯಾಯಮೂರ್ತಿಗಳು ಕೇಳಿದಾಗ ‘ಈ ದಾಖಲೆ ನಮ್ಮ ಬಳಿ ಇಲ್ಲ’ ಎಂದು ಬಂಗಾಳ ಸರ್ಕಾರದ ಪರ ವಕೀಲ ಕಪಿಲ್‌ ಸಿಬಲ್‌ ತಿಳಿಸಿದರು. ಇದೇ ವೇಳೆ, ಸಿಬಿಐ ಪರ ವಕೀಲರು, ‘ಬಂಗಾಳ ಪೊಲೀಸರು ಪ್ರಕರಣವನ್ನು ನಮಗೆ ಹಸ್ತಾಂತರಿಸುವಾಗ ಈ ದಾಖಲೆ ನೀಡಿಲ್ಲ’ ಎಂದು ಮಾಹಿತಿ ನೀಡಿದರು. ಹಾಗಿದ್ದರೆ ದಾಖಲೆ ಎಲ್ಲಿದೆ ಎಂಬ ಪ್ರಶ್ನೆ ಎದುರಾಯಿತು.

ಮರಣೋತ್ತರ ಪರೀಕ್ಷೆ ನಡೆಸುವವರು ತಮ್ಮಲ್ಲಿರುವ ದಾಖಲೆಯಲ್ಲಿ ಸದರಿ ಫಾರ್ಮ್‌ ಬಗ್ಗೆ ಉಲ್ಲೇಖಿಸಬೇಕಾದ ಕಾಲಂನಲ್ಲಿ ಕಾಟು ಹಾಕಿರುವುದು ಕೂಡ ಕಂಡುಬಂದಿತು. ಅಂದರೆ ಈ ದಾಖಲೆಯೇ ನಾಪತ್ತೆಯಾಗಿರುವ ಶಂಕೆ ಮೂಡಿದ್ದು, ಈಗ ಅದು ಎಲ್ಲೋ ಇದೆ ಅಂತಾದರೆ ಅದನ್ನು ತಿರುಚಿರುವ ಸಾಧ್ಯತೆಯಿದೆ ಎಂಬ ಅನುಮಾನವೂ ನ್ಯಾಯಾಲಯದಲ್ಲಿ ವ್ಯಕ್ತವಾಯಿತು. ಕೊನೆಗೆ, ಆ ದಾಖಲೆಯನ್ನು ಮುಂದಿನ ವಿಚಾರಣೆಯಲ್ಲಿ ಹಾಜರುಪಡಿಸಬೇಕೆಂದು ಸುಪ್ರೀಂಕೋರ್ಟ್‌ ಸೂಚಿಸಿ ಸೆ.17ಕ್ಕೆ ವಿಚಾರಣೆ ಮುಂದೂಡಿತು.

ಸಿಐಎಸ್‌ಎಫ್‌ಗೆ ಸೌಲಭ್ಯಕ್ಕೆ ಸೂಚನೆ:

ಈ ನಡುವೆ, ತನ್ನ ಸೂಚನೆಯಂತೆ ಆರ್‌ಜಿ ಕರ್‌ ಆಸ್ಪತ್ರೆಗೆ ಭದ್ರತೆ ನೀಡಿರುವ ಸಿಐಎಸ್‌ಎಫ್ ಯೋಧರಿಗೆ ವಾಸ್ತವ್ಯ ಸೇರಿದಂತೆ ಸಕಲ ಸೌಲಭ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟು, ಬಂಗಾಳ ಸರ್ಕಾರಕ್ಕೆ ಸೂಚಿಸಿತು.

ಇಂದು ಸಂಜೆ 5ರೊಳಗೆ ಕೆಲಸಕ್ಕೆ ಮರಳಿ: ವೈದ್ಯರಿಗೆ ಸುಪ್ರೀಂ ಸೂಚನೆನವದೆಹಲಿ: ಕೋಲ್ಕತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರುಮಂಗಳವಾರ ಸಂಜೆ 5 ಗಂಟೆಯೊಳಗೆ ಕೆಲಸಕ್ಕೆ ಮರಳಬೇಕು. ಇಲ್ಲದಿದ್ದರೆ, ಅವರು ಪ್ರತಿಕೂಲ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳದೆ.ದೇಶವನ್ನು ಬೆಚ್ಚಿಬೀಳಿಸಿದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ‘ವೈದ್ಯರ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಹಣ ಮಂಜೂರು ಮಾಡಲಾಗಿದೆ ಎಂದು ಬಂಗಾಳ ಸರ್ಕಾರ ಹೇಳಿದೆ. ಹೀಗಾಗಿ ಮಂಗಳವಾರ ಸಂಜೆ 5 ಗಂಟೆಗೆ ವೈದ್ಯರು ಕೆಲಸಕ್ಕೆ ಬಂದರೆ ಯಾವುದೇ ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಸೌಲಭ್ಯಗಳನ್ನು ನೀಡಿದ ಹೊರತಾಗಿಯೂ ನಿರಂತರವಾಗಿ ಕೆಲಸಕ್ಕೆ ಗೈರುಹಾಜರಾದರೆ, ಕ್ರಮ ಜರುಗಿಸುವ ಸಾಧ್ಯತೆಯಿದೆ’ ಎಂದರು.‘ಒಂದು ವೇಳೆ ವೈದ್ಯರು ಕೆಲಸಕ್ಕೆ ಮರಳದಿದ್ದರೆ, ಶಿಸ್ತು ಕ್ರಮ ತೆಗೆದುಕೊಳ್ಳುವುದನ್ನು ನಾವು ತಡೆಯಲು ಸಾಧ್ಯವಿಲ್ಲ’ ಎಂದರು.ಇದಕ್ಕೂ ಮುನ್ನ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ವೈದ್ಯರ ಮುಷ್ಕರದ ಕಾರಣ ಚಿಕಿತ್ಸೆ ಸಿಗದೇ ಈವರೆಗೆ 23 ರೋಗಿಗಳು ಮೃತಪಟ್ಟಿದ್ದಾರೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ