ನವದೆಹಲಿ: ಜಾಲತಾಣದಲ್ಲಿ ಆರೋಪ ಮಾಡಿದವರನ್ನೆಲ್ಲಾ ಜೈಲಿಗೆ ಹಾಕಲಾಗದು. ಚುನಾವಣೆ ಮುಗಿಯುವ ಮುನ್ನ ಹೀಗೆ ಜನರನ್ನು ಜೈಲಿಗೆ ಹಾಕುತ್ತಾ ಹೋದರೆ, ಎಷ್ಟು ಜನರನ್ನು ಜೈಲಿಗೆ ಹಾಕಬೇಕಾಗುತ್ತದೆ ಎಂದು ಸುಪ್ರೀಂಕೊರ್ಟ್ ಪ್ರಶ್ನಿಸಿದೆ. ಅಲ್ಲದೆ ಇಂಥದ್ದ ಪ್ರಕರಣದಲ್ಲಿ ತಮಿಳನಾಡಿನ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಆರೋಪ ಮಾಡಿದ್ದ ಯೂಟ್ಯೂಬರ್‌ಗೆ ಜಾಮೀನು ನೀಡಿದೆ.
ಎ. ದುರೈಮುರುಗನ್ ಸತ್ತಾಯ್ ಎಂಬ ಯೂಟ್ಯೂಬರ್, 2021ರಲ್ಲಿ ಸ್ಟಾಲಿನ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಈ ಕೇಸಲ್ಲಿ ಸತ್ತಾಯ್‌ರನ್ನು ಬಂಧಿಸಿ ಬಳಿಕ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಬಿಡುಗಡೆ ಬಳಿಕ ಅವರು ಷರತ್ತು ಉಲ್ಲಂಘಿಸಿದ್ದಾರೆ ಎಂದು ಬಂಧಿಸಲಾಗಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು.ಇದನ್ನು ಪ್ರಶ್ನಿಸಿ ಸತ್ತಾಯ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಅಭಯ್ ಎಸ್ ಓಕಾ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠ, ‘ವೈಜ್ಞಾನಿಕ ಸಂಶೋಧನೆಗಳು ಮನುಕುಲದ ಒಳಿತಾಗಿ ಮಾಡಿರುವುದು. ಅಂತರ್ಜಾಲ ಕೂಡಾ ಅಂಥದ್ದೇ ಒಂದು ಅದ್ಭುತ ಸಂಶೋಧನೆ. ಇದು ಹಲವರ ಜೀವನವನ್ನು ಬದಲಾಯಿಸಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಕೂಡಾ ತನ್ನ ದೈನಂದಿನ ಆಗು, ಕೌಶಲ್ಯಗಳನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸುತ್ತಾನೆ. ಇಂದಿನ ಸಮಾಜದಲ್ಲಿ ಬಹುತೇಕ ಜನರ ಮನೆಯಲ್ಲಿ ಯೂಟ್ಯೂಬ್ ನೋಡಿಯೇ ಅಡುಗೆ ಸಿದ್ಧಪಡಿಸುವ ಸಂಪ್ರದಾಯ ಬೆಳೆದಿದೆ’ ಎಂದಿತು.
‘ ಹೀಗಾಗಿರುವ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಎಲ್ಲರನ್ನೂ ಬಂಧಿಸುತ್ತಾ ಕೂರಲಾಗದು. ಹಾಗೆ ಮಾಡಿದರೆ ಚುನಾವಣೆ ಮುಗಿಯುವ ಮುನ್ನ ಎಷ್ಟು ಜನರನ್ನು ಜೈಲಿಗೆ ಹಾಕಬೇಕಾಗುತ್ತದೆ ಎಂದು ಹೇಳಿ..’ ಎಂದು ಸತ್ತಾಯ್ ಜಾಮೀನು ಅರ್ಜಿ ವಿರೋಧಿಸಿದ್ದ ತಮಿಳುನಾಡು ಸರ್ಕಾರಕ್ಕೆ ಪ್ರಶ್ನೆ ಮಾಡಿತು. ಜೊತೆಗೆ ಜಾಮೀನು ನೀಡುವುದಾದರೆ ಷರತ್ತು ವಿಧಿಸಬೇಕೆಂಬ ಬೇಡಿಕೆಯನ್ನೂ ತಳ್ಳಿಹಾಕಿತು.