ಬಂಗಾಳದಲ್ಲಿ ಅತ್ಯಧಿಕ ಸೀಟು ಬಿಜೆಪಿಗೆ: ಪ್ರಶಾಂತ್‌ ಕಿಶೋರ್‌

KannadaprabhaNewsNetwork |  
Published : Apr 09, 2024, 12:47 AM ISTUpdated : Apr 09, 2024, 04:01 AM IST
ಪ್ರಶಾಂತ್ ಕಿಶೋರ್‌ | Kannada Prabha

ಸಾರಾಂಶ

ತಮಿಳ್ನಾಡು, ತೆಲಂಗಾಣದಲ್ಲೂ ಬಿಜೆಪಿ ಮ್ಯಾಜಿಕ್‌ ಮಾಡಲಿದೆ ಎಂಬುದಾಗಿ ಬಿಜೆಪಿ ವಿರೋಧಿ ರಣತಂತ್ರಗಾರನಿಂದಲೇ ಭವಿಷ್ಯ ನುಡಿಯಲಾಗಿದೆ.

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 370ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಗುರಿ ರೂಪಿಸಿಕೊಂಡಿರುವ ಬಿಜೆಪಿ, ಇದುವರೆಗೂ ದುರ್ಬಲ ಎಂದು ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣದಲ್ಲಿ ಅಚ್ಚರಿಯ ಸಾಧನೆ ಮಾಡಲಿದೆ ಎಂದು ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿದಿದ್ದಾರೆ.

ಕೆಲ ವರ್ಷಗಳಿಂದ ಬಿಜೆಪಿಯ ವಿರೋಧಿಗಳ ಪರ ಚುನಾವಣಾ ರಣತಂತ್ರ ರೂಪಿಸುತ್ತಿರುವ ಅವರಿಂದಲೇ ಈ ಹೇಳಿಕೆ ಬಂದಿರುವುದು ವಿಶೇಷವಾಗಿದೆ.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪ್ರಶಾಂತ್‌ ಕಿಶೋರ್‌, ‘ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಈ ಬಾರಿ ಬಿಜೆಪಿ ಮೊದಲ ಸ್ಥಾನದಲ್ಲಿ ಇರಲಿದೆ. ತೆಲಂಗಾಣದಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಪಡೆಯಲಿದೆ. ಇನ್ನು ತಮಿಳುನಾಡಿನಲ್ಲಿ ಮೊಟ್ಟಮೊದಲ ಬಾರಿಗೆ ಅದು ಪಡೆಯುವ ಒಟ್ಟು ಮತ ಎರಡಂಕಿ ದಾಟಲಿದೆ’ ಎಂದರು.

370 ಕಷ್ಟ:‘ಆದರೆ ಬಿಜೆಪಿ 370 ಸ್ಥಾನ ದಾಟುವುದು ಕಷ್ಟವಾಗವಾಬಹುದು. ಏಕೆಂದರೆ ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳ ರಾಜ್ಯಗಳು ಲೋಕಸಭೆಯ 543 ಸ್ಥಾನಗಳ ಪಕಿ 204 ಸ್ಥಾನ ಹೊಂದಿವೆ. 2014ರಲ್ಲಿ ಈ 204ರ ಪೈಕಿ ಬಿಜೆಪಿ 29 ಸ್ಥಾನ ಗೆದ್ದಿದ್ದರೆ, 2019ರಲ್ಲಿ 47 ಸ್ಥಾನವಷ್ಟೇ ಗೆದ್ದಿತ್ತು.’‘ಬಿಜೆಪಿ ಈವರೆಗೂ ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ತನ್ನ ಪ್ರಭಾವ ಮುಂದುವರೆಸಿಕೊಂಡು ಬಂದಿದೆ. ಆದರೆ ಮೇಲ್ಕಂಡ 204 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಪ್ರಬಲ ಹೋರಾಟ ನೀಡಿ ಕನಿಷ್ಠ 100 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಖಚಿತಪಡಿಸಿದರೆ ಬಿಜೆಪಿ 370ರ ಗಡಿ ದಾಟುವುದು ಕಷ್ಟ’ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.ರಣತಂತ್ರ:

ಇದೇ ವೇಳೆ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅನುಸರಿಸುತ್ತಿರುವ ರಣತಂತ್ರದ ಬಗ್ಗೆಯೂ ವಿಶ್ಲೇಷಣೆ ಮಾಡಿರುವ ಪ್ರಶಾಂತ್‌ ಕಿಶೋರ್‌, ‘ಕಳೆದ 5 ವರ್ಷಗಳಲ್ಲಿ ಮೋದಿ ಎಷ್ಟು ಬಾರಿ ತಮಿಳುನಾಡಿಗೆ ಭೇಟಿ ನೀಡಿದ್ದಾರೆ ಗೊತ್ತೇ? ಅದೇ ಇನ್ನೊಂದೆಡೆ ರಾಹುಲ್‌ ಗಾಂಧಿ, ಸೋನಿಯಾ ಅಥವಾ ಇತರೆ ಯಾವುದೇ ವಿಪಕ್ಷಗಳ ನಾಯಕರ ಭೇಟಿಯನ್ನು ಹೋಲಿಸಿ ನೋಡಿ. ನೀವು ದೊಡ್ಡ ಚುನಾವಣೆ ಎದುರಿಸುತ್ತಿರುವುದು ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ಮೊದಲಾದ ರಾಜ್ಯಗಳಲ್ಲಿ. ಆದರೆ ನೀವು ಮಣಿಪುರ, ಮೇಘಾಲಯ ಪ್ರವಾಸ ಮಾಡುತ್ತಿದ್ದೀರಿ’ ಎಂದು ಹೆಸರು ಹೇಳದೆಯೇ ರಾಹುಲ್ ಗಾಂಧಿ ತಂತ್ರದ ಬಗ್ಗೆ ಪ್ರಶ್ನೆ ಮಾಡಿದರು.ಇದೇ ವೇಳೆ ರಾಹುಲ್ ಗಾಂಧಿ ಅಮೇಠಿಯಲ್ಲಿ ಸ್ಪರ್ಧೆ ಮಾಡಲು ಹಿಂಜರಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್, ‘ನೀವು ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ಗೆಲ್ಲದೇ ಹೋದಲ್ಲಿ, ನೀವು ವಯನಾಡಿನಲ್ಲಿ ಗೆದ್ದು ಏನೂ ಪ್ರಯೋಜನ ಇಲ್ಲ.ಅಮೇಠಿಯನ್ನು ಬಿಟ್ಟುಕೊಡುವುದು ವ್ಯೂಹಾತ್ಮಕವಾಗಿ ತಪ್ಪು ಸಂದೇಶ ರವಾನಿಸುತ್ತದೆ ಎಂದು ಹೇಳಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !