12 ವರ್ಷದಲ್ಲಿ ಅಸಾಧ್ಯವನ್ನು ಸಾಧ್ಯ ಮಾಡಿದ್ದೇವೆ : ಮೋದಿ

Published : Nov 22, 2026, 01:31 PM IST
PM Modi

ಸಾರಾಂಶ

‘ಮಾನಸಿಕ ಅಡೆತಡೆಗಳನ್ನು ಮುರಿಯುವ ಮೂಲಕ ದೇಶದ ಸಾಮರ್ಥ್ಯವನ್ನು ಅನಾವರಣಗೊಳಿಸಲು, ಅವಕಾಶಗಳನ್ನು ಸೃಷ್ಟಿಸಲು ಮತ್ತು ಬಡವರನ್ನು ಸಬಲೀಕರಣಗೊಳಿಸಲು ಸಾಧ್ಯ ಎಂಬುದನ್ನು ಭಾರತ ಕಳೆದ 12 ವರ್ಷಗಳಲ್ಲಿ ತೋರಿಸಿಕೊಟ್ಟಿದೆ’

ಖರಗ್‌ಪುರ (ಪ. ಬಂಗಾಳ) : ‘ಮಾನಸಿಕ ಅಡೆತಡೆಗಳನ್ನು ಮುರಿಯುವ ಮೂಲಕ ದೇಶದ ಸಾಮರ್ಥ್ಯವನ್ನು ಅನಾವರಣಗೊಳಿಸಲು, ಅವಕಾಶಗಳನ್ನು ಸೃಷ್ಟಿಸಲು ಮತ್ತು ಬಡವರನ್ನು ಸಬಲೀಕರಣಗೊಳಿಸಲು ಸಾಧ್ಯ ಎಂಬುದನ್ನು ಭಾರತ ಕಳೆದ 12 ವರ್ಷಗಳಲ್ಲಿ ತೋರಿಸಿಕೊಟ್ಟಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಜತೆಗೆ, ‘ಚಾಲೆಂಜ್‌ಗಳಿಗೆ ಚಾಲೆಂಜ್‌ ಮಾಡುವುದು ನನ್ನ ಸ್ವಭಾವ’ ಎಂದು ಅವರು ನುಡಿದಿದ್ದಾರೆ.

ಖರಗ್‌ಪುರದಲ್ಲಿರುವ ದೇಶದ ಮೊದಲ ಐಐಟಿಯ ಪ್ಲಾಟಿನಂ (70 ವರ್ಷ) ಮಹೋತ್ಸದಲ್ಲಿ ಮಾತನಾಡಿದ ಅವರು. ‘ವಿಕಸಿತ ಭಾರತದ ಕನಸನ್ನು ನನಸಾಗಿಸುವಲ್ಲಿ ಮುಂದಿನ 2 ದಶಕಗಳು ನಿರ್ಣಾಯಕವಾಗಲಿವೆ. ಮಿತಿಗಳನ್ನು ಮೀರಿ, ಹೊಸ ಸಾಧ್ಯತೆಗಳನ್ನು ತೆರೆಯುವ ಸಂಕಲ್ಪವನ್ನು ಭಾರತ ಘೋಷಿಸಿದೆ. ನಮ್ಮ ಸಾಮರ್ಥ್ಯವು, ಸವಾಲುಗಳನ್ನು ಎದುರಿಸಲು ಎಷ್ಟು ಧೈರ್ಯದಿಂದ ಮುಂದಾಗುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ’ ಎಂದರು.

ಸವಾಲಿಗೇ ಸವಾಲೆಸೆಯುವೆ:

‘ಜನರು ಆಗಾಗ ಸವಾಲುಗಳ ಬಗ್ಗೆ ನನ್ನ ಬಳಿ ಕೇಳುತ್ತಾರೆ. ಆಗ ನಾನು, ಸವಾಲುಗಳಿಗೇ ಸವಾಲೆಸೆಯುವುದು ನನ್ನ ಸ್ವಭಾವ ಎನ್ನುತ್ತೇನೆ’ ಎಂದ ಮೋದಿ, ‘ಬೃಹತ್‌ ಜನಸಂಖ್ಯೆಯಿರುವ ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲಾಗದ ಸವಾಲು ಎಂದು 20 ವರ್ಷಗಳ ಹಿಂದಿನ ಸರ್ಕಾರಗಳು ಯೋಚಿಸುತ್ತಿದ್ದವು. 50 ವರ್ಷಗಳ ಹಿಂದೆ ಬಡತನ ನಿರ್ಮೂಲನೆಯ ಘೋಷಣೆಗಳು ಮೊಳಗಿದ್ದವಾದರೂ ಅದನ್ನು ಸಾಕಾರಗೊಳಿಸಲಾಗಲಿಲ್ಲ. ನಾನು ಬಡವರಿಗಾಗಿ ಶೌಚಾಲಯಗಳನ್ನು ನಿರ್ಮಿಸುವುದಾಗಿ ಹೇಳಿದಾಗ ಎಲ್ಲರೂ ವ್ಯಂಗ್ಯವಾಡಿದ್ದರು. ಈ ಮನಸ್ಥಿತಿಯನ್ನು ಕಳೆದ 12 ವರ್ಷಗಳಲ್ಲಿ ಬದಲಾಯಿಸಿದ್ದೇವೆ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಹಾರದಲ್ಲಿ ನಿತೀಶ್‌ ಹೆಸರಿನ ಸೇತುವೆ ಉದ್ಘಾಟಿಸಿದ ಮೋದಿ

ಹಾಜಿಪುರ: ಬಿಹಾರದ ವೈಶಾಲಿ ಜಿಲ್ಲೆಯ ಗಂಗಾ ನದಿ ತಟದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೆಸರಿನ ಸೇತುವೆ ‘ನಿತೀಶ್‌ ಸೇತು’ವನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಉತ್ತರ ಹಾಗೂ ದಕ್ಷಿಣ ಬಿಹಾರದ ನಡುವೆ ಈ ಸೇತುವೆ ಕೊಂಡಿಯಾಗಿ ಕೆಲಸ ಮಾಡಲಿದೆ.

ವೈಶಾಲಿಯ ಬಿಡುಪುರ ಬ್ಲಾಕ್‌ನಿಂದ ಪಟನಾದ ಹೊರವಲಯದಲ್ಲಿರುವ ಕಚ್ಚಿ ದರ್ಗಾ ಸಂಪರ್ಕಿಸುವ 6 ಪಥದ ಸೇತುವೆಗೆ ನಿತೀಶ್‌ ಕುಮಾರ್‌ ಗೌರವಾರ್ಥ ‘ನಿತೀಶ್‌ ಸೇತು’ ಎಂದು ಹೆಸರಿಡಲಾಗಿದೆ. ಇದಕ್ಕೆ 4,280 ಕೋಟಿ ರು. ವೆಚ್ಚ ಮಾಡಲಾಗಿದೆ. ನಿತೀಶ್ ಸಿಎಂ ಆಗಿದ್ದಾಗ ಇದರ ನಿರ್ಮಾಣಕ್ಕೆ ತುಂಬಾ ಮುತುವರ್ಜಿ ವಹಿಸಿದ್ದರು.

ರಾಜ್ಯಪಾಲ ಸೈಯದ್ ಅತಾ ಹಸ್ನೈನ್, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಭಾಗವಹಿಸಿದ್ದರು,

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ ದೇಣಿಗೆ - ನ.26ರಂದು ಸಮರ್ಪಣೆ
ಕೇವಲ 3 ತಿಂಗಳಲ್ಲಿ 10 ಗ್ರಾಂಗೆ 30000 ಇಳಿದ ಚಿನ್ನದ ದರ!