ಮಧ್ಯಪ್ರದೇಶದ ಛಿಂದ್ವಾಡ ಜಿಲ್ಲೆಯಲ್ಲಿ ದೇಶದಲ್ಲಿ ಮೊದಲ ಬಾರಿ ಬೆಕ್ಕುಗಳಲ್ಲಿ ಹಕ್ಕಿ ಜ್ವರ ಪತ್ತೆ

KannadaprabhaNewsNetwork | Updated : Feb 28 2025, 06:11 AM IST

ಸಾರಾಂಶ

ಮಧ್ಯಪ್ರದೇಶದ ಛಿಂದ್ವಾಡ ಜಿಲ್ಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬೆಕ್ಕುಗಳಲ್ಲಿ ಹಕ್ಕಿ ಜ್ವರ (ಎಚ್‌5ಎನ್‌1) ಪ್ರಕರಣ ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು, ಅಪಾರ ಸಂಖ್ಯೆ ಕೋಳಿಗಳಲ್ಲಿ ಕಾಣಿಸಿಕೊಂಡಿದ್ದ ಎಚ್‌5ಎನ್‌1 ಜ್ವರದ ತಳಿಯಾಗಿದ್ದು, 2.3.2.1 ವಂಶಾವಳಿಗೆ ಸೇರಿದೆ.

ಪುಣೆ: ಮಧ್ಯಪ್ರದೇಶದ ಛಿಂದ್ವಾಡ ಜಿಲ್ಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬೆಕ್ಕುಗಳಲ್ಲಿ ಹಕ್ಕಿ ಜ್ವರ (ಎಚ್‌5ಎನ್‌1) ಪ್ರಕರಣ ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು, ಅಪಾರ ಸಂಖ್ಯೆ ಕೋಳಿಗಳಲ್ಲಿ ಕಾಣಿಸಿಕೊಂಡಿದ್ದ ಎಚ್‌5ಎನ್‌1 ಜ್ವರದ ತಳಿಯಾಗಿದ್ದು, 2.3.2.1 ವಂಶಾವಳಿಗೆ ಸೇರಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಛಿಂದ್ವಾಡ ಗಡಿಗೆ ಹೊಂಡಿಕೊಂಡಿರುವ ಮಹಾರಾಷ್ಟ್ರದ ನಾಗ್ಪುರದಲ್ಲಿ ಹಲವು ಹುಲಿಗಳು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದವು. ಅದರ ಬೆನ್ನಲ್ಲೇ, ಇದೀಗ ಬೆಕ್ಕುಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಆತಂಕವನ್ನು ಹೆಚ್ಚಿಸಿದೆ.

ಲಕ್ಷಣಗಳೇನು?:ಹಕ್ಕಿ ಜ್ವರ ಸೋಂಕಿತ ಬೆಕ್ಕುಗಳಲ್ಲಿ ಜ್ವರ, ಹಸಿವಿನ ಕೊರತೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಆಲಸ್ಯದಂತಹ ಲಕ್ಷಣಗಳು ಕಂಡುಬಂದಿದ್ದವು. ಬೆಕ್ಕುಗಳಲ್ಲಿ ಕಂಡುಬಂದ ವೈರಸ್‌ನಲ್ಲಿ 27 ರೂಪಾಂತರಿಗಳನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ.

ಮನುಷ್ಯರ ಮೇಲೇನು ಪರಿಣಾಮ?:ಎಚ್‌5ಎನ್‌1 ಎಂಬುದು ಹಕ್ಕಿ ಜ್ವರವಾದರೂ, ಅದರ ರೂಪಾಂತರಿಗಳು ಸಸ್ತನಿಗಳಲ್ಲೂ ಕಾಣಿಸಿಕೊಳ್ಳಬಲ್ಲವು. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆಯಿದ್ದರೂ, ಇದು ಸಾಂಕ್ರಾಮಿಕವಾಗಿ, ಕೋವಿಡ್ -19ನಂತೆ ಏಕಾಏಕಿ ಉಲ್ಬಣಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಆತಂಕ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ, ಕೋಳಿ ಫಾರ್ಮ್‌, ಕಾಡು ಹಕ್ಕಿಗಳ ಜೊತೆಗೆ, ಮನುಷ್ಯರು ಸೇರಿದಂತೆ ಸಾಕು ಪ್ರಾಣಿಗಳಂತಹ ಸಸ್ತನಿಗಳ ಮೇಲಿನ ನಿಗಾವನ್ನು ಹೆಚ್ಚಿಸಲಾಗಿದೆ.

ಬಿಜೆಪಿ ಸೇರಲ್ಲ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಸ್ಪಷ್ಟನೆ

ಕೋಲ್ಕತಾ: ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಬಂಧು ಅಭಿಷೇಕ್‌ ಬ್ಯಾನರ್ಜಿ, ತಾವು ಬಿಜೆಪಿ ಸೇರುವುದಾಗಿ ಹರಡಿರುವ ಸುದ್ದಿಗಳನ್ನು ನಿರಾಕರಿಸಿದ್ದಾರೆ. ಅಲ್ಲದೆ ಮಮತಾ ಬ್ಯಾನರ್ಜಿ ಅವರ ಜೊತೆಗೆ ಭಿನ್ನಾಭಿಪ್ರಾಯ ಇದೆ ಎನ್ನುವ ವದಂತಿಯನ್ನು ಕೂಡ ತಳ್ಳಿಹಾಕಿದ್ದಾರೆ.

ಗುರುವಾರ ಪಕ್ಷದ ಸಮ್ಮೇಳನದಲ್ಲಿ ಈ ಬಗ್ಗೆ ಮಾತನಾಡಿದ ಅಭಿಷೇಕ್, ‘ನಾನು ಟಿಎಂಸಿಯ ನಿಷ್ಠಾವಂತ ನಾಯಕ. ಮಮತಾ ಬ್ಯಾನರ್ಜಿ ನಮ್ಮ ನಾಯಕರು. ನನ್ನ ಕುತ್ತಿಗೆಯನ್ನು ಸೀಳಿದರೂ ನಾನು ‘ಮಮತಾ ಬ್ಯಾನರ್ಜಿ ಜಿಂದಾಬಾದ್‌’ ಎನ್ನುವೆ. ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಅವರು ಸ್ವಾರ್ಥದಿಂದ ಈ ರೀತಿ ಮಾಡುತ್ತಿದ್ದಾರೆ. ಪಕ್ಷದಲ್ಲಿನ ಅಂಥ ದ್ರೋಹಿಗಳ ಬಣ್ಣ ಬಯಲು ಮಾಡುವೆ’ ಎಂದರು.

ಗೋಡ್ಸೆ ಹೊಗಳಿದ ಪ್ರಾಧ್ಯಾಪಕಿಗೆ ಎನ್‌ಐಟಿ ಕ್ಯಾಲಿಕಟ್‌ ಡೀನ್ ಹುದ್ದೆ: ವಿವಾದ

ನವದೆಹಲಿ: ಮಹಾತ್ಮ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್‌ಐಟಿ)-ಕ್ಯಾಲಿಕಟ್‌ನ ಪ್ರಾಧ್ಯಾಪಕರೊಬ್ಬರನ್ನು ಕೇಂದ್ರ ಸರ್ಕಾರ ಡೀನ್ ಆಗಿ ನೇಮಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದು ಮೋದಿ ಸರ್ಕಾರದ ಗಾಂಧಿ ವಿರೋಧಿ ಹಾಗೂ ಗೋಡ್ಸೆ ವೈಭವೀಕರಣ ಮನಸ್ಥಿತಿಯ ಭಾಗವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.ಎನ್‌ಐಟಿ-ಕ್ಯಾಲಿಕಟ್‌ನ ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ, ಡಾ. ಶೈಜಾ ಎ. ಅವರನ್ನು ಮಾ.7ರಿಂದ ಜಾರಿಗೆ ಬರುವಂತೆ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ. ಗೋಡ್ಸೆಯನ್ನು ಹೊಗಳಿದ ಆರೋಪದ ಮೇಲೆ ಶೈಜಾ ವಿರುದ್ಧ ಪೊಲೀಸ್ ಪ್ರಕರಣ ಬಾಕಿ ಇದೆ.

ಸತತ 9ನೇ ವರ್ಷವೂ ಜಪಾನಿನಲ್ಲಿ ಜನನ ದರ ಕುಸಿತ

ಟೋಕಿಯೊ: ಜಪಾನಿನಲ್ಲ ಜನನ ಪ್ರಮಾಣದ ದರ ಕುಸಿತ ಮುಂದುವರೆದಿದ್ದು, ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಜಪಾನಿನಲ್ಲಿ ಕಳೆದ ವರ್ಷ ಜನಿಸಿರುವ ಮಕ್ಕಳ ಪ್ರಮಾಣ 9 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಟ ಮಟ್ಟದಾಗಿದೆ.ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯದ ಪ್ರಕಾರ, 2024ರಲ್ಲಿ ಜಪಾನಿನಲ್ಲಿ 7,20, 998 ಶಿಶುಗಳ ಜನನವಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.5ರಷ್ಟು ಕಡಿಮೆ. ಜಪಾನಿನಲ್ಲಿ ಜನಗಣತಿ ಆರಂಭವಾದ 1899ರಿಂದ ಅಂಕಿ ಅಂಶಗಳನ್ನು ತೆಗೆದುಕೊಂಡರೆ ಇದು ಇದುವರೆಗಿನ ಅತ್ಯಂತ ಕನಿಷ್ಟ ಮಟ್ಟದಾಗಿದೆ. ಈ ವರ್ಷದ ಅಂತ್ಯಕ್ಕೆ ಶಿಶುಗಳ ಜನನ ಪ್ರಮಾಣ 7 ಲಕ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ದೇಶದ ಜನಸಂಖ್ಯೆಯೂ 2027ರ ವೇಳೆಗೆ ಸುಮಾರು ಶೇ.30ರಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು, 8.70 ಕೋಟಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

Share this article