ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳದಿಂದ ಇಡೀ ವಿಶ್ವವೇ ಚಕಿತ : ಮೋದಿ

KannadaprabhaNewsNetwork | Updated : Feb 28 2025, 06:13 AM IST

ಸಾರಾಂಶ

ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭಮೇಳಕ್ಕೆ ತೆರೆ ಬಿದ್ದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಸ ಹಾಗೂ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಕುಂಭಮೇಳವನ್ನು ಮಹಾಯಜ್ಞ ಎಂದಿರುವ ಅವರು, ‘ಈ ಮೇಳೆ ಆಯೋಜನೆ ವಿಶ್ವವನ್ನೇ ಚಕಿತಗೊಳಿಸಿದೆ’ ಎಂದಿದ್ದಾರೆ.

ನವದೆಹಲಿ: ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭಮೇಳಕ್ಕೆ ತೆರೆ ಬಿದ್ದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಸ ಹಾಗೂ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಕುಂಭಮೇಳವನ್ನು ಮಹಾಯಜ್ಞ ಎಂದಿರುವ ಅವರು, ‘ಈ ಮೇಳೆ ಆಯೋಜನೆ ವಿಶ್ವವನ್ನೇ ಚಕಿತಗೊಳಿಸಿದೆ’ ಎಂದಿದ್ದಾರೆ.

ಅಲ್ಲದೆ, ‘ಗುಲಾಮಿ ಮನಸ್ಥಿತಿಯಿಂದ ಬಿಡುಗಡೆಗೊಂಡ ದೇಶವೊಂದು ಸ್ವಚ್ಛಂದವಾಗಿ ಉಸಿರಾಡುವಂತೆ ಮಹಾಕುಂಭಮೇಳದ ಬಳಿಕ ಭಾರತ ಹೊಸ ಪ್ರಜ್ಞೆಯಿಂದ ಉಸಿರಾಡುತ್ತಿರುವಂತಿತ್ತು. ಈಗ ಆಗಿರುವುದು ಕಳೆದ ಕೆಲ ದಶಕಗಳಲ್ಲಿ ಆಗಿರಲೇ ಇಲ್ಲ. ಇದು ಮುಂಬರುವ ಶತಮಾನಗಳಿಗೆ ಅಡಿಪಾಯವಿದ್ದಂತೆ’ ಎಂದು ಗುರುವಾರ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಭಾರತವು ಈಗ ಹೊಸ ಶಕ್ತಿಯೊಂದಿಗೆ ಮುನ್ನುಗ್ಗುತ್ತಿದ್ದು, ಇದು ದೇಶಕ್ಕೆ ಹೊಸ ಭವಿಷ್ಯವನ್ನು ಬರೆಯುವ ಯುಗದ ಬದಲಾವಣೆಯನ್ನು ಸೂಚಿಸುತ್ತದೆ. ದೇಶವು ಇದೇ ಆತ್ಮವಿಶ್ವಾಸ ಹಾಗೂ ಒಗ್ಗಟ್ಟಿನೊಂದಿಗೆ ಮುಂದುವರೆದು ವಿಕಸಿತ ಭಾರತದ ಗುರಿಯನ್ನು ತಲುಪಬೇಕು’ ಎಂದು ಪ್ರಧಾನಿ ಹೇಳಿದ್ದಾರೆ.

ಮಹಾಕೊಂಭಮೇಳದ ಯಶಸ್ಸಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆದಿಯಾಗಿ ಸ್ವಚ್ಛತಾ ಕರ್ಮಿಗಳು, ಪೊಲೀಸರು, ನಾವಿಕರು, ಸ್ಥಳೀಯರ ನಿರಂತರ ಶ್ರಮವನ್ನೂ ಮೋದಿ ಶ್ಲಾಘಿಸಿದ್ದಾರೆ.

144 ವರ್ಷಗಳ ಬಳಿಕ ಇಂತಹ ಮಹಾಕುಂಭಮೇಳ ನಡೆದು ಭಾರತದ ಬೆಳವಣಿಗೆ ಹಾದಿಯ ಹೊಸ ಅಧ್ಯಾಯವನ್ನು ತೆರೆದಿಟ್ಟಿದೆ ಎಂದ ಮೋದಿ, ‘ಈ ಮಹೋತ್ಸವದೊಂದಿಗೆ 140 ಕೋಟಿ ದೇಶವಾಸಿಗಳ ನಂಬಿಕೆ ನಂಟು ಹೊಂದಿದ್ದು, ಕಳೆದ ಕುಂಭಗಳ ಆಧಾರದಲ್ಲಿ ಅಂದಾಜು ಮಾಡಿದ್ದಕ್ಕಿಂತ ಅಧಿಕ ಭಕ್ತರು ಭೇಟಿ ನೀಡಿ, ಅಮೆರಿಕದ ಜನಸಂಖ್ಯೆಯ ಎರಡು ಪಟ್ಟು ಜನ ಪುಣ್ಯಸ್ನಾನ ಮಾಡಿ ದಾಖಲೆ ಬರೆದಿದ್ದಾರೆ. ವಿದೇಶಿಗರು ಸೇರಿದಂತೆ ಎಲ್ಲಾ ಧರ್ಮ ಹಾಗೂ ನಂಬಿಕೆಯ ಜನರು ಆಗಮಿಸಿದ್ದರು’ ಎಂದಿದ್ದಾರೆ.

ಈ ವೇಳೆ, ಪ್ರಯಾಗರಾಜ್‌ಗೆ ಸಮೀಪವಿರುವ ಸ್ಥಳವೊಂದರಲ್ಲಿ ನಿಷಾದರಾಜ ಶ್ರೀರಾಮನನ್ನು ಭೇಟಿಯಾದ ಬಗ್ಗೆ ರಾಮಾಯಣದಲ್ಲಿರುವ ಪ್ರಸಂಗವನ್ನು ನೆನಪು ಮಾಡಿಕೊಂಡಿದ್ದಾರೆ.

--ವ್ಯವಸ್ಥೆಗಳಲ್ಲಿ ಕೊರತೆ ಆಗಿದ್ದರೆ ಕ್ಷಮಿಸಿ: ಮೋದಿ

ಮೌನಿ ಅಮವಾಸ್ಯೆಯಂದು 30 ಭಕ್ತರನ್ನು ಬಲಿ ಪಡೆದ ಕಾಲ್ತುಳಿತವನ್ನು ಪರೋಕ್ಷವಾಗಿ ನೆನೆಸಿಕೊಂಡ ಪ್ರಧಾನಿ ಮೋದಿ, ‘ಅಷ್ಟು ದೊಡ್ಡ ಮಟ್ಟದಲ್ಲಿ ವ್ಯವಸ್ಥೆಗಳನ್ನು ಮಾಡುವುದು ಸುಲಭವಿರಲಿಲ್ಲ. ಅವುಗಳಲ್ಲಿ ಏನಾದರೂ ಕೊರತೆ ಆಗಿದ್ದರೆ ಕ್ಷಮಿಸಿ. ಗಂಗೆ, ಯಮುನೆ, ಸರಸ್ವತಿ ಹಾಗೂ ಜನರು ದೇವರ ಕೊಡುಗೆಯಾಗಿದ್ದು, ಅವರೆಲ್ಲರಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದರು.

ಸಂಗಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಯೋಗಿ ಚಾಲನೆ

ಪ್ರಯಾಗ್‌ರಾಜ್‌: ಕುಂಭಮೇಳ ಮುಗಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಮಹಾಕುಂಭ ನಗರದ ಅರೈಲ್‌ಘಾಟ್‌ನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ, ಸಂಗಮ ತೀರವನ್ನು ಸ್ವಚ್ಛಗೊಳಿಸಲು ನೈರ್ಮಲ್ಯ ಕಾರ್ಯಕರ್ತರೊಂದಿಗೆ ಕೈ ಜೋಡಿಸಿದರು.ಮಹಾಕುಂಭದ ಔಪಚಾರಿಕ ಮುಕ್ತಾಯದ ಸಂದರ್ಭದಲ್ಲಿ ಸಿಎಂ ಮತ್ತು ಸಚಿವರು, ಮಹಾಕುಂಭಮೇಳಕ್ಕೆ ಆಗಮಿಸಿದ್ದ ಭಕ್ತರು ಬಿಟ್ಟು ಹೋಗಿದ್ದ ಬಟ್ಟೆ ಮತ್ತು ಇತರ ವಸ್ತುಗಳ ಸ್ವಚ್ಛತೆ ಮೂಲಕ ಸ್ಚಚ್ಛತಾ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಗಂಗಾ ನದಿ ತಟದಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಗುರುವಾರ ಇಡೀ ದಿನ ನಡೆದ ಶ್ರಮದಾನದಲ್ಲಿ ಸಿಎಂ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಉಪಸ್ಥಿತರಿದ್ದರು.

Share this article