ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork |  
Published : Mar 19, 2026, 02:45 AM IST
Narendra Modi

ಸಾರಾಂಶ

ಈ ವರ್ಷದ ಏಪ್ರಿಲ್‌ನಿಂದ ಜುಲೈ ನಡುವೆ ನಿವೃತ್ತರಾಗಲಿರುವ 20 ರಾಜ್ಯಗಳ 59 ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆತ್ಮೀಯ ವಿದಾಯ ಕೋರಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

 ನವದೆಹಲಿ: ಈ ವರ್ಷದ ಏಪ್ರಿಲ್‌ನಿಂದ ಜುಲೈ ನಡುವೆ ನಿವೃತ್ತರಾಗಲಿರುವ 20 ರಾಜ್ಯಗಳ 59 ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆತ್ಮೀಯ ವಿದಾಯ ಕೋರಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ದ್ವೈವಾರ್ಷಿಕ ವಿದಾಯ ಸಭೆ

ದ್ವೈವಾರ್ಷಿಕ ವಿದಾಯ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ಇಂತಹ ಕ್ಷಣಗಳು ಪಕ್ಷಭೇದಗಳನ್ನು ಕರಗಿಸಿಬಿಡುತ್ತವೆ. ಸಂಸತ್ತು ಮುಕ್ತ ವಿಶ್ವವಿದ್ಯಾಲಯ ಇದ್ದಂತೆ. ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದೇ ಇಲ್ಲ. ನಿಮ್ಮ ಕೊಡುಗೆಗಳು ರಾಷ್ಟ್ರೀಯ ಜೀವನದ ಶಾಶ್ವತ ಭಾಗವಾಗಿ ಉಳಿಯುತ್ತವೆ’ ಎಂದು ಹಿರಿಯ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ, ದೇವೇಗೌಡರು, ಖರ್ಗೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ರನ್ನು ‘ದಿಗ್ಗಜರು’ ಎಂದು ಬಣ್ಣಿಸಿದ ಮೋದಿ, ‘ಇವರೆಲ್ಲಾ ತಮ್ಮ ಅರ್ಧ ಜೀವನವನ್ನು ಸಂಸತ್ತಿನ ಕಲಾಪಗಳಲ್ಲೇ ಕಳೆದಿದ್ದಾರೆ. ಅವರು ಇಂದಿಗೂ ಹುರುಪಿನೊಂದಿಗೆ ಕಲಾಪಗಳಲ್ಲಿ ಭಾಗಿ ಆಗುವುದು ಅನುಕರಣೀಯ. ಇದು ಸಣ್ಣ ಸಾಧನೆಯೂ ಅಲ್ಲ’ ಎಂದು ಹೊಗಳಿಗೆಯ ಮಾತುಗಳನ್ನಾಡಿದರು. ದೇವೇಗೌಡರನ್ನು ‘ಸದನಕ್ಕೆ ಮಹತ್ತರ ಸ್ಥಾನಮಾನ ತಂದುಕೊಟ್ಟ ಗೌರವಾನ್ವಿತರು’ ಎಂದರೆ, ‘ಖರ್ಗೆಯವರು ಉಭಯ ಸದನಗಳ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಧ್ವನಿ’ ಎಂದು ಮೋದಿ ಹೇಳಿದರು.

ಗೌಡರು ನಮ್ಮನ್ನು ಲವ್‌ ಮಾಡಿ ಮೋದಿ ಮದ್ವೆ ಆದರು: ಖರ್ಗೆ!

ಸದಾ ರಾಜಕೀಯ ಭಿನ್ನಮತಗಳಿಂದಾಗಿ ಗದ್ದಲದ ಗೂಡಾಗಿರುತ್ತಿದ್ದ ಮೇಲ್ಮನೆಯಲ್ಲಿ ತಮ್ಮ ವಿದಾಯ ಭಾಷಣ ಮಾಡುವ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರ ಬಗ್ಗೆ ನೀಡಿದ ಹೇಳಿಕೆ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿತು. ‘ದೇವೇಗೌಡರೊಂದಿಗೆ 54 ವರ್ಷಗಳ ಒಡನಾಟವಿದೆ. ಆದರೆ ಏನಾಯಿತೋ ಗೊತ್ತಿಲ್ಲ, ನಮ್ಮನ್ನು ಪ್ರೀತಿಸಿದವರು ಬಳಿಕ ಮೋದಿ ಜತೆ ಮದುವೆಯಾಗಿಬಿಟ್ಟರು’ ಎಂದು ಗೌಡರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡದ್ದನ್ನು ಉಲ್ಲೇಖಿಸಿ ಖರ್ಗೆ ಹಾಸ್ಯ ಮಾಡಿದರು.

ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲೂ ಕಾಂಗ್ರೆಸ್‌ ಜತೆಗಿದ್ದ ಜನತಾ ದಳ(ಜೆಡಿಎಸ್‌) ಬಳಿಕ ಬಿಜೆಪಿ ಜತೆ ಕೈಜೋಡಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸರ್ವಾಧಿಕಾರಿ ಕಿಮ್‌ ಜೊಂಗ್‌ಗೆ ಎಲೆಕ್ಷನಲ್ಲಿ ಶೇ.99.93 ಮತ
ಕನ್ನಡಿಗ ಯುಪಿಎಸ್ಸಿ ರ್‍ಯಾಂಕ್‌ ವಿಜೇತನ ಹೆಸರಲ್ಲಿ ಕಳ್ಳಾಟ!