ಬೆಂಗ್ಳೂರಲ್ಲಿಂದು ಎನ್‌ಸಿ ಕ್ಲಾಸಿನ್‌ ಜಾವೆಲಿನ್‌ ಕೂಟ

KannadaprabhaNewsNetwork |  
Published : Jul 04, 2025, 11:47 PM ISTUpdated : Jul 05, 2025, 05:57 AM IST
ಚೋಪ್ರಾ | Kannada Prabha

ಸಾರಾಂಶ

ಬೆಂಗಳೂರಿನ ಕ್ರೀಡಾಭಿಮಾನಿಗಳಿಗೆ ವಿಶ್ವದ ಶ್ರೇಷ್ಠ ಜಾವೆಲಿನ್‌ ಥ್ರೋ ಪಟುಗಳನ್ನು, ಅದರಲ್ಲೂ ಭಾರತದ ‘ಚಿನ್ನದ ಹುಡುಗ’ ನೀರಜ್‌ ಚೋಪ್ರಾ ಸ್ಪರ್ಧಿಸುವುದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಶನಿವಾರ ಸಿಗಲಿದೆ.

  ಬೆಂಗಳೂರು :  ಬೆಂಗಳೂರಿನ ಕ್ರೀಡಾಭಿಮಾನಿಗಳಿಗೆ ವಿಶ್ವದ ಶ್ರೇಷ್ಠ ಜಾವೆಲಿನ್‌ ಥ್ರೋ ಪಟುಗಳನ್ನು, ಅದರಲ್ಲೂ ಭಾರತದ ‘ಚಿನ್ನದ ಹುಡುಗ’ ನೀರಜ್‌ ಚೋಪ್ರಾ ಸ್ಪರ್ಧಿಸುವುದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಶನಿವಾರ ಸಿಗಲಿದೆ. 2 ಬಾರಿ ಒಲಿಂಪಿಕ್‌ ಪದಕ ವಿಜೇತ, ಹಾಲಿ ವಿಶ್ವ ಚಾಂಪಿಯನ್‌, ವಿಶ್ವ ನಂ.1 ನೀರಜ್‌ ತಮ್ಮ ಹೆಸರಿನಲ್ಲಿ ಆರಂಭಿಸಿರುವ ನೀರಜ್‌ ಚೋಪ್ರಾ ಕ್ಲಾಸಿಕ್‌ ಅಂತಾರಾಷ್ಟ್ರೀಯ ಜಾವೆಲಿನ್‌ ಕೂಟ, ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ನೀರಜ್‌ ಸೇರಿ ಭಾರತದ ಐವರು ಹಾಗೂ ಏಳು ಮಂದಿ ವಿದೇಶಿಗರು ಸೇರಿ ಒಟ್ಟು 12 ಅಥ್ಲೀಟ್‌ಗಳು ಚೊಚ್ಚಲ ಆವೃತ್ತಿಯ ಎನ್‌ಸಿ ಕ್ಲಾಸಿಕ್‌ ಚಾಂಪಿಯನ್‌ಶಿಪ್‌ಗಾಗಿ ಸೆಣಸಲಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ ಈ ಕೂಟಕ್ಕೆ ‘ಎ’ ದರ್ಜೆ ಮಾನ್ಯತೆ ನೀಡಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂ.ರಾ. ಜಾವೆಲಿನ್‌ ಕೂಟ ನಡೆಯಲಿದೆ. ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಇದೊಂದು ಹೊಸ ಅಧ್ಯಯ ಎನಿಸಿದೆ. ನೀರಜ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದರೂ, 2016ರ ಒಲಿಂಪಿಕ್‌ ಚಾಂಪಿಯನ್‌ ಜರ್ಮನಿಯ ಥಾಮಸ್‌ ರೊಹ್ಲೆ, 2015ರ ವಿಶ್ವ ಚಾಂಪಿಯನ್‌ ಕೀನ್ಯಾದ ಜೂಲಿಯಸ್‌ ಯೆಗೊ, ಅಮೆರಿಕದ ಕರ್ಟಿಸ್‌ ಥಾಮ್ಸನ್‌ರಿಂದ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಮೇನಲ್ಲಿ ದೋಹಾ ಡೈಮಂಡ್‌ ಲೀಗ್‌ನಲ್ಲಿ ತಮ್ಮ ವೃತ್ತಿಬದುಕಿನಲ್ಲೇ ಮೊದಲ ಬಾರಿಗೆ 90 ಮೀ. ದೂರ ದಾಟಿದ್ದ ನೀರಜ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಥಾಮಸ್‌ರ ವೈಯಕ್ತಿಕ ಶ್ರೇಷ್ಠ 93.90 ಮೀ. ಜೂಲಿಯಸ್‌ರ ವೈಯಕ್ತಿಕ ಶ್ರೇಷ್ಠ 92.72 ಮೀ. ಇದೆಯಾದರೂ, ಇತ್ತೀಚಿನ ದಿನಗಳಲ್ಲಿ ಇಬ್ಬರೂ ಉತ್ತಮ ಲಯದಲ್ಲಿಲ್ಲ. ಚೆಕ್‌ ಗಣರಾಜ್ಯದ ಮಾರ್ಟಿನ್‌ ಕೊನೆಕ್ನಿ, ಬ್ರೆಜಿಲ್‌ನ ಲೂಯಿಸ್‌ ಮಾರಿಸಿಯೊ ಡಾ ಸಿಲ್ವಾ, ಶ್ರೀಲಂಕಾದ ರುಮೇಶ್‌ ಪಥಿರಗೆ, ಪೋಲೆಂಡ್‌ನ ಸೈಪ್ರಿಯನ್‌ ಮರ್ಜಿಗ್ಲಾಡ್‌ ಕಣದಲ್ಲಿರುವ ಇತರ ವಿದೇಶಿ ಸ್ಪರ್ಧಿಗಳು.

ಇನ್ನು, ಇತ್ತೀಚೆಗಷ್ಟೇ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಸಚಿನ್‌ ಯಾದವ್‌, ಯಶ್‌ವೀರ್‌ ಸಿಂಗ್‌, ರೋಹಿತ್‌ ಯಾದವ್‌ ಹಾಗೂ ಸಾಹಿಲ್‌ ಸಿಲ್ವಾಲ್‌ ಇನ್ನಿತರ ಭಾರತೀಯರು.

ಈ ಕೂಟದಲ್ಲಿ ಸ್ಪರ್ಧಿಸಲಿರುವ 12 ಅಥ್ಲೀಟ್‌ಗಳ ಪೈಕಿ ಐವರು ಈಗಾಗಲೇ ಸೆಪ್ಟೆಂಬರ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದು, ಉಳಿದವರು 85.50 ಮೀ. ದೂರ ತಲುಪಿದರೆ ಅರ್ಹತೆ ಸಿಗಲಿದೆ.

ನೀರಜ್‌ ಚೋಪ್ರಾ ಈ ಕೂಟವನ್ನು ತಮ್ಮ ತವರು ಹರ್ಯಾಣದ ಪಂಚಕುಲಾದಲ್ಲಿ ನಡೆಸಲು ಇಚ್ಛಿಸಿದರು. ಆದರೆ ಅಲ್ಲಿನ ಕ್ರೀಡಾಂಗಣದಲ್ಲಿ ಫ್ಲಡ್‌ಲೈಟ್‌ ಸಮಸ್ಯೆಯಿಂದಾಗಿ ಕೂಟವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಮೇ 24ರಂದು ನಿಗದಿಯಾಗಿದ್ದ ಕೂಟವು, ಭಾರತ-ಪಾಕಿಸ್ತಾನ ಯುದ್ಧ ಪರಿಸ್ಥಿತಿಯಿಂದಾಗಿ ಮುಂದೂಡಲ್ಪಟ್ಟಿತ್ತು. ಕೋಟ್‌...

ಕನಸಲ್ಲೂ ಅಂದುಕೊಂಡಿರಲಿಲ್ಲ!

ದೇಶಕ್ಕಾಗಿ ಆಡುವುದು ನನ್ನ ಕನಸಾಗಿತ್ತು. ಅದು ಸಾಕಾರಗೊಂಡಿದ್ದಲ್ಲದೇ ಒಲಿಂಪಿಕ್ಸ್‌ ಸೇರಿ ಬಹುತೇಕ ಎಲ್ಲಾ ಪ್ರತಿಷ್ಠಿತ ಕೂಟಗಳಲ್ಲೂ ಪದಕ, ಪ್ರಶಸ್ತಿ ಗೆದ್ದಿದ್ದೇನೆ. ಕ್ರೀಡೆಗಾಗಿ ನಾನೇನಾದರೂ ಮಾಡಬೇಕು ಎನಿಸಿದಾಗ ತೋಚಿದ್ದು ನಮ್ಮ ಭಾರತದಲ್ಲಿ ಅಂ.ರಾ. ಕೂಟವೊಂದನ್ನು ಆಯೋಜಿಸಬೇಕು ಎನ್ನುವುದು. ಬಹಳ ಪರಿಶ್ರಮ, ಉತ್ಸಾಹ, ಖುಷಿಯೊಂದಿಗೆ

ಎನ್‌ಸಿ ಕ್ಲಾಸಿಕ್‌ ಆಯೋಜಿಸುತ್ತಿದ್ದೇನೆ. ಇಂಥದ್ದೊಂದು ಕೂಟವನ್ನು ಆಯೋಜಿಸಬಹುದು ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ ವಿಶ್ವ ಶ್ರೇಷ್ಠ ಕೂಟವೊಂದು ಭಾರತದಲ್ಲಿ ನಡೆಯುತ್ತಿದೆ ಎನ್ನುವ ಹೆಮ್ಮೆ ಇದೆ. ಇದು ದೇಶದಲ್ಲಿ ಕ್ರೀಡೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುತ್ತದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ.

- ನೀರಜ್‌ ಚೋಪ್ರಾ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!