ನವದೆಹಲಿ: ಭೂಕಂಪದಿಂದ ನಲುಗಿದ ನೆರೆಯ ಮ್ಯಾನ್ಮಾರ್ ದೇಶಕ್ಕೆ ‘ಆಪರೇಷನ್ ಬ್ರಹ್ಮ’ ಹೆಸರಿನ ಕಾರ್ಯಾಚರಣೆ ಮೂಲಕ ಭಾರತ ಸಹಾಯಹಸ್ತ ಚಾಚಿದೆ. ಭೂಕಂಪ ಪೀಡಿತ ರಾಷ್ಟ್ರಕ್ಕೆ ಮೊದಲು ನೆರವು ನೀಡಿದ ದೇಶವು ಭಾರತವಾಗಿದೆ.
ಮೊದಲಿಗೆ ಸೇನಾ ವಿಮಾನಗಳ ಮೂಲಕ ಭಾರತ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟಿದೆ. ನೆರವಿನ ಸಾಮಗ್ರಿ ಹೊತ್ತ ಇನ್ನೂ 2 ವಿಮಾನ ಶೀಘ್ರ ತೆರಳಲಿವೆ. ರಕ್ಷಣಾ ಕಾರ್ಯಾಚರಣೆಗಾಗಿ 80 ಎನ್‌ಡಿಆರ್‌ಎಫ್ ಸಿಬ್ಬಂದಿ ದೌಡಾಯಿಸಿದ್ದಾರೆ ಹಾಗೂ ಭಾರತದಿಂದ 118 ಫೀಲ್ಡ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಮತ್ತು 2 ನೌಕಾಪಡೆ ಹಡಗು ರವಾನೆ ಆಗಲಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ,
ಮೊದಲ ಪರಿಹಾರ ಸಾಮಗ್ರಿಗಳಲ್ಲಿ ಟೆಂಟ್‌ಗಳು, ಮಲಗುವ ಚೀಲಗಳು, ಹೊದಿಕೆಗಳು, ಸಿದ್ಧ ಆಹಾರ, ನೀರು ಶುದ್ಧೀಕರಣ ಸಲಕರಣೆಗಳು, ಸೌರದೀಪಗಳು ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ವಾಯುಪಡೆಯ ಸಿ130ಜೆ ಮಿಲಿಟರಿ ವಿಮಾನದ ಮೂಲಕ ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ತಲುಪಿಸಲಾಗಿದೆ.
‘ಆಪರೇಷನ್ ಬ್ರಹ್ಮ ಆರಂಭವಾಗಿದೆ. ಭಾರತದಿಂದ ಮೊದಲ ಹಂತದ ಮಾನವೀಯ ನೆರವು ಮ್ಯಾನ್ಮಾರ್‌ನ ಯಾಂಗೋನ್ ವಿಮಾನ ನಿಲ್ದಾಣವನ್ನು ತಲುಪಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
‘ಭೂಕಂಪಪೀಡಿತ ಮ್ಯಾನ್ಮಾರ್‌ಗೆ ನೆರವಿನ ಹಸ್ತ ಚಾಚಿದ ಮೊದಲ ದೇಶ ಭಾರತ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಮ್ಯಾನ್ಮಾರ್ ಮುಖ್ಯಸ್ಥರ ಜತೆ ಮೋದಿ ಮಾತು: ನೆರವು ಭರವಸೆ
ನವದೆಹಲಿ: ಮ್ಯಾನ್ಮಾರ್ ಭೂಕಂಪದಿಂದ ತತ್ತರಿಸಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಮ್ಯಾನ್ಮಾರ್‌ನ ಮಿಲಿಟರಿ ನೇತೃತ್ವದ ಸರ್ಕಾರದ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಭೂಕಂಪದಿಂದ ಉಂಟಾದ ಹಾನಿಗೆ ಸಂತಾಪ ಸೂಚಿಸಿದ ಅವರು, ‘ ವಿನಾಶಕರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತವು ಸದಾ ಜತೆಗಿರಲಿದೆ’ ಎಂದು ಭರವಸೆ ನೀಡಿದ್ದಾರೆ,
ಟ್ವೀಟ್ ಮಾಡಿರುವ ಮೋದಿ , ‘ಮ್ಯಾನ್ಮಾರ್‌ನ ಹಿರಿಯ ಜನರಲ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತನಾಡಿದ್ದೇನೆ. ಭೀಕರ ಭೂಕಂಪದಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದೇನೆ. ಕಷ್ಟಕಾಲದಲ್ಲಿರುವ ಮ್ಯಾನ್ಮಾರ್‌ನ ನಾಗರಿಕರೊಂದಿಗೆ ಭಾರತವು ಒಬ್ಬ ಆತ್ಮೀಯ ಸ್ನೇಹಿತನಾಗಿ ಮತ್ತು ನೆರೆಯ ದೇಶವಾಗಿ ಸದಾ ನೆರವಿಗೆ ನಿಲ್ಲಲಿದೆ. ಆಪರೇಷನ್ ಬ್ರಹ್ಮ ಯೋಜನೆಯಲ್ಲಿ ವಿಪತ್ತು ಪರಿಹಾರ ಸಾಮಗ್ರಿ, ಮಾನವೀಯ ನೆರವು, ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಬ್ಯಾಂಕಾಕ್ ಬೀದಿಗಳೇ ಆಸ್ಪತ್ರೆ, ಬೀದಿಯಲ್ಲೇ ಹೆರಿಗೆ!
ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಆಸ್ಪತ್ರೆಗಳೂ ಹಾನಿಗೀಡಾಗಿದ್ದು, ಬೀದಿಗಳಲ್ಲೇ ಹಾಸಿಗೆಗಳನ್ನು ಹಾಕಿ ಚಿಕಿತ್ಸೆ ನೀಡುವ ಸ್ಥಿತಿ ಎದುರಾಗಿದೆ. ಮಹಿಳೆಯೊಬ್ಬರು ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಭೂಕಂಪದ ವೇಳೆ ಪೊಲೀಸ್ ಜನರಲ್ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು.
ಆಗ ಕಂಪನ ಸಂಭವಿಸಿದ ಕಾರಣ ಮಹಿಳೆಯನ್ನು ಸ್ಟ್ರೆಚರ್ ಸಮೇತ ಬೀದಿಗೆ ಕರೆತರಲಾಯಿತು. ಬೀದಿಯಲ್ಲೇ ವೈದ್ಯರು ಸರ್ಜರಿ ಮುಂದುವರಿಸಿದರು. ಕೊನೆಗೆ ಎಲ್ಲ ಸಿಬ್ಬಂದಿಗಳೂ ಆಕೆಯನ್ನು ಸುತ್ತುವರಿದು ಸುಸೂತ್ರ ಹೆರಿಗೆಗೆ ಕಾರಣರಾದರು. ಮಹಿಳೆ ಗಂಡು ಮಗು ಹೆತ್ತಳು ಎಂದು ಆಸ್ಪತ್ರೆ ವಕ್ತಾರರು ಹೇಳಿದ್ದಾರೆಇದೇ ವೇಳೆ, ಬೀದಿಯಲ್ಲೇ ಆಸ್ಪತ್ರೆಯ ಬೆಡ್‌ಗಳನ್ನು ಹಾಕಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮೊಬೈಲ್ ದೃಶ್ಯಗಳು ವೈರಲ್ ಆಗಿವೆ.