ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಮರದಲ್ಲಿ, ಡ್ರೋನ್, ಕ್ಷಿಪಣಿ, ಯುದ್ಧವಿಮಾನಗಳಂತಹ ವೈಮಾನಿಕ ಅಸ್ತ್ರಗಳು ಪ್ರಮುಖವಾಗಿ ಬಳಕೆಯಾಗುತ್ತಿವೆ. ಹೀಗಿರುವಾಗ, ಈ ಕಾದಾಟದಲ್ಲಿ ವಾಯುನೆಲೆಗಳು ಮತ್ತು ರನ್‌ವೇಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗ ಅವುಗಳನ್ನೇ ಗುರಿಯಾಗಿಸಿ ಭಾರತ ದಾಳಿ ಮಾಡಿದೆ.
ಉಗ್ರದಾಳಿಗೆ ಪ್ರತಿಯಾಗಿ ಉಗ್ರನೆಲೆಗಳನ್ನು ಗುರಿಯಾಗಿಸಿ ನಿಖರ ದಾಳಿ ಮಾಡಿದ್ದ ಭಾರತ, ಬಳಿಕ ಪಾಕಿಸ್ತಾನ ತೋರಿದ ಉದ್ಧಟತನಕ್ಕೆ ತಿರುಗೇಟು ನೀಡಲು ಅದರ ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ಮಾಡಿದೆ. ಅದರಲ್ಲೂ ಯುದ್ಧವಿಮಾನಗಳು ಟೇಕ್ ಆಫ್ ಆಗಲು ಮತ್ತು ಬಂದಿಳಿಯಲು ಅತ್ಯಗತ್ಯವಾದ ರನ್‌ವೇಗಳನ್ನೇ ಉಡಾಯಿಸಿದೆ. ಇದರಿಂದ ಶತ್ರುರಾಷ್ಟ್ರದ ಬೆನ್ನೆಲುಬನ್ನೇ ಮುರಿದಂತಾಗಿದೆ.
ಇದರಿಂದ ಪಾಕಿಸ್ತಾನಕ್ಕೆ ಆದ ಹಾನಿಯ ಬಗ್ಗೆ ಮಾತನಾಡಿರುವ ಮೇ।ಜ। ರಾಜೀವ್ ನಾರಾಯಣ್, ‘ವಿಮಾನಗಳು ಟೇಕಾಫ್ ಅಥವಾ ಲ್ಯಾಂಡ್ ಆಗಲು ರನ್‌ವೇನ 1/3ರಷ್ಟು ಭಾಗ ಅತ್ಯಗತ್ಯ. ಅಷ್ಟು ಭಾಗದ ಮೇಲೆ ದಾಳಿ ಮಾಡಿದರೆ, ರಿಪೇರಿಯಾಗದ ಹೊರತು ಆ ರನ್‌ವೇ ನಿರುಪಯುಕ್ತ. 1/3ರಷ್ಟು ಭಾಗಕ್ಕೆ ಹಾನಿಯಾಗದಿದ್ದರೆ ಟೇಕಾಫ್ ಮಾಡಬಹುದಾದರೂ ಲ್ಯಾಂಡಿಂಗ್ ಸಾಧ್ಯವಿಲ್ಲ. ಹೀಗಿರುವಾಗ ಭಾರತ ನಿಖರವಾಗಿ ರನ್‌ವೇಗಳ ಮೇಲೆ ದಾಳಿ ಮಾಡಿದ್ದು, ಪಾಕ್ ವಾಯುಪಡೆಯನ್ನು ಸಂಕಷ್ಟಕ್ಕೀಡುಮಾಡಿದೆ’ ಎಂದು ಹೇಳಿದ್ದಾರೆ.
ಸೇನಾ ಹೆಡ್‌ಆಫೀಸ್ ಬಳಿ ದಾಳಿ ಬಳಿಕ ಸೇನಾ ಮುಖ್ಯಸ್ಥ ಬಂಕರ್‌ಗೆ!
ನವದೆಹಲಿ: ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತವು ಪಾಕಿಸ್ತಾನ ಸೇನೆ ಕೇಂದ್ರ ಕಚೇರಿ ಇರುವ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ ಮೇಲೆ ದಾಳಿ ನಡೆಸಿದ ನಂತರ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್‌ನನ್ನು ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಭಾರತದ ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಪ್ ಅವರನ್ನು ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎನ್ನುವ ವದಂತಿ ಹಬ್ಬಿತ್ತು. ಇದೀಗ ಮುನೀರ್‌ನ್ನು ಕೂಡ ಸ್ಥಳಾಂತರಿಸಲಾಗಿದೆ ಎನ್ನುವ ಸುದ್ದಿ ಹಬ್ಬಿದ್ದು, ರಾವಲ್ಪಿಂಡಿಯಲ್ಲಿರುವ ಜನರಲ್ ಹೆಡ್‌ಕ್ವಾರ್ಟರ್ಸ್‌ನಲ್ಲಿರುವ ಕೋಟೆಯ ಬಂಕರ್‌ನಲ್ಲಿ ಸೇನಾ ಮುಖ್ಯಸ್ಥನನ್ನು ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ.