ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ ಪ್ರಗತಿ ದಾಖಲಾಗಿದೆ
ಅಮೆರಿಕ ಅಧ್ಯಕ್ಷ ಟ್ರಂಪ್ ಡೆಡ್ ಎಕಾನಮಿ ಹೇಳಿಕೆಗೆ ತಿರುಗೇಟುನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತವು ಶೇ.7.8ರಷ್ಟು ಆರ್ಥಿಕ ಪ್ರಗತಿ ದರ ದಾಖಲಿಸುವ ಮೂಲಕ ಎಲ್ಲರ ನಿರಿಕ್ಷೆಯನ್ನೂ ಹುಸಿ ಮಾಡಿ ದಾಪುಗಾಲಿಟ್ಟಿದೆ. ನಮ್ಮ ಆರ್ಥಿಕ ಪ್ರಗತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಭಾರತದ್ದು ಡೆಡ್ ಎಕಾನಮಿ ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.ಇಲ್ಲಿ ಆಯೋಜನೆಗೊಂಡಿರುವ ‘ಸೆಮಿಕಾನ್ ಇಂಡಿಯಾ 2025’ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಜಾಗತಿಕ ಅನಿಶ್ಚಿತತೆ, ಆರ್ಥಿಕ ಸ್ವಹಿತಾಸಕ್ತಿಯ ಸವಾಲುಗಳ ನಡುವೆಯೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.8ರ ದರದಲ್ಲಿ ಪ್ರಗತಿ ದಾಖಲಿಸಿದೆ. ಈ ಮೂಲಕ ಮತ್ತೊಮ್ಮೆ ಎಲ್ಲರ ನಿರೀಕ್ಷೆ, ಪ್ರತಿಯೊಂದು ಅಂದಾಜು ಮತ್ತು ಪ್ರತಿಯೊಂದು ಮುನ್ನೋಟವನ್ನು ಮೀರಿ ದೇಶ ಆರ್ಥಿಕ ಪ್ರಗತಿ ದಾಖಲಿಸಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಪ್ರಗತಿ ಉತ್ಪಾದನೆ, ಸೇವೆ, ಕೃಷಿ, ನಿರ್ಮಾಣ ಸೇರಿದಂತೆ ಪ್ರತಿಯೊಂದು ವಲಯದಲ್ಲೂ ದಾಖಲಾಗಿದೆ. ಪ್ರತಿಯೊಂದು ಕಡೆಯೂ ನಮಗೆ ಉತ್ಸಾಹದ ಚಿಲುಮೆ ಕಾಣುತ್ತಿದೆ. ಭಾರತದ ತೀವ್ರ ಆರ್ಥಿಕ ಪ್ರಗತಿಯು ಪ್ರತಿ ವಲಯದ ಉದ್ಯಮಗಳಲ್ಲಿ ಮತ್ತು ಪ್ರತಿ ಭಾರತೀಯ ಪ್ರಜೆಯಲ್ಲಿ ಹೊಸ ಶಕ್ತಿ ತುಂಬಿದೆ. ಆರ್ಥಿಕ ವಲಯದಲ್ಲಿನ ಈ ಉತ್ತಮ ಪ್ರಗತಿಯು ಶೀಘ್ರವೇ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ನೆರವಾಗಲಿದೆ ಎಂದು ಪ್ರಧಾನಿ ಬಣ್ಣಿಸಿದರು.ಜಾಗತಿಕ ಸವಾಲುಗಳು ಏನೆಂದು ಮೋದಿ ಪ್ರಸ್ತಾಪಿಸಿಲ್ಲವಾದರೂ, ಅದು ಭಾರತದ ಆಮದಿನ ಮೇಲೆ ಇತ್ತೀಚೆಗೆ ಅಮೆರಿಕ ಹೇರಿದ ಶೇ.50ರಷ್ಟು ತೆರಿಗೆ, ಅಗ್ಗದ ದರದಲ್ಲಿ ರಷ್ಯಾ ತೈಲ ಖರೀದಿಗೆ ವಿರೋಧವನ್ನು ಉದ್ದೇಶಿಸಿದ್ದು ಎಂಬುದು ಖಚಿತ. ಇತ್ತೀಚೆಗೆ ಭಾರತದ ಮೇಲೆ ಹೆಚ್ಚುವರಿ ಶೇ.50ರಷ್ಟು ತೆರಿಗೆ ಹೇರುವ ವೇಳೆ ಅಧ್ಯಕ್ಷ ಟ್ರಂಪ್, ಭಾರತದ ಆರ್ಥಿಕತೆಯನ್ನು ಡೆಡ್ ಎಕಾನಮಿ (ನಿರ್ಜೀವ ಎಕಾನಮಿ) ಎಂದು ವ್ಯಂಗ್ಯವಾಡಿದ್ದರು.
==ನನ್ನ ತಾಯಿ ಅವಮಾನಿಸಿದವರನ್ನು ಬಿಹಾರದ ಜನತೆ ಕ್ಷಮಿಸಲ್ಲ: ಮೋದಿ-ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ಪ್ರಧಾನಿ ಆಕ್ರೋಶ-ತಾಯಿಗೆ ಅವಮಾನ ನೆನೆದು ಭಾವುಕರಾದ ಮೋದಿ
-ರಾಜಕೀಯ ನಂಟಿಲದಿದ್ದರೂ ಅವಮಾನ ಏಕೆ: ಪ್ರಶ್ನೆ
ಪಟನಾ: ಇತ್ತೀಚೆಗೆ ಬಿಹಾರದ ದರ್ಭಾಂಗದಲ್ಲಿ ನಡೆದ ಮತ ಅಧಿಕಾರ ಯಾತ್ರೆ ವೇಳೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ತಮ್ಮ ತಾಯಿಯ ಬಗ್ಗೆ ಆಡಿದ ಆಕ್ಷೇಪಾರ್ಹ ನುಡಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನನ್ನ ತಾಯಿಗೂ ರಾಜಕೀಯಕ್ಕೂ ಏನೂ ಸಂಬಂಧವಿಲ್ಲ. ಹೀಗಿದ್ದಾಗ ಅವರ ತಪ್ಪೇನು? ಅವರ ಬಗ್ಗೆ ಆಕ್ಷೇಪಾರ್ಹ ಪದಗಳ ಬಳಕೆ ಏಕಾಗಿತ್ತು? ಎಂದು ಪ್ರಶ್ನಿಸಿದ್ದಾರೆ.ಪಟನಾದಲ್ಲಿ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಸಂಘದ ಕಾರ್ಯಕ್ರಮವನ್ನು ವರ್ಚ್ಯುವಲ್ ಆಗಿ ಉದ್ಘಾಟಿಸಿ ದೆಹಲಿಯಿಂದಲೇ ಮಾತನಾಡಿದ ಪ್ರಧಾನಿ, ‘ಮದರ್ ಇಂಡಿಯಾವನ್ನೇ ಅಪಮಾನಿಸುವವರು ನಿಧನರಾಗಿರುವ ನನ್ನ ತಾಯಿಯ ಬಗ್ಗೆ ಕೆಟ್ಟ ಮಾತು ಆಡುವುದು ವಿಶೇಷವೇನಲ್ಲ. ಇಂಥವರನ್ನು ನಾನು ಕ್ಷಮಿಸಿದರೂ, ಬಿಹಾರದ ಜನತೆ ಕ್ಷಮಿಸಲಾರರು’ ಎಂದು ಹೇಳಿದರು.ಬಿಹಾರ ಜಾನಕಿಯ ತಾಯ್ನಾಡು, ಅದು ಎಂದೆಂದಿಗೂ ಮಹಿಳೆಯರನ್ನು ಗೌರವಿಸಿಕೊಂಡೇ ಬಂದಿದೆ. ಆದರೆ ಇದೇ ನಾಡಿನಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ನನ್ನ ತಾಯಿಯನ್ನು ಅವಮಾನಿಸಲಾಗಿದೆ. ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ಎಂದಿಗೂ ನಾನು ಭಾವಿಸಿರಲಿಲ್ಲ. ನನಗೆ ಜನ್ಮ ನೀಡಿದ ನನ್ನ ತಾಯಿ ದೇಶ ಸೇವೆ ಮಾಡುವಂತೆ ನನಗೆ ಸೂಚಿಸಿದ್ದರು. ಅದನ್ನು ನಾನು ಮಾಡುತ್ತಿದ್ದೇನೆ. ಅವರು ತಮಗಾಗಿ ಒಂದೇ ಒಂದು ಸೀರೆಯನ್ನು ಕೂಡಾ ಖರೀದಿಸಲಿಲ್ಲ. ನಮಗಾಗಿ ಹಣ ಕೂಡಿಡಲಿಲ್ಲ. ತಾಯಿಯ ಸ್ಥಾನ ದೇವರಿಗಿಂತಲೂ ದೊಡ್ಡದು ಎಂದು ಮೋದಿ ಭಾವುಕರಾಗಿ ಹೇಳಿದರು.ಮಹಿಳೆಯರ ಕಾರಣಕ್ಕೆ ಬಿಹಾರದ ಪ್ರಾಂತೀಯ (ಆರ್‌ಜೆಡಿ) ಪಕ್ಷ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಅದಕ್ಕೆ ಮಹಿಳೆಯರ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಇದೀಗ ಅವರು ನನ್ನ ತಾಯಿಯನ್ನು ಟೀಕಿಸುತ್ತಿದ್ದಾರೆ. ತಾಯಂದಿರ ಬಗ್ಗೆ ಟೀಕೆ ಮಾಡುವವರು ಮಹಿಳೆಯರು ದುರ್ಬಲ ಎಂದು ಕೊಂಡಿರುತ್ತಾರೆ. ನನ್ನ ತಾಯಿ ಬಗ್ಗೆ ಕೆಟ್ಟ ಮಾತು ಆಡುವುದು ಬಿಹಾರದ ಹೆಣ್ಣು ಮಕ್ಕಳು ಮತ್ತು ಸೋದರಿಯರನ್ನು ಅವಮಾನಿಸಿದಂತೆ ಎಂದು ಆರ್‌ಜೆಡಿ ವಿರುದ್ಧ ಮೋದಿ ಹರಿಹಾಯ್ದರು.