ಝಾರ್ಸುಗುಡಾ (ಒಡಿಶಾ) : ಸರ್ಕಾರಿ ಸ್ವಾಮ್ಯದ ದೂರವಾಣಿ ಸೇವಾ ಕಂಪನಿ ಬಿಎಸ್‌ಎನ್‌ಎಲ್‌ನ ಸ್ವದೇಶಿ 4ಜಿ ನೆಟ್‌ವರ್ಕ್ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಭಾರತವು ಸ್ವದೇಶಿ ದೂರಸಂಪರ್ಕ ತಂತ್ರಜ್ಞಾನ ಹೊಂದಿರುವ ಹಾಗೂ ಸ್ವದೇಶಿ ದೂರಸಂಪರ್ಕ ಉಪಕರಣಗಳನ್ನು ಉತ್ಪಾದಿಸುವ 5 ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ, ಚೀನಾ ಮಾತ್ರ ಈವರೆಗೆ ಸ್ವಂತ ದೂರಸಂಪರ್ಕ ತಂತ್ರಜ್ಞಾನ ಹೊಂದಿವೆ. ಇವುಗಳ ಸಾಲಿಗೆ ಈಗ ಭಾರತ ಸೇರಿದೆ. ಈವರೆಗೂ ಭಾರತ ವಿದೇಶಗಳ ಮೇಲೆ ಈ ತಂತ್ರಜ್ಞಾನ ಹಾಗೂ ಉಪಕರಣಗಳಿಗೆ ಭಾರತ ವಿದೇಶಗಳನ್ನು ಅವಲಂಬಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ‘4ಜಿ ಟೆಲಿಕಾಂ ಸೇವೆಗೆ ಸ್ಥಳೀಯ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಐದು ದೇಶಗಳಲ್ಲಿ ಭಾರತವೂ ಒಂದು ಎಂಬುದು ಹೆಮ್ಮೆಯ ವಿಚಾರವಾಗಿದೆ. ಆತ್ಮನಿರ್ಭರತೆ ಇಂದಿನ ಅಗತ್ಯವಾಗಿದೆ. ಚಿಪ್‌ನಿಂದ ಹಡಗಿನವರೆಗೆ ಭಾರತ ಎಲ್ಲದರಲ್ಲೂ ಸ್ವಾವಲಂಬಿಯಾಗಿರಬೇಕು ಎಂಬುದು ನಮ್ಮ ಸಂಕಲ್ಪ. ಈ ಪ್ರಕಾರ ಭಾರತ ಜಾಗತಿಕ ಟೆಲಿಕಾಂ ಉತ್ಪಾದನಾ ಹಬ್ ಆಗಲಿದೆ’ ಎಂದರು.
‘ಈತನಕ ಕುಗ್ರಾಮ, ಗಡಿ ಗ್ರಾಮಗಳಿಗೆ ನೆಟ್‌ವರ್ಕ್ ಸಮಸ್ಯೆ ಇರುತ್ತಿತ್ತು. ಇನ್ನು ಈ ಸಮಸ್ಯೆ ಇರದು. ತಂತ್ರಜ್ಞಾನ ರೈತರು ಸೇರಿ ಎಲ್ಲರಿಗೂ ತಲುಪಿ ದೇಶದ ಅಭಿವೃದ್ಧಿ ಆಗಲಿದೆ’ ಎಂದರು.
97500 ಸೌರಶಕ್ತಿ ಚಾಲಿತ ಸ್ವದೇಶಿ ಟವರ್:
ಇದು 37 ಸಾವಿರ ಕೋಟಿ ರು. ವೆಚ್ಚದ ಯೋಜನೆ ಆಗಿದೆ. 97,500 ಸೌರಚಾಲಿತ ಸ್ವದೇಶಿ 4ಜಿ ಮೊಬೈಲ್ ಟವರ್‌ಗಳನ್ನು ಆರಂಭಿಸಲಾಗಿದೆ. ಇವುಗಳಲ್ಲಿ 92,600 ಟವರ್‌ಗಳನ್ನು 5ಜಿ ದರ್ಜೆಗೆ ಏರಿಸಬಹುದಾಗಿದೆ. ಇದನ್ನು ಸರ್ಕಾರಿ ಸ್ವಾಮ್ಯದ ತೇಜಸ್ ನೆಟ್‌ವರ್ಕ್ ಅಭಿವೃದ್ಧಿಪಡಿಸಿದೆ ಹಾಗೂ ಭಾರತದ ದೊಡ್ಡ ಐಟಿ ಕಂಪನಿಯಾದ ಟಿಸಿಎಸ್ ಸಂಯೋಜಿಸಿದೆ. ಇದರಿಂದ 30 ಸಾವಿರ ಹಳ್ಳಿಗಳಿಗೆ ಸುಲಭವಾಗಿ ಟೆಲಿಕಾಂ ಸೇವೆ ಲಭ್ಯವಾಗಲಿದೆ.
ಐಐಟಿ ಧಾರವಾಡ ಸೇರಿ 8
ಐಐಟಿ ವಿಸ್ತರಣೆಗೆ ಚಾಲನೆ
ಝಾರ್ಸುಗುಡಾ: ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಧಾರವಾಡ) ಸೇರಿದಂತೆ ದೇಶದ 8 ಐಐಟಿಗಳ ವಿಸ್ತರಣೆಗೆ ಒಡಿಶಾದ ಝರ್ಸುಗುಡಾದಿಂದ ವರ್ಚುವಲ್ ಆಗಿ ಚಾಲನೆ ನೀಡಿದರು.
11 ಸಾವಿರ ಕೋಟಿ ರು.ಗಳಲ್ಲಿ ಐಐಟಿಗಳ ವಿಸ್ತರಣೆ ಆಗಲಿದ್ದು, ಇದರಿಂದ ಇನ್ನೂ 10 ಸಾವಿರ ವಿದ್ಯಾರ್ಥಿಗಳಿಗೆ ಮುಂದಿನ 4 ವರ್ಷದಲ್ಲಿ ಅವಕಾಶ ಲಭಿಸಲಿದೆ. ಅಲ್ಲದೆ, ಸಂಶೋಧನೆ ಸೇರಿ ಅನೇಕ ಹೊಸ ವಿಭಾಗಗಳು ಆರಂಭವಾಗಲಿವೆ.