ಆಪರೇಷನ್‌ ಸಿಂದೂರ ವೇಳೆ ಭಾರತ ರೌದ್ರರೂಪ : ಮೋದಿ

Published : Aug 03, 2025, 06:17 AM IST
PM Narendra Modi

ಸಾರಾಂಶ

ಉಗ್ರರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್‌ ಸಿಂದೂರ ನಡೆಸಿ ರೌದ್ರ ರೂಪ ತಾಳಿತ್ತು. ಆ ಮೂಲಕ ವಿಶ್ವಕ್ಕೇ ತನ್ನ ಶಕ್ತಿಯನ್ನು ತೋರಿಸಿದ್ದಲ್ಲದೆ, ಭಾರತದ ಮೇಲೆ ದಾಳಿ ಮಾಡುವವರು ಪಾತಾಳದಲ್ಲಿದ್ದರೂ ಬಿಡುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಾಣಸಿ : ಉಗ್ರರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್‌ ಸಿಂದೂರ ನಡೆಸಿ ರೌದ್ರ ರೂಪ ತಾಳಿತ್ತು. ಆ ಮೂಲಕ ವಿಶ್ವಕ್ಕೇ ತನ್ನ ಶಕ್ತಿಯನ್ನು ತೋರಿಸಿದ್ದಲ್ಲದೆ, ಭಾರತದ ಮೇಲೆ ದಾಳಿ ಮಾಡುವವರು ಪಾತಾಳದಲ್ಲಿದ್ದರೂ ಬಿಡುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಾಣಸಿಯಲ್ಲಿ ಸಾರ್ವಜನಿಕರ ಮುಂದೆ ಮಾತನಾಡಿದ ಮೋದಿ, ‘ಪಹಲ್ಗಾಂ ಉಗ್ರದಾಳಿಯಲ್ಲಿ ಪ್ರಾಣ ಕಳೆದುಕೊಂದ 26 ಮಂದಿಗಾಗಿ ನನ್ನ ಹೃದಯದಲ್ಲಿ ನೋವು ತುಂಬಿತ್ತು. ಮಹಾದೇವನ ಕೃಪೆಯಿಂದ, ನಮ್ಮ ಪುತ್ರಿಯರ ಸಿಂದೂರ ಅಳಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡೆವು. ಶಿವ ಎಂದರೆ ಸಮೃದ್ಧಿ. ಆದರೆ ಉಗ್ರರು ತಲೆಯೆತ್ತಿದಾಗ ಅವರು ರುದ್ರ ರೂಪ ತಳೆದರು. ಆ ವೇಳೆ, 140 ಕೋಟಿ ಜನ ಆಪರೇಷನ್‌ ಸಿಂದೂರಕ್ಕೆ ಬಲ ತುಂಬಿದರು’ ಎಂದು ಹೇಳಿದರು.

‘ಪಾಕ್‌ನಲ್ಲಿರುವ ಉಗ್ರನೆಲೆಗಳನ್ನು ಆಪರೇಷನ್‌ ಸಿಂದೂರದ ಮೂಲಕ ನೆಲಸಮ ಮಾಡಿದ್ದರಿಂದ ನಿಮಗೆಲ್ಲರಿಗೂ ಹೆಮ್ಮೆಯಾಗಲಿಲ್ಲವೇ?’ ಎಂದು ನೆರೆದವರನ್ನು ಪ್ರಶ್ನಿಸಿದ ಮೋದಿ, ‘ನಮ್ಮ ಡ್ರೋನ್‌ ಮತ್ತು ಕ್ಷಿಪಣಿಗಳು ಭಯೋತ್ಪಾದಕರ ಪ್ರಧಾನ ಕಚೇರಿಯನ್ನು ನಿಖರವಾಗಿ ಹೊಡೆದುರುಳಿಸಿದ ದೃಶ್ಯಗಳನ್ನು ನೀವೆಲ್ಲರೂ ನೋಡಿರಬೇಕು. ಪಾಕ್‌ನ ಹಲವು ವಾಯುನೆಲೆಗಳು ಇನ್ನೂ ಐಸಿಯುನಲ್ಲಿವೆ’ ಎಂದು ಹೆಮ್ಮೆಯಿಂದ ಹೇಳಿದರು.

ವಿಪಕ್ಷಗಳ ವಿರುದ್ಧ ವಾಗ್ದಾಳಿ:

ಇದೇ ವೇಳೆ ವಿಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ, ‘ದೇಶವು ಆಪರೇಷನ್‌ ಸಿಂದೂರವನ್ನು ಸಂಭ್ರಮಿಸುತ್ತಿದ್ದರೆ, ದೇಶದ ಕೆಲವರಿಗೆ ಅದರಿಂದ ತೊಂದರೆಯಾಗುತ್ತಿತ್ತು. ಭಾರತವು ಪಾಕಿಸ್ತಾನದೊಳಗಿದ್ದ ಉಗ್ರನೆಲೆಗಳನ್ನು ಧ್ವಂಸ ಮಾಡಿತು. ಇದರಿಂದ ದಪಾಕಿಸ್ತಾನದ ದುಃಖ ಅರ್ಥವಾಗುವಂತಹದ್ದು. ಆದರೆ ಆಘಾತಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರಿಗೂ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದರು.

ಆಪರೇಷನ್‌ ಸಿಂದೂರವನ್ನು ಕಾಂಗ್ರೆಸ್‌ ತಮಾಷೆ ಎಂದು ಕರೆದಿದ್ದ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೋದಿ, ‘ಅದು ಎಂದಾದರೂ ಹಾಸ್ಯವಾಗಬಹುದೇ? ಅವರು ನಮ್ಮ ಸಹೋದರಿಯರ ಪವಿತ್ರ ಗುರುತು ಮತ್ತು ಸೈನಿಕರ ಶೌರ್ಯವನ್ನು ಅಪಹಾಸ್ಯ ಮಾಡಿದರು’ ಎಂದರು. ಜತೆಗೆ ಸೇನಾ ಕಾರ್ಯಾಚರಣೆ ನಡೆಸಿದ ಸಮಯವನ್ನು ಪ್ರಶ್ನಿಸಿದ್ದ ಸಮಾಜವಾದಿ ಪಕ್ಷವನ್ನೂ ತರಾಟೆಗೆ ತೆಗೆದುಕೊಳ್ಳುತ್ತಾ, ‘ನಾವು ಎಸ್‌ಪಿ ನಾಯಕರ ಬಳಿ ಅನುಮತಿ ಕೇಳಬೇಕಿತ್ತೇ? ಅಥವಾ ಉಗ್ರರು ತಪ್ಪಿಸಿಕೊಳ್ಳುವ ತನಕ ಕಾಯಬೇಕಿತ್ತೇ? ಉತ್ತರಪ್ರದೇಶದಲ್ಲಿ ಈ ಪಕ್ಷ(ಎಸ್‌ಪಿ) ಆಡಳಿತದಲ್ಲಿದ್ದಾಗ, ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದು, ಉಗ್ರರಿಗೆ ಕ್ಲೀನ್‌ಚಿಟ್‌ ನೀಡಿದ್ದರು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ