ಮುಂಬೈ : 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ತನಿಖಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರ ಹೆಸರನ್ನು ಹೇಳುವಂತೆ ತಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎಂದು ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.
ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ 17 ವರ್ಷಗಳ ನಂತರ ಜು.31ರಂದು ಎನ್‌ಐಎ ವಿಶೇಷ ನ್ಯಾಯಾಲಯ ಪ್ರಜ್ಞಾ ಸಿಂಗ್, ಲೆ.ಕ. ಪ್ರಸಾದ್ ಪುರೋಹಿತ್ ಸೇರಿದಂತೆ 7 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಎನ್‌ಐಎ ಕೋರ್ಟಿನ 1036 ಪುಟಗಳ ತೀರ್ಪಿನಲ್ಲಿ ಯಾವುದೇ ಉಲ್ಲೇಖವಿಲ್ಲದ ಈ ಸಂವೇದನಾಶೀಲ ಹೇಳಿಕೆಯನ್ನು ಠಾಕೂರ್ ನೀಡುತ್ತಿರುವುದು ಇದೇ ಮೊದಲು.
ತಮ್ಮ ಖುಲಾಸೆಯ ಔಪಚಾರಿಕತೆ ಪೂರ್ತಿಗೊಳಿಸಲು ಶನಿವಾರ ಮುಂಬೈ ಕೋರ್ಟಿಗೆ ಬಂದಿದ್ದ ಸಾಧ್ವಿ ಸುದ್ದಿಗಾರರ ಜೊತೆ ಮಾತನಾಡಿ, ‘ನಾನು ಸೂರತ್‌ನಲ್ಲಿದ್ದಾಗ ವಿಚಾರಣೆಗೆ ಬಂದ ತನಿಖಾಧಿಕಾರಿಗಳು ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖಂಡರಾದ ಭಾಗವತ್, ರಾಮ್ ಮಾಧವ್, ಇಂದ್ರೇಶ್ ಕುಮಾರ್ ಸೇರಿದಂತೆ ಹಲವರ ಹೆಸರು ಹೇಳುವಂತೆ ಒತ್ತಡ ಹೇರಿದರು. ಅವರ ಹೆಸರು ಹೇಳಿದರೆ ನಿನ್ನನ್ನು ಹೊಡೆಯುವುದಿಲ್ಲ ಎಂದರು. ಆದರೆ ಹಾಗೆ ಹೇಳುವುದು ಸುಳ್ಳು ಎಂಬ ಕಾರಣ ನಾನು ಯಾರ ಹೆಸರನ್ನೂ ಹೇಳಲಿಲ್ಲ’ ಎಂದು ಆಪಾದಿಸಿದರು.
‘ನನ್ನನ್ನು ಅಕ್ರಮವಾಗಿ ಆಸ್ಪತ್ರೆಯಲ್ಲಿ ಬಂಧಿಸಲಾಯಿತು. ನನಗೆ ಚಿತ್ರಹಿಂಸೆ ಕೊಟ್ಟಿದ್ದರಿಂದ ನನ್ನ ಶ್ವಾಸಕೋಶಗಳು ಕೈಕೊಟ್ಟವು. ಇವೆಲ್ಲ ನನ್ನ ಕಥೆಯ ಭಾಗ ಮಾತ್ರ. ಆದರೆ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ’ ಎಂದರು.
ಈ ಮುನ್ನ ‘ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಹಿರಿಯ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದರು’ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ನಿವೃತ್ತ ಅಧಿಕಾರಿ ಮೆಹಬೂಬ್ ಮುಜಾವರ್ ಶುಕ್ರವಾರವಷ್ಟೇ ಗಂಭೀರ ಆರೋಪ ಮಾಡಿದ್ದರು. ಮಿಲಿಂದ್ ಜೋಶಿರಾಂ ಎಂಬ ಸಾಕ್ಷಿ ಕೂಡ ‘ಯೋಗಿ ಹೆಸರು ಹೇಳಲು ಒತ್ತಡವಿತ್ತು’ ಎಂದಿದ್ದರು.