ವಾರಾಣಸಿ : ‘ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ’ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ವಿಶ್ವ ಆರ್ಥಿಕತೆ ಎದುರಿಸುತ್ತಿರುವ ಅಸ್ಥಿರತೆ ಮತ್ತು ಅನಿಶ್ಚಿತತೆಯ ನಡುವೆಯೂ ದೇಶವು ತನ್ನದೇ ಆದ ಆರ್ಥಿಕ ಆದ್ಯತೆಗಳ ಬಗ್ಗೆ ಎಚ್ಚರದಿಂದಿರಬೇಕು. ಸ್ವದೇಶಿ ಉತ್ಪನ್ನಗಳತ್ತ ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.
ಈ ಮೂಲಕ ‘ಭಾರತದ ಆರ್ಥಿಕತೆ ಸತ್ತಿದೆ’ ಎಂದು ಹೇಳಿ ಭಾರತದ ವಸ್ತುಗಳ ಮೇಲೆ ಶೇ.25 ಆಮದು ಸುಂಕ ಹೇರಿದ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.
ಶನಿವಾರ ವಾರಾಣಸಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಜಾಗತಿಕ ಆರ್ಥಿಕತೆಯು ಅಸ್ಥಿರತೆ ಮತ್ತು ಅನಿಶ್ಚಿತತೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಿರುವಾದ ರಾಷ್ಟ್ರಗಳು ತಮ್ಮ ಹಿತಾಸಕ್ತಿಯ ಬಗ್ಗೆ ಯೋಚಿಸುತ್ತಿವೆ. ಭಾರತವು 3ನೇ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದು, ನಮಗೆ ನಮ್ಮ ಆರ್ಥಿಕ ಆದ್ಯತೆಯ ಅರಿವಿರಬೇಕು. ಇದಕ್ಕೆ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದು ಅಗತ್ಯ’ ಎಂದು ಪ್ರಸ್ತುತ ಸ್ಥಿತಿಯನ್ನು ವಿವರಿಸಿದರು.
‘ಎಲ್ಲರೂ ಸ್ವದೇಶಿ ಮನೋಭಾವವನ್ನು ಅಳವಡಿಸಿಕೊಳ್ಳಿ. ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದೇ ನಿಜವಾದ ದೇಶಸೇವೆ’ ಎಂದ ಮೋದಿ, ‘ರೈತರು, ಸಣ್ಣ ಕೈಗಾರಿಕೆಗಳು ಮತ್ತು ಯುವಕರಿಗೆ ಉದ್ಯೋಗವು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜತೆಗೆ, ನಾಗರಿಕರಾದ ನಮ್ಮ ಮೇಲೆಯೂ ಕೆಲ ಜವಾಬ್ದಾರಿಗಳಿವೆ. ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಬೇಕೆಂದರೆ, ಪ್ರತಿಯೊಂದು ರಾಜಕೀಯ ಪಕ್ಷ ಮತ್ತು ನಾಯಕರು ತಮ್ಮ ಹಿಂಜರಿಕೆಗಳನ್ನು ಬದಿಗಿಟ್ಟು, ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು ಮತ್ತು ಜನರಲ್ಲಿ ಸ್ವದೇಶಿ ಮನೋಭಾವವನ್ನು ಜಾಗೃತಗೊಳಿಸಬೇಕು. ಪ್ರತಿಯೊಂದು ವಸ್ತುವನ್ನು ಖರೀದಿಸುವಾಗಲೂ, ಇದರ ತಯಾರಿಯಲ್ಲಿ ಭಾರತೀಯರ ಶ್ರಮವಿದೆಯೇ ಎಂಬುದನ್ನು ನೋಡಬೇಕು’ ಎಂದರು.
ಅಂತೆಯೇ, ‘ನಮ್ಮ ಅಂಗಡಿ, ಮಾರುಕಟ್ಟೆಗಳಲ್ಲಿ ಸ್ವದೇಶಿ ಸರಕುಗಳನ್ನು ಮಾತ್ರ ಮಾರುವ ಪ್ರತಿಜ್ಞೆ ಮಾಡೋಣ. ಭಾರತದಲ್ಲಿ ತಯಾರಿಸಿದ ಸರಕುಗಳನ್ನು ಪ್ರಚಾರ ಮಾಡುವುದು ನಿಜವಾದ ದೇಶಸೇವೆಯಾಗಿದೆ. ಇದು ಮಹಾತ್ಮ ಗಾಂಧಿಯವರಿಗೆ ಸಲ್ಲಿಸುವ ಗೌರವವೂ ಹೌದು’ ಎಂದು ವರ್ತಕರಿಗೆ ಕರೆ ನೀಡಿದರು.
ರಷ್ಯಾದಿಂದ ಭಾರತ ತೈಲ ಖರೀದಿ ಸ್ಥಗಿತ: ಒಳ್ಳೆ ಹೆಜ್ಜೆ: ಟ್ರಂಪ್
ವಾಷಿಂಗ್ಟನ್: ‘ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ತರಿಸಿಕೊಳ್ಳುವುದಿಲ್ಲ ಎಂದು ಕೇಳಲ್ಪಟ್ಟಿದ್ದೇನೆ. ಅದು ನಿಜವೋ ಅಲ್ಲವೋ ತಿಳಿದಿಲ್ಲ. ಆದರೆ ಅದು ನಿಜವೇ ಆಗಿದ್ದರೆ ಒಳ್ಳೆಯ ನಡೆ. ಏನಾಗುತ್ತದೆ ನೋಡೋಣ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಷ್ಯಾದೊಂದಿಗಿನ ವ್ಯಾಪಾರ ಮುಂದುವರೆಸಿದರೆ ಅಂತಹ ದೇಶಗಳ ಮೇಲೆ ದಂಡ ವಿಧಿಸುವ ತಮ್ಮ ಬೆದರಿಕೆಗೆ ಬೆದರಿ ಭಾರತ ತಲೆಬಾಗಿದೆ ಎಂಬರ್ಥದಲ್ಲಿ ಟ್ರಂಪ್ ಹೇಳಿಕೆ ನೀಡಿದ್ದಾರೆ.
ರಷ್ಯಾದಿಂದ ತೈಲ ಆಮದು ನಿಲ್ಲಿಸಿಲ್ಲ: ಭಾರತ ಸ್ಪಷ್ಟನೆ
ನವದೆಹಲಿ: ರಷ್ಯಾದಿಂದ ತೈಲ ಆಮದು ಸ್ಥಗಿತ ಕುರಿತ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಭಾರತ ಸರ್ಕಾರದ ಮೂಲಗಳು ಅಲ್ಲಗಳೆದಿವೆ. ‘ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೇ ಜಾಗತಿಕವಾಗಿ ಇಂಧನದ ಬೆಲೆ ಸ್ಥಿರವಾಗಿದೆ. ಒಪೆಕ್ ದೇಶಗಳು ತೈಲ ಉತ್ಪಾದನೆ ಕಡಿತಗೊಳಿಸಿದ ಪರಿಣಾಮ ಭಾರತ ರಿಯಾಯಿತಿ ದರದಲ್ಲಿ ರಷ್ಯಾ ತೈಲ ಖರೀದಿಸುತ್ತಿದೆ. ಹೀಗೆ ಮಾಡಿರದಿದ್ದರೆ, ಜಾಗತಿಕ ಇಂಧನ ಬೆಲೆ ವೇಗವಾಗಿ ಏರಿಬಿಡುತ್ತಿತ್ತು’ ಎಂದು ಮೂಲಗಳು ಸ್ಪಷ್ಟಪಡಿಸಿವೆ.