ಭಾರತದ ವಿರುದ್ಧ ಶ್ರೀಲಂಕಾ ಭೂಮಿ ಬಳಕೆಯಾಗದು : ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ಭರವಸೆ

KannadaprabhaNewsNetwork |  
Published : Apr 06, 2025, 01:49 AM ISTUpdated : Apr 06, 2025, 08:09 AM IST
ಲಂಕಾ | Kannada Prabha

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ, ‘ಭಾರತದ ಭದ್ರತೆಗೆ ಹಾನಿ ಮಾಡುವಂತಹ ಯಾವುದೇ ಚಟುವಟಿಕೆಗಳಿಗೆ ಶ್ರೀಲಂಕಾದ ಭೂಮಿಯನ್ನು ಬಳಸಲು ಬಿಡುವುದಿಲ್ಲ’ ಎಂದು ಶ್ರೀಲಂಕಾ ಅಧ್ಯಕ್ಷ ಅನುರಕುಮಾರ ದಿಸ್ಸಾನಾಯಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.  

ಕೊಲಂಬೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ‘ಭಾರತದ ಭದ್ರತೆಗೆ ಹಾನಿ ಮಾಡುವಂತಹ ಯಾವುದೇ ಚಟುವಟಿಕೆಗಳಿಗೆ ಶ್ರೀಲಂಕಾದ ಭೂಮಿಯನ್ನು ಬಳಸಲು ಬಿಡುವುದಿಲ್ಲ’ ಎಂದು ಶ್ರೀಲಂಕಾ ಅಧ್ಯಕ್ಷ ಅನುರಕುಮಾರ ದಿಸ್ಸಾನಾಯಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ. ಲಂಕೆಯನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ಕತ್ತಿ ಮಸೆಯಲು ಯತ್ನಿಸುತ್ತಿದ್ದ ಚೀನಾಗೆ ಇದರಿಂದ ಭಾರಿ ಹಿನ್ನಡೆಯಾಗಿದೆ.

3 ದಿನಗಳ ಲಂಕಾ ಪ್ರವಾಸದಲ್ಲಿರುವ ಮೋದಿ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಸ್ಸಾನಾಯಕೆ, ‘ಅಗತ್ಯ ಸಮಯದಲ್ಲಿ ಭಾರತ ನೀಡಿದ ನೆರವು ಹಾಗೂ ನಿರಂತರ ಒಗ್ಗಟ್ಟನ್ನು ಲಂಕಾ ಸದಾ ಸ್ಮರಿಸುತ್ತದೆ. ಭಾರತದ ಭದ್ರತೆಗೆ ಹಾನಿ ಮಾಡುವಂತಹ ಹಾಗೂ ಪ್ರಾದೇಶಿಕ ಭದ್ರತೆಗೆ ಧಕ್ಕೆ ಆಗುವಂಥ ಯಾವುದೇ ಚಟುವಟಿಕೆಗಳಿಗೆ ಶ್ರೀಲಂಕಾದ ಭೂಮಿಯನ್ನು ಬಳಸಲು ನಾವು ಬಿಡುವುದಿಲ್ಲ’ ಎಂದು ಹೇಳಿದರು.

ಮೋದಿ ಕೃತಜ್ಞತೆ:

ಬಳಿಕ ಮಾತನಾಡಿದ ಮೋದಿ, ‘ಎರಡೂ ದೇಶಗಳ ಭದ್ರತಾ ಆಸಕ್ತಿಗಳು ಸಾಮ್ಯವಾಗಿವೆ. ಭಾರತದ ಆಸಕ್ತಿಯ ಬಗ್ಗೆ ದಿಸಾನಾಯಕೆ ಅವರ ಸೂಕ್ಷ್ಮತೆಗೆ ಕೃತಜ್ಞನಾಗಿದ್ದೇನೆ’ ಎಂದರು. ಅಲ್ಲದೆ, ಶ್ರೀಲಂಕಾದಲ್ಲಿನ ಭಾರತೀಯರ ರಕ್ಷಣೆಗೆ ಸಲಕ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಅಂತೆಯೇ, ಸಾಂಪುರ ಸೌರ ವಿದ್ಯುತ್ ಸ್ಥಾವರಕ್ಕೆ ಉಭಯ ನಾಯಕರು ವರ್ಚುವಲ್‌ ಚಾಲನೆ ನೀಡಿದರು. ‘ಇದರಿಂದ ಲಂಕಾಗೆ ವಿದ್ಯುತ್‌ ಭದ್ರತೆ ದೊರಯುತ್ತದೆ. ವಿವಿಧ ವಸ್ತುಗಳ ಸಾಗಣೆಗೆ ನಿರ್ಮಿಸಲಾಗುವ ಪೈಪ್‌ಲೈನ್‌ನಿಂದ ಇಲ್ಲಿನ ಜನರಿಗೆ ಅನುಕೂಲವಾಗಿದೆ’ ಎಂದು ಮೋದಿ ಬಣ್ಣಿಸಿದರು.

ಮೋದಿಗೆ ಶ್ರೀಲಂಕಾದ ಅತ್ಯುಚ್ಚ ನಾಗರಿಕ ಗೌರವ

- ಅಧ್ಯಕ್ಷರಿಂದ ಮಿತ್ರ ವಿಭೂಷಣ ಪ್ರಶಸ್ತಿ ಪ್ರದಾನ

ಕೊಲಂಬೋ: ಶ್ರೀಲಂಕಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಂಕೆಯ ಅತ್ಯುಚ್ಚ ನಾಗರಿಕ ಗೌರವವಾದ ಮಿತ್ರ ವಿಭೂಷಣ ಪ್ರಶಸ್ತಿಯನ್ನು ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಶನಿವಾರ ಪ್ರದಾನ ಮಾಡಿದ್ದಾರೆ. ಇದರೊಂದಿಗೆ ಮೋದಿ ಅವರು 22 ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದಂತಾಗಿದೆ.2008ರಲ್ಲಿ ಮಹಿಂದ ರಾಜಪಕ್ಸೆ ಅವಧಿಯಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಪ್ರತಿ ಮೋದಿಯವರ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ.

ಅಧ್ಯಕ್ಷೀಯ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರಿಗೆ ಪ್ರಶಸ್ತಿ ಫಲಕದೊಂದಿಗೆ, ಲಂಕಾದ 9 ವಿಧದ ರತ್ನ, ತಾವರೆ, ಭೂಗೋಳ, ಸೂರ್ಯ, ಚಂದ್ರ, ಭತ್ತದ ತೆನೆಯ ಚಿಹ್ನೆಯುಳ್ಳ ಬೆಳ್ಳಿಯ ಪದಕ ತೊಡಿಸಲಾಯಿತು. ಬಳಿಕ ಮಾತನಾಡಿದ ಮೋದಿ, ‘ಇದನ್ನು ಪಡೆಯುವುದು ನನ್ನ ಪಾಲಿಗೆ ಹಾಗೂ 1.4 ಶತಕೋಟಿ ಭಾರತೀಯರ ಪಾಲಿಗೆ ಗೌರವವಾಗಿದೆ’ ಎಂದು ಹರ್ಷಿಸಿದರು.ಮಿತ್ರ ವಿಭೂಷಣ ಪ್ರಶಸ್ತಿಯನ್ನು ಈ ಮೊದಲು ಮಾಲ್ಡೀವ್ಸ್‌ನ ಪ್ರಧಾನಿ ಮೌಮೂನ್ ಅಬ್ದುಲ್ ಗಯೂಮ್ ಹಾಗೂ ಪ್ಯಾಲೆಸ್ತೀನ್‌ನ ನಾಯಕರಾಗಿದ್ದ ಯಾಸಿರ್‌ ಅರಾಫತ್‌ ಅವರಿಗೆ ಕೊಡಲಾಗಿತ್ತು.

ಚೀನಾಗೆ ಭಾರತ ಸಡ್ಡು: ಲಂಕಾ ಜತೆ ರಕ್ಷಣಾ ಒಪ್ಪಂದ

ಕೊಲಂಬೋ: ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀಲಂಕಾ ಭೇಟಿ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿ ಭಾರತ ಹಾಗೂ ಶ್ರೀಲಂಕಾ ರಕ್ಷಣಾ ಒಪ್ಪಂದ ಹಾಗೂ ಇಂಧನ ಕೇಂದ್ರ ಸ್ಥಾಪನೆ ಒಪ್ಪಂದ ಸೇರಿ 7 ಒಡಂಬಡಿಕೆಗೆ ಸಹಿ ಹಾಕಿವೆ. ಇವು ಈ ಪ್ರದೇಶದಲ್ಲಿ ಚೀನಾ ಪ್ರಭಾವ ತಗ್ಗಿಸಲು ಸಹಕಾರಿಯಾಗಲಿವೆ.

ಲಂಕಾ ಅಧ್ಯಕ್ಷ ಅನುರಕುಮಾರ ದಿಸ್ಸಾನಾಯಕೆ ಜತೆಗಿನ ಭೇಟಿ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.ರಕ್ಷಣಾ ಒಪ್ಪಂದದ ಸ್ವರೂಪವೇನು ಎಂಬುದನ್ನು ಎರಡೂ ದೇಶಗಳು ಬಹಿರಂಗಪಡಿಸಿಲ್ಲ. ಆದರೆ ಲಂಕಾದಲ್ಲಿ ಭಾರತ 35 ವರ್ಷ ಹಿಂದೆ ಶಾಂತಿ ಪಡೆಗಳನ್ನು ನಿಯೋಜಿಸಿದ ನಂತರದ ಮಹತ್ವದ ಒಪ್ಪಂದ ಇದಾಗಿದೆ.

ಇದೇ ವೇಳೆ ಭಾರತಕ್ಕೆ ಹತ್ತಿರ ಇರುವ ಟ್ರಿಂಕೋಮಲಿ ಬಂದರನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇಲ್ಲಿ ಯುಎಇ ಜತೆಗೂಡಿ ಭಾರತ ಇಂಧನ ಕೇಂದ್ರ ಅಭಿವೃದ್ಧಿಪಡಿಸಲಿದೆ. ಇಲ್ಲಿ ಇಂಡಿಯನ್‌ ಆಯಿಲ್‌ ತನ್ನ ತೈಲ ಕೇಂದ್ರ ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ಇದರ ಜತೆಗೆ ಟ್ರಿಂಕೋಮಲಿಯು ಸಾಗರ ತಳದ ಸಂಶೋಧನೆ, ಭಾರತದ ಹಡಗು ಲಂಗರು ಹಾಕಲು ಸಹಕಾರಿ ಆಗಲಿದೆ.ಈಗಾಗಲೇ ಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಅಭಿವೃದ್ಧಿಪಡಿಸಿ ತನ್ನ ಪ್ರಭಾವ ಹೊಂದಿದೆ. ಆದರೆ ಭಾರತದ ಹೊಸ ನಡೆಯು ಲಂಕಾದಲ್ಲಿನ ಚೀನಾ ಪ್ರಭಾವ ತಗ್ಗಿಸಲಿದೆ. ಇದನ್ನು ವ್ಯೂಹಾತ್ಮಕ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಕ್ರಮವೆಂದು ಪರಿಗಣಿಸಲಾಗಿದೆ.

ಭಾರತ-ಶ್ರೀಲಂಕಾ ಒಪ್ಪಂದಗಳು:

- ಮೊದಲ ಬಾರಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ. ಈ ಮೂಲಕ ಪರಸ್ಪರ ಸೇನಾ ಸಹಕಾರ, ಶಸ್ತ್ರಾಸ್ತ್ರ ಸಾಗಣೆ, ಇತ್ಯಾದಿ ರಕ್ಷಣಾ ವ್ಯವಹಾರ ಸುಲಭ

- ಭಾರತಕ್ಕೆ ಹತ್ತಿರ ಇರುವ ಟ್ರಿಂಕೋಮಲಿ ಬಂದರನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಂದ. ಈ ಮೂಲಕ ಸಾಗರ ತಳದ ಸಂಶೋಧನೆ, ಭಾರತದ ಹಡಗು ಲಂಗರು ಹಾಕಲು ಸಹಕಾರಿ

- ಶ್ರೀಲಂಕಾದ ಪೂರ್ವ ವಲಯದ ಅಭಿವೃದ್ಧಿಗೆ ಭಾರತದಿಂದ 240 ಕೋಟಿ ರು. ಅನುದಾನ- ಇದರಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಈ ಭಾಗದ ಏಳ್ಗೆ

- ಲಂಕಾಗೆ ನೀಡಲಿರುವ ಸಾಲದ ಬಡ್ಡಿ ಇಳಿಕೆಗೆ ಭಾರತ ಸಮ್ಮತಿ. ಆರೋಗ್ಯ, ಔಷಧ, ಡಿಜಿಟಲ್‌, ಇಂಧನ ಆಮದು-ರಫ್ತು ಒಪ್ಪಂದವೂ ಅಂತಿಮ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ