;Resize=(412,232))
ವಾಷಿಂಗ್ಟನ್ : ರಷ್ಯಾದಿಂದ ತೈಲ ಖರೀದಿ ವಿರೋಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸುತ್ತಿರುವುದರ ವಿರುದ್ಧ ಅಮೆರಿಕದಲ್ಲಿಯೇ ಅಪಸ್ವರ ಹೆಚ್ಚುತ್ತಿರುವ ನಡುವೆಯೇ, ‘ಭಾರತದ ಮೇಲೆ ಟ್ರಂಪ್ ವಿಧಿಸುತ್ತಿರುವ ತೆರಿಗೆಯು ಅಗೌರವಯುತ ಮತ್ತು ಅಜ್ಞಾನಯುತ ನೀತಿಯಾಗಿದೆ. ಭಾರತ ದೊಡ್ಡ ಹುಡುಗ, ಶಾಲಾ ಬಾಲಕನಲ್ಲ’ ಎಂದು ಸ್ವತಃ ಅಮೆರಿಕದ ಪತ್ರಕರ್ತ ರಿಕ್ ಸ್ಯಾಂಚೆಜ್ ಎಚ್ಚರಿಸಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಅಮೆರಿಕ ಭಾರತವನ್ನು ಶಾಲಾ ಬಾಲಕನ ರೀತಿ ನಡೆಸಿಕೊಳ್ಳಬಾರದು. ಭಾರತ ದೊಡ್ಡ ಹುಡುಗ, ಶಾಲಾ ಪೋರನಲ್ಲ. ಟ್ರಂಪ್ ಅವರ ನಿರ್ಧಾರಗಳು ಯಾವಾಗಲೂ ದ್ವೇಷ ಮತ್ತು ಅವೈಜ್ಞಾನಿಕ ಚಿಂತನೆಗಳಿಂದ ಮೊಳಕೆಯೊಡೆಯುತ್ತವೆ. ಅವರ ತೆರಿಗೆ ನೀತಿಯು ಬಹುತೇಕರ ದೃಷ್ಟಿಯಲ್ಲಿ ಅಸಂಬದ್ಧವಾಗಿದೆ’ ಎಂದು ಟೀಕಿಸಿದ್ದಾರೆ.
ನವರೋ ಹೇಳಿಕೆ ಹಾಸ್ಯಾಸ್ಪದ:
ಇತ್ತೀಚೆಗೆ, ರಷ್ಯಾ-ಉಕ್ರೇನ್ ಯುದ್ಧವನ್ನು ‘ಮೋದಿ ಯುದ್ಧ’ ಎಂದು ಟೀಕಿಸಿದ್ದ ಟ್ರಂಪ್ ಅವರ ಸಲಹೆಗಾರ ಪೀಟರ್ ನವರೋ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸ್ಯಾಂಚೆಜ್, ‘ನವರೋ ಹೇಳಿಕೆ ಖಂಡಿತವಾಗಿಯೂ ಹಾಸ್ಯಾಸ್ಪದ. ಅವರ ಬೌದ್ಧಿಕ ಸಾಮರ್ಥ್ಯ ಸೀಮಿತವಾಗಿದೆ. ಅವರನ್ನು ಎಂದಿಗೂ ಒಬ್ಬ ಮಹತ್ವದ ಬುದ್ಧಿಜೀವಿ ಎಂದು ಪರಿಗಣಿಸಲಾಗಿಲ್ಲ’ ಎಂದರು.