ನಾವು ಸ್ನೇಹಿತರೇ ಹೊರತು ವೈರಿಗಳಲ್ಲ : ಚೀನಾ ಅಧ್ಯಕ್ಷ

KannadaprabhaNewsNetwork |  
Published : Sep 01, 2025, 01:03 AM IST
ಚೀನಾ | Kannada Prabha

ಸಾರಾಂಶ

ಭಾರತ ಮತ್ತು ಚೀನಾ ಪರಸ್ಪರ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ. ಗಡಿ ಸಮಸ್ಯೆಯು ತಮ್ಮ ಸಂಬಂಧವನ್ನು ನಿರ್ಧರಿಸಲು ಎರಡೂ ದೇಶಗಳು ಆಸ್ಪದ ಮಾಡಿಕೊಡಬಾರದು. ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಕುಣಿಯುವಂತಾಗಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಪೇಕ್ಷಿಸಿದ್ದಾರೆ.

 ಟಿಯಾಂಜಿನ್‌: ಭಾರತ ಮತ್ತು ಚೀನಾ ಪರಸ್ಪರ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ. ಗಡಿ ಸಮಸ್ಯೆಯು ತಮ್ಮ ಸಂಬಂಧವನ್ನು ನಿರ್ಧರಿಸಲು ಎರಡೂ ದೇಶಗಳು ಆಸ್ಪದ ಮಾಡಿಕೊಡಬಾರದು. ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಕುಣಿಯುವಂತಾಗಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಪೇಕ್ಷಿಸಿದ್ದಾರೆ.

ಶಾಂಘೈ ಶೃಂಗಸಭೆಗಾಗಿ ಚೀನಾಕ್ಕೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸಿದ ಅವರು ಭಾರತ ಮತ್ತು ಚೀನಾ ಸಂಬಂಧ ಉತ್ತಮಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ನರ್ತಿಸಲಿ:

‘ಭಾರತ ಮತ್ತು ಚೀನಾ ಸಹಕಾರದ ಪಾಲುದಾರರು, ವೈರಿಗಳಲ್ಲ. ಹಾಗೆಯೇ ಎರಡೂ ದೇಶಗಳು ಪರಸ್ಪರರ ಪ್ರಗತಿಯ ಅವಕಾಶಗಳೇ ಹೊರತು ಬೆದರಿಕೆಗಳಲ್ಲ. ಇಬ್ಬರೂ ಉತ್ತಮ ನೆರೆಹೊರೆಯ ಮತ್ತು ಸೌಹಾರ್ದಯುತ ಸಂಬಂಧ ಹೊಂದಿರುವ ಸ್ನೇಹಿತರಾಗುವುದು, ಪರಸ್ಪರರ ಯಶಸ್ಸಿಗೆ ಪಾಲುದಾರರಾಗುವುದು ಮತ್ತು ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ನೃತ್ಯ ಮಾಡುವಂತೆ ಮಾಡುವುದು ಸರಿಯಾದ ಆಯ್ಕೆಯಾಗಿದೆ’ ಎಂದರು.

ಬಹುಪಕ್ಷೀಯತೆ ಎತ್ತಿ ಹಿಡಿಯೋಣ:

‘ಬಹುಪಕ್ಷೀಯತೆಯನ್ನು ಎತ್ತಿಹಿಡಿಯುವ, ಬಹುಧ್ರುವೀಯ ಜಗತ್ತನ್ನು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಹೆಚ್ಚಿನ ಪ್ರಜಾಪ್ರಭುತ್ವವನ್ನು ತರಲು ಒಟ್ಟಾಗಿ ಕೆಲಸ ಮಾಡುವ, ಏಷ್ಯಾ ಹಾಗೂ ಪ್ರಪಂಚದಾದ್ಯಂತ ಶಾಂತಿ, ಸಮೃದ್ಧಿಗೆ ಕೊಡುಗೆಗಳನ್ನು ನೀಡುವ ನಮ್ಮ ಐತಿಹಾಸಿಕ ಜವಾಬ್ದಾರಿಯನ್ನು ನಾವು ಹೆಚ್ಚಿಸಬೇಕಿದೆ’ ಎಂದು ಆಶಿಸಿದರು.

ಪ್ರಾಚೀನ ನಾಗರಿಕತೆಗಳ ಹೆಮ್ಮೆ:

ಭಾರತ ಮತ್ತು ಚೀನಾ ಅತ್ಯಂತ ಪ್ರಾಚೀನ ನಾಗರಿಕತೆಗಳನ್ನು ಹೊಂದಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಕ್ಸಿ, ‘ಜಗತ್ತು ಪ್ರಸ್ತುತ ಶತಮಾನಕ್ಕೊಮ್ಮೆ ಸಂಭವಿಸುವ ರೂಪಾಂತರಗಳ ಮೂಲಕ ಸಾಗುತ್ತಿದೆ. ಅಂತಾರಾಷ್ಟ್ರೀಯ ಪರಿಸ್ಥಿತಿ ಅಸ್ಥಿರ ಮತ್ತು ಅಸ್ತವ್ಯಸ್ತವಾಗಿದೆ. ಚೀನಾ ಮತ್ತು ಭಾರತ 2 ಪ್ರಾಚೀನ ನಾಗರಿಕತೆಗಳಾಗಿವೆ. ನಾವು ವಿಶ್ವದ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಮತ್ತು ಜಾಗತಿಕ ದಕ್ಷಿಣದ ಅತ್ಯಂತ ಹಳೆಯ ಸದಸ್ಯರೂ ಆಗಿದ್ದೇವೆ. ಪರಸ್ಪರ ನಂಬಿಕೆಯನ್ನು ಗಾಢವಾಗಿಸಲು, ವಿನಿಮಯಗಳನ್ನು ವಿಸ್ತರಿಸಲು, ಸಾಮರಸ್ಯವನ್ನು ಹೆಚ್ಚಿಸಲು, ಸಾಮಾನ್ಯ ಹಿತಾಸಕ್ತಿಗಳನ್ನು ಕಾಪಾಡಲು ಒಟ್ಟಿಗೆ ಕೆಲಸ ಮಾಡೋಣ’ ಎಂದರು.

ಚೀನಾದಲ್ಲಿ ಓಡಾಡಲು ಮೋದಿಗೆ ತಮ್ಮ ನೆಚ್ಚಿನ ಕಾರು ಕೊಟ್ಟ ಅಧ್ಯಕ್ಷ ಕ್ಸಿ

ಬೀಜಿಂಗ್‌: ಶಾಂಘೈ ಶೃಂಗಸಭೆಗಾಗಿ ಚೀನಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ತಮ್ಮ ನೆಚ್ಚಿನ ಕಾರನ್ನು ಅಧಿಕೃತ ಸಂಚಾರಕ್ಕಾಗಿ ಕೊಟ್ಟಿದ್ದಾರೆ. ‘ರೆಡ್‌ ಫ್ಯಾಗ್‌’ ಎಂಬ ಹೆಸರಿನಿಂದ ಕರೆಯಲ್ಪಡುವ ಕಾರನ್ನು ಕ್ಸಿ ಅವರು ತಮ್ಮ ಅಧಿಕೃತ ಭೇಟಿಗಾಗಿ ಬಳಸುತ್ತಿದ್ದರು. 2019ರಲ್ಲಿ ತಮಿಳುನಾಡಿನ ಮಹಾಬಲಿಪುರಂಗೆ ಭೇಟಿ ನೀಡಿದಾಗಲು ಸಹ ಇದನ್ನೇ ಬಳಸಿದ್ದರು. ಇದು ಅವರ ನೆಚ್ಚಿನ ಕಾರಾಗಿದ್ದು, ಅದನ್ನೇ ಮೋದಿ ಅವರ ಓಡಾಟಕ್ಕೆ ನಿಗದಿಪಡಿಸಿದ್ದಾರೆ.

2026ರ ಬ್ರಿಕ್ಸ್‌ ಸಭೆಗೆ ಭಾರತಕ್ಕೆ ಬರುವಂತೆ ಕ್ಸಿಗೆ ಮೋದಿ ಆಹ್ವಾನ

ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಗೆ ಭಾರತಕ್ಕೆ ಆಗಮಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಅಧ್ಯಕ್ಷ ಕ್ಸಿ ಅವರು ಪ್ರಧಾನಿ ಮೋದಿ ಅವರ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಜೊತೆಗೆ ಮುಂದಿನ ವರ್ಷ ಭಾರತದ ಬ್ರಿಕ್ಸ್‌ ಅಧ್ಯಕ್ಷತೆಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ