ನವದೆಹಲಿ : ‘ಆಪರೇಷನ್ ಸಿಂದೂರದಲ್ಲಿ ನಮ್ಮ ಧೈರ್ಯವಂತ ಯೋಧರು ಶತ್ರುಗಳಿಗೆ ಅವರು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಶಿಕ್ಷೆ ನೀಡಿದ್ದಾರೆ. ನಮ್ಮ ರಕ್ಷಣಾ ಪಡೆಗಳ ಶೌರ್ಯ ಮತ್ತು ನಿಖರತೆಗೆ ಆಪರೇಷನ್ ಸಿಂದೂರ ಒಂದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಬೆದರಿಕೆಗೆ ಯಾವತ್ತೂ ಭಾರತ ಬಗ್ಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಶುಕ್ರವಾರ ಮಾತನಾಡಿದ ಅವರು, ಆಪರೇಷನ್ ಸಿಂದೂರದಲ್ಲಿ ಅಪ್ರತಿಮ ಸಾಧನೆ ತೋರಿದ ಭಾರತೀಯ ಸೈನಿಕರನ್ನು ಕೊಂಡಾಡಿ, ಶತ್ರುದೇಶ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು. ‘ಇಂದು, ಆಪರೇಷನ್ ಸಿಂದೂರದಲ್ಲಿ ಭಾಗವಹಿಸಿದ ವೀರ ಸೈನಿಕರಿಗೆ ಕೆಂಪುಕೋಟೆಯಿಂದ ವಂದನೆ ಸಲ್ಲಿಸುವ ಅವಕಾಶ ನನಗೆ ದೊರಕಿದೆ. ನಮ್ಮ ಧೈರ್ಯವಂತ ಯೋಧರು ಶತ್ರುಗಳಿಗೆ ಅವರು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಶಿಕ್ಷೆ ನೀಡಿದ್ದಾರೆ. ಶತ್ರುವಿನ ಮಣ್ಣಿನ ನೂರಾರು ಕಿ.ಮೀ. ಒಳಗೆ ಹೋಗಿ ಅವರ ಉಗ್ರನೆಲೆಗಳನ್ನು ನೆಲಸಮ ಮಾಡಿದೆವು. ನಮ್ಮ ಪಡೆಗಳ ಶೌರ್ಯ ಮತ್ತು ನಿಖರತೆಗೆ ಆಪರೇಷನ್ ಸಿಂದೂರ ಒಂದು ಪ್ರಬಲ ಸಾಕ್ಷಿಯಾಗಿದೆ’ ಎಂದರು.
‘ಉಗ್ರರು ಹಾಗೂ ಅವರಿಗೆ ಸಹಾಯ ಮಾಡುವವರನ್ನು ಸಮಾನವಾಗಿ ಕಾಣುವ ಪದ್ಧತಿಯನ್ನು ನಾವು ಸ್ಥಾಪಿಸಿದ್ದೇವೆ. ಮಾನವೀಯತೆಗೆ ಅವರಿಬ್ಬರೂ ಸಮನಾದ ಶತ್ರುಗಳು. ಅಣುದಾಳಿ ಬೆದರಿಕೆಗೆ ಭಾರತ ಬಗ್ಗುವುದಿಲ್ಲ ಎಂದು ನಾವು ತೋರಿಸಿಕೊಟ್ಟಿದ್ದೇವೆ. ಶತ್ರುಗಳು ಅಂಥ ಕೆಲಸವನ್ನೇನಾದರೂ ಮಾಡಿದರೆ ನಮ್ಮ ರಕ್ಷಣಾ ಪಡೆಗಳು ಗುರಿಗಳನ್ನು ಪತ್ತೆ ಹಚ್ಚಿ, ನಿಯಮಗಳನ್ನು ಹೊಂದಿಸಿ, ಸಮಯ ನೋಡಿ ಹೊಡೆಯುತ್ತವೆ. ನಾವು ಆ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.
ಅಕ್ರಮ ನುಸುಳುಕೋರರ ಬಿಕ್ಕಟ್ಟು ನಿವಾರಣೆಗೆ ‘ಡೆಮಾಗ್ರಫಿ ಮಿಷನ್’
ನವದೆಹಲಿ: ಅಕ್ರಮ ಒಳನುಸುಳುವಿಕೆ ಮೂಲಕ ದೇಶದ ಜನಸಂಖ್ಯಾ ಸಂರಚನೆಯನ್ನೇ ಬದಲಾಯಿಸುವ ಪೂರ್ವ ಯೋಜಿತ ಸಂಚು ನಡೆಯುತ್ತಿದೆ. ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯಕಾರಿ. ಇಂಥ ಅಕ್ರಮ ನುಸುಳುಕೋರರ ಸಮಸ್ಯೆಗೆ ಕಡಿವಾಣ ಹಾಕಲು ಉನ್ನತಮಟ್ಟದ ‘ಡೆಮಾಗ್ರಫಿ ಮಿಷನ್’ ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
79ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಡೆಮಾಗ್ರಫಿ ಮಿಷನ್ ದೇಶದಲ್ಲಿ ಸೃಷ್ಟಿಸಲಾಗುತ್ತಿರುವ ಈ ಅಕ್ರಮ ನುಸುಳುಕೋರರ ಬಿಕ್ಕಟ್ಟನ್ನು ಯೋಜಿತವಾಗಿ ಹಾಗೂ ಕಾಲಮಿತಿಯೊಳಗೆ ಪರಿಹರಿಸಲಿದೆ ಎಂದು ಇದೇ ವೇಳೆ ತಿಳಿಸಿದರು.ಅಕ್ರಮ ನುಸುಳುವಿಕೆಯನ್ನು ಯಾವ ದೇಶವೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಹಿರಿಯರು ಭಾರತೀಯರ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಹೀಗಾಗಿ ಅಕ್ರಮ ನುಸುಳುವಿಕೆಯಂಥ ಚಟುವಟಿಕೆಯನ್ನು ವಿರೋಧಿಸುವುದು ಎಲ್ಲ ನಾಗರಿಕರ ಕರ್ತವ್ಯವಾಗಿದೆ ಎಂದು ಮೋದಿ ಹೇಳಿದರು
‘ನಮ್ಮಲ್ಲಿ ಹೊಸ ಬಿಕ್ಕಟ್ಟೊಂದು ಸೃಷ್ಟಿಯಾಗುತ್ತಿದೆ. ಇದರ ಕುರಿತು ದೇಶವನ್ನು ಎಚ್ಚರಿಸಲು ಬಯಸುತ್ತೇನೆ. ಪೂರ್ವಯೋಜಿತ ಸಂಚಿನ ಭಾಗವಾಗಿ ದೇಶದ ಜನಸಂಖ್ಯಾ ಸಂರಚನೆಯನ್ನೇ ಬದಲಾಯಿಸುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ. ದೇಶದಲ್ಲಿ ಹೊಸ ಬಿಕ್ಕಟ್ಟಿನ ಬೀಜ ಬಿತ್ತಲಾಗುತ್ತಿದೆ. ಒಳನುಸುಳುಕೋರರು ನಮ್ಮ ಯುವಕರ ದುಡಿಮೆಯನ್ನೇ ಕಿತ್ತುಕೊಳ್ಳುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳು ಮತ್ತು ಸೋದರಿಯರನ್ನು ಗುರಿ ಮಾಡುತ್ತಿದ್ದಾರೆ. ನಮ್ಮ ಗುಡ್ಡಗಾಡು ಜನರನ್ನು ವಂಚಿಸಿ ಅವರ ಅರಣ್ಯಭೂಮಿ ಕಿತ್ತುಕೊಳ್ಳುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಇದೇ ವೇಳೆ ಮೋದಿ ಗುಡುಗಿದರು.ಈ ಬಿಕ್ಕಟ್ಟಿಗೆ ಕಡಿವಾಣ ಹಾಕಲೆಂದೇ ಕೇಂದ್ರ ಸರ್ಕಾರ ಉನ್ನತಮಟ್ಟದ ‘ಡೆಮಾಗ್ರಫಿ ಮಿಷನ್’ ಆರಂಭಿಸಲು ನಿರ್ಧರಿಸಿದೆ. ಕೆಂಪುಕೋಟೆಯ ಆವರಣದಲ್ಲಿ ನಿಂತು ನಾನು ಈ ಘೋಷಣೆ ಮಾಡುತ್ತಿದ್ದೇನೆ. ಇದು ದೇಶದಲ್ಲಿ ಸೃಷ್ಟಿಯಾಗುತ್ತಿರುವ ಈ ಅಕ್ರಮನುಸುಳುಕೋರರ ಬಿಕ್ಕಟ್ಟಿಗೆ ಕಡಿವಾಣ ಹಾಕಲಿದೆ ಮತ್ತು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಸೃಷ್ಟಿಯಾಗಲಿರುವ ಈ ಬಿಕ್ಕಟ್ಟನ್ನು ಯೋಜಿತ, ಕ್ರಮಬದ್ಧವಾಗಿ ಕಾಲಮಿತಿಯೊಳಗೆ ನಿಯಂತ್ರಣವೂ ಮಾಡಲಿದೆ ಎಂದು ತಿಳಿಸಿದರು.
ಈ ಜನಸಂಖ್ಯಾ ಸಂರಚನೆಯ ಬದಲಾವಣೆಯು ವಿಶೇಷವಾಗಿ ಗಡಿಭಾಗಗಳಲ್ಲಿ ಆಗುತ್ತಿವೆ. ಈ ಮೂಲಕ ಅವರು ದೇಶದಲ್ಲಿ ಭದ್ರತಾ ಬಿಕ್ಕಟ್ಟು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇದು ನಮ್ಮ ದೇಶದ ಏಕತೆ, ಸಮಗ್ರತೆ ಹಾಗೂ ಪ್ರಗತಿಯಲ್ಲೂ ಬಿಕ್ಕಟ್ಟು ಸೃಷ್ಟಿಸಲಿದೆ. ಸಾಮಾಜಿಕ ತಲೆನೋವಿನ ಬೀಜ ಬಿತ್ತಲಿದೆ. ವಿಶ್ವದ ಯಾವುದೇ ದೇಶವು ಇಂಥ ಅಕ್ರಮ ನುಸುಳುಕೋರರನ್ನು ಒಪ್ಪಿಕೊಳ್ಳುವುದಿಲ್ಲ. ಹಾಗಿದ್ದ ಮೇಲೆ ನಾವು ಹೇಗೆ ಭಾರತವನ್ನು ಅವರ ಕೈಗೆ ನೀಡಲು ಸಾಧ್ಯ? ಎಂದು ಪ್ರಶ್ನಿಸಿದರು. ಈ ಮೂಲಕ ಅಕ್ರಮ ಬಾಂಗ್ಲಾ ನಿವಾಸಿಗಳ ವಿಚಾರ ಪ್ರಸ್ತಾಪಿಸದೆ ಪರೋಕ್ಷವಾಗಿ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.
‘ಸುದರ್ಶನ ಚಕ್ರ’ ಸ್ವದೇಶಿ ವಾಯುರಕ್ಷಣಾ ವ್ಯವಸ್ಥೆಗೆ ಪಣ
ನವದೆಹಲಿ : ಭಾರತವು ಮುಂದಿನ 10 ವರ್ಷದಲ್ಲಿ ‘ಸುದರ್ಶನ ಚಕ್ರ’ ಎಂಬ ಸ್ವದೇಶಿ ವಾಯುರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿದ್ದು, ಇದು ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಅತ್ಯಂತ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಇತ್ತೀಚೆಗೆ ಪಾಕ್ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಭಾರತವು ರಷ್ಯಾ ನಿರ್ಮಿತ ಎಸ್400 ವಾಯುರಕ್ಷಣಾ ವ್ಯವಸ್ಥೆ ಸೇರಿ ಹಲವು ವಿದೇಶಿ ವಾಯುರಕ್ಷಣಾ ವ್ಯವಸ್ಥೆ ಬಳಸಿತ್ತು. ಹೀಗಾಗಿ ಈಗ ತನ್ನದೇ ಆದ ವ್ಯವಸ್ಥರ ರೂಪಿಸಲು ಮುಂದಾಗಿದೆ.
ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಸುದರ್ಶನ ಚಕ್ರ ವಾಯುರಕ್ಷಣಾ ವ್ಯವಸ್ಥೆಯು ಶತ್ರುಗಳ ಬೆದರಿಕೆಯನ್ನು ತಟಸ್ಥಗೊಳಿಸಿ, ಭಾರತದ ಆಕ್ರಮಣಕಾರಿ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ. ಈ ಮಿಷನ್‌ಗೆ ಕೃಷ್ಣನ ಸುದರ್ಶನ ಚಕ್ರದ ಹೆಸರು ಇಡಲಾಗಿದೆ. ಭಾರತವು ತನ್ನ ಶ್ರೀಮಂತವಾದ ಸಾಂಸ್ಕೃತಿಕ ಮತ್ತು ಪೌರಾಣಿಕ ಪರಂಪರೆಯಿಂದ ಸ್ಫೂರ್ತಿ ಪಡೆದು, ಆಧುನಿಕ ರಕ್ಷಣಾ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡುತ್ತದೆ’ ಎಂದು ಬಣ್ಣಿಸಿದರು.ಇದೇ ವೇಳೆ, ಜೆಟ್ ಇಂಜಿನ್‌ಗಳನ್ನು ದೇಶದಲ್ಲೇ ಉತ್ಪಾದಿಸುವಂತೆ ಭಾರತೀಯ ಸಂಶೋಧಕರು ಮತ್ತು ಯುವಕರಿಗೆ ಕರೆ ನೀಡಿದ ಮೋದಿ, ಭವಿಷ್ಯದ ರಕ್ಷಣಾ ತಂತ್ರಜ್ಞಾನಗಳು ಸಂಪೂರ್ಣ ಸ್ವದೇಶಿ ಮತ್ತು ಆತ್ಮನಿರ್ಭರವಾಗಿರುವ ವಿಶ್ವಾಸ ವ್ಯಕ್ತಪಡಿಸಿದರು.ಎಸ್400 ಅಲ್ಲದೆ, ಇಸ್ರೇಲ್‌ನ ಐರನ್ ಡೋಂ, ಅಮೆರಿಕದ ಗೋಲ್ಡನ್ ಡೋಂ- ಇವು ಪ್ರಸಿದ್ಧ ವಾಯುರಕ್ಷಣಾ ವ್ಯವಸ್ಥೆಗಳಾಗಿವೆ.