ಎಐ ಅನ್ನು ಜವಾಬ್ದಾರಿಯುತವಾಗಿ ಬಳಸುವ ಪ್ರತಿಜ್ಞೆ
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಎಐ ಶೃಂಗದಲ್ಲಿ ಇದೀಗ ಗಿನ್ನೆಸ್ ವಿಶ್ವದಾಖಲೆ ನಿರ್ಮಾಣವಾಗಿದೆ. ಈ ಶೃಂಗದಲ್ಲಿ ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಪ್ರತಿಜ್ಞೆ ಮಾಡಿದ್ದು ದಾಖಲೆಯಾಗಿದೆ.
ಸಮ್ಮೇಳನದ ಅವಧಿಯಲ್ಲಿ 5 ಸಾವಿರ ಮಂದಿ ವಿದ್ಯಾರ್ಥಿಗಳ ಪ್ರತಿಜ್ಞೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಇಲ್ಲಿ 2,50,946 ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಬ್ರಿಟನ್‌ನ ಗಿನ್ನೆಸ್ ವಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರ ಪ್ರವೀಣ್ ಪಟೇಲ್ ಹೇಳಿಕೊಂಡಿದ್ದಾರೆ.ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಎಐನ ಜವಾಬ್ದಾರಿಯುತ ಬಳಕೆಗಾಗಿನ ಪ್ರತಿಜ್ಞೆಗಾಗಿ ನಾವು ಶಾಲೆಗಳು, ಕಾಲೇಜುಗಳನ್ನು ತಲುಪಲು ಸಾಧ್ಯವಾಯಿತು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
==ಮ್ಯಾಕ್ರಾನ್ ಮೋದಿ ಎಐ ಹಾರ್ಟ್!
ಎಐ ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ತಾವು ಹಾಗೂ ಪ್ರಧಾನಿ ಮೋದಿ ಕೈಗಳನ್ನು ಹೃದಯದ ಆಕಾರದಲ್ಲಿಟ್ಟುಕೊಂಡಿರುವ ಎಐ ನಿರ್ಮಿತ ಫೋಟೋ ಹಂಚಿಕೊಂಡಿದ್ದು, ‘ಗೆಳೆಯರಿಬ್ಬರು ಒಟ್ಟಾದಾಗ ನಾವೀನ್ಯತೆ ಹಿಂಬಾಲಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.==
ಎಐ ಬಳಸಿ ಚೀನಾ ಅತಿಕ್ರಮಣ ವಿಫಲ ಮಾಡಿದ್ದೆವು: ಸೇನಾಧಿಕಾರಿಎಐ ಶೃಂಗಸಭೆಯಲ್ಲಿ ಲೆ.ಜ. ದಿನೇಶ್ ಸಿಂಗ್ ರಾಣಾ ಮಾಹಿತಿನವದೆಹಲಿ: ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಎಐ ತಂತ್ರಜ್ಞಾನ ಇದೀಗ ಭಾರತೀಯ ಸೇನೆಗೂ ಲಗ್ಗೆಯಿಟ್ಟಿದೆ. ಎಐ ನೆರವಿನಿಂದ ಸೇನೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಅತಿಕ್ರಮಣವನ್ನು ವಿಫಲಗೊಳಿಸಿತ್ತು ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್‌ನ ಕಮಾಂಡರ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದಿನೇಶ್ ಸಿಂಗ್ ರಾಣಾ ಇದನ್ನು ತಿಳಿಸಿದ್ದಾರೆ.‘ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಕೆಲವು ಕಡಿಮೆ ವೆಚ್ಚದ ಎಐ ಸಾಧನಗಳು ವಿವಾದಿತ ವಲಯದಲ್ಲಿ ಚೀನಾದ ಜಮಾವಣೆಗೂ ಮುನ್ನವೇ ನಮಗೆ ಮಾಹಿತಿ ನೀಡಿತ್ತು. ಅಲ್ಲಿ ಚೀನಾ ಅತಿಕ್ರಮಣಕ್ಕಾಗಿ ತನ್ನ ನೆಲೆಗಳನ್ನು ಸ್ಥಾಪಿಸುತ್ತಿರುವ ಬಗ್ಗೆ ನಮಗೆ ಎಚ್ಚರಿಕೆ ನೀಡಿತ್ತು. ಆಗ ನಮಗೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅವರ ನಡೆಯನ್ನು ಊಹಿಸಲು ಸಾಧ್ಯವಾಗಿ ಅವರ ಯೋಜನೆಯನ್ನು ವಿಫಲಗೊಳಿಸಿದ್ದೆವು’ ಎಂದಿದ್ದಾರೆ.
==ಎಐ ಶೃಂಗದಲ್ಲಿ ಚೀನಾ ಉತ್ಪನ್ನವನ್ನು ಭಾರತೀಯ ಎಂದು ಬಿಂಬಿಸಲೆತ್ನ: ರಾಗಾ ಕಿಡಿ
ಪಿಟಿಐ ನವದೆಹಲಿ‘ಎಐ ಶೃಂಗಸಭೆ ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನ’ ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಲ್ಲಿ ಚೀನಾದ ಉತ್ಪನ್ನಗಳನ್ನು ಭಾರತೀಯ ಉತ್ಪನ್ನ ಎಂದು ಬಿಂಬಿಸಿ ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ‘ಭಾರತದ ಪ್ರತಿಭೆ ಮತ್ತು ದತ್ತಾಂಶವನ್ನು ಬಳಸಿಕೊಳ್ಳುವ ಬದಲು, ಚೀನಾ ಉತ್ಪನ್ನ ಬಳಸಿಕೊಳ್ಳಲಾಗುತ್ತಿದೆ. ಎಐ ಶೃಂಗಸಭೆಯು ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನವಾಗಿದೆ. ಭಾರತೀಯ ದತ್ತಾಂಶ ಮಾರಾಟಕ್ಕೆ, ಚೀನೀ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ’ ಎಂದಿದ್ದಾರೆ.
ನೋಯ್ಡಾದ ಗಲ್ಗೋಟಿಯಾಸ್ ವಿವಿ ಎಐ ಶೃಂಗಸಭೆಯ ಎಕ್ಸ್‌ಪೋದಲ್ಲಿ ‘ಒರಾಯನ್’ ಎಂದು ಲೇಬಲ್ ಮಾಡಲಾದ ಚೀನಾದ ರೋಬೋಟಿಕ್ ನಾಯಿಯನ್ನು ತನ್ನದೆಂದು ಪ್ರದರ್ಶಿಸಿದೆ ಎಂಬ ವಿವಾದದ ರಾಹುಲ್ ಈ ಹೇಳಿಕೆ ನೀಡಿದ್ದಾರೆ.==
ಕೊರಿಯಾದ ಡ್ರೋನ್ ಕೂಡ ತನ್ನದೆಂದ ಗಲ್ಗೋಟಿಯಾ!ನವದೆಹಲಿ: ಚೀನಾ ರೋಬೋ ಡಾಗ್ ಅನ್ನು ತನ್ನದೆಂದು ಹೇಳಿ ಎಐ ಶೃಂಗಸಭೆಯಲ್ಲಿ ಭಾರೀ ಮುಜುಗರ ಅನುಭವಿಸಿರುವ ನೋಯ್ಡಾದ ಗಲ್ಗೋಟಿಯಾ ವಿಶ್ವವಿದ್ಯಾಲಯ ಇಂತಹ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ತಾನೇ ನಿರ್ಮಿಸಿದ್ದೆಂದು ಹೇಳಿಕೊಂಡಿರುವ ಡ್ರೋನ್ ಕೂಡ ಅದರ ಸ್ವಂತದ್ದಲ್ಲ ಎಂದು ತಿಳಿದುಬಂದಿದೆ.ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಸಾಸರ್ ಡ್ರೋನ್‌ಅನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿಕೊಂಡು ತಯಾರಿಸಿದ್ದು ಎಂದು ಅಧ್ಯಾಪಕಿ ನೇಹಾ ಸಿಂಗ್ ಹೇಳಿದ್ದರು. ಜತೆಗೆ, ಇದು ದೇಶದ ಮೊದಲ ಇಂತಹ ವ್ಯವಸ್ಥೆ ಎಂದೂ ಪರಿಚಯಿಸಿದ್ದರು. ಆದರೆ ಅಸಲಿಗೆ ಇದು ದಕ್ಷಿಣ ಕೊರಿಯಾದ ಕಂಪನಿಯೊಂದು ಅಭಿವೃದ್ಧಿಪಡಿಸಿರುವ ಡ್ರೋನ್ ಆಗಿದ್ದು, ಸ್ಟ್ರೈಕರ್ ವಿ3 ಎಆರ್‌ಎಫ್ ಹೆಸರಿನ ಇದು ಭಾರತದಲ್ಲಿ 40,000 ರು.ಗೆ ಲಭ್ಯವಿದೆ ಎನ್ನಲಾಗುತ್ತಿದೆ.ಪರಿಣಾಮ, ಅದರ ಸ್ಟಾಲ್‌ನಲ್ಲಿದ್ದ ಎಲ್ಲಾ ವಸ್ತುಗಳನ್ನು ಅನುಮಾನದ ಕಣ್ಣುಗಳಿಂದ ನೋಡುವಂತಾಗಿದೆ.==
ಎಐ ಶೃಂಗದಲ್ಲಿ ಬೆಂಗ್ಳೂರು ಕಂಪನಿ ಉತ್ಪನ್ನಗಳ ಕಳವು: ಇಬ್ಬರ ಬಂಧನಪೆನ್ಡ್ರೈವ್ ಎಂದು ಭಾವಿಸಿ ಕಳ್ಳತನನವದೆಹಲಿ: ಎಐ ಶೃಂಗಸಭೆ ಆರಂಭ ಮೊದಲ ದಿನವೇ ಬೆಂಗಳೂರಿನ ಎಐ ಕಂಪನಿ ನಿಯೋಸೇಪಿಯನ್ ಪ್ರದರ್ಶನಕ್ಕಿಟ್ಟಿದ್ದ ಉತ್ಪನ್ನಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಹೊರ ಗುತ್ತಿಗೆ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಬಂಧಿತರನ್ನು ಮನೀಶ್ ನಗರ ಮತ್ತು ಆಶಿಶ್ ಮಹಾರಿಯಾ ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಭಾರತ ಮಂಟಪಂನಲ್ಲಿ ನಡೆಯುತ್ತಿದ್ದ ಶೃಂಗದ ವಿಡಿಯೋ ಚಿತ್ರೀಕರಣ ಮಾಡಲು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಇಬ್ಬರೂ ನಿಯೋಸೇಪಿಯನ್ ಕಂಪನಿಯ ಎಐ ಸಾಧನಗಳನ್ನು ಪೆನ್‌ಡ್ರೈವ್‌ಗಳೆಂದು ತಪ್ಪಾಗಿ ಭಾವಿಸಿದ್ದರು. ಅದು ತಮ್ಮ ವೈಯಕ್ತಿಕ ಕೆಲಸಕ್ಕೆ ಬೇಕಾಗಬಹುದು ಎಂದು ಭಾವಿಸಿ ಕಳ್ಳತನ ಮಾಡಿದ್ದರು ಎಂದು ತಿಳಿದು ಬಂದಿದೆ.ಕಳ್ಳತನ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದ್ದಂತೆ ಪೊಲೀಸರು ಸಿಸಿಟೀವಿ ದೃಶ್ಯಗಳನ್ನಾಧರಿಸಿ ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ಅವರು ಕಳ್ಳತನ ಮಾಡಿದ್ದ ಎಐ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
==ಜಾಗತಿಕ ಎಐ ಶೃಂಗ ಫೆ.21ರ ವರೆಗೆ ವಿಸ್ತರಣೆ
ನವದೆಹಲಿ: ಭಾರತವು ಇದೇ ಮೊದಲ ಬಾರಿಗೆ ನವದೆಹಲಿಯಲ್ಲಿ ಫೆ.16ರಿಂದ ಆಯೋಜಿಸಿರುವ ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲು ನಿರ್ಧರಿಸಿದೆ. ಎಐ ಶೃಂಗ ಹಾಗೂ ಎಕ್ಸ್‌ಪೋ ನಿಗದಿಯಂತೆ ಫೆ.20ರಂದು ಮುಕ್ತಾಯವಾಗಬೇಕಿತ್ತು. ಆದರೆ, ಈ ಶೃಂಗಕ್ಕೆ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.ಇದೇ ವೇಳೆ ಈ ಹಿಂದೆ ಎಕ್ಸ್‌ಪೋವನ್ನು ಬೆಳಗ್ಗೆ 10ರಿಂದ ಸಂಜೆ 6ರ ವರೆಗಷ್ಟೇ ನಡೆಸಲುದ್ದೇಶಿಸಲಾಗಿತ್ತು. ಆದರೆ, ಇದೀಗ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆ ವರೆಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆದರೆ, ವಿವಿಐಪಿ ಭೇಟಿಯ ಕಾರಣ ಫೆ.19ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದೆ.==
ಮೋದಿ ಜತೆ ಪಿಚೈ ಭೇಟಿ: ಭಾರತದಲ್ಲಿ ಹೂಡಿಕೆಗೆ ಗೂಗಲ್ ಉತ್ಸುಕನವದೆಹಲಿ: ಜಾಗತಿಕ ಎಐ ಸಮ್ಮೇಳನ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಬುಧವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಭಾರತದಲ್ಲಿ ಈಗಾಗಲೇ ಸಾಕಷ್ಟು ಹೂಡಿಕೆ ಮಾಡಿರುವ ತಮ್ಮ ಸಂಸ್ಥೆ, ಎಐ ಕ್ಷೇತ್ರದಲ್ಲಿ ಇನ್ನಷ್ಟು ಹೂಡಿಕೆ ಮಾಡುವ ಇರಾದೆ ಹೊಂದಿದೆ ಎಂದು ತಿಳಿಸಿದರು.ಇದಲ್ಲದೆ, ಭೇಟಿ ವೇಳೆ ಭಾರತವು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಕಾರ್ಯಗಳ ಕುರಿತು ಚರ್ಚೆ ನಡೆಸಲಾಯಿತು.
ಪಿಚೈ ಭೇಟಿ ಕುರಿತು ನಂತರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ, ‘ಜಾಗತಿಕ ಎಐ ಶೃಂಗದ ಹಿನ್ನೆಲೆಯಲ್ಲಿ ಪಿಚೈ ಅವರನ್ನು ಭೇಟಿಯಾಗಿದ್ದು ಖುಷಿ ನೀಡಿದೆ. ಭಾರತವು ಎಐ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಗಳು ಹಾಗೂ ಈ ಕ್ಷೇತ್ರದಲ್ಲಿ ಗೂಗಲ್ ಕಂಪನಿಯು ನಮ್ಮ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗಾಗಿ ಯಾವ ರೀತಿಯ ಕೊಡುಗೆಗಳನ್ನು ನೀಡಲು ಸಾಧ್ಯವಿದೆ ಎಂಬ ವಿಚಾರವಾಗಿ ಚರ್ಚಿಸಲಾಯಿತು’ ಎಂದಿದ್ದಾರೆ.==
ಇಂದಿನಿಂದ ಎಐ ಇಂಪ್ಯಾಕ್ಟ್ ಶೃಂಗ: ಮೋದಿ ಉದ್ಘಾಟನೆಮ್ಯಾಕ್ರಾನ್, ಗುಟೆರಸ್ ಉದ್ಘಾಟನಾ ಭಾಷಣ
ನವದೆಹಲಿ: ಫೆ.16ರಂದು ಎಐ ಎಕ್ಸ್‌ಪೋಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಎಐ ಇಂಪ್ಯಾಕ್ಟ್ ಶೃಂಗವನ್ನು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ವಿವಿಧ ದೇಶದ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಅವರ ಕಚೇರಿ ಮಾಹಿತಿ ನೀಡಿದೆ. ಫೆ.16ರಂದು ಎಐ ಪ್ರದರ್ಶನ (ಎಕ್ಸ್‌ಪೋ) ಆರಂಭವಾಗಿದೆ.
ಮಧ್ಯಾಹ್ನ ರಾಷ್ಟ್ರಗಳ ಮುಖ್ಯಸ್ಥರು, ಸಚಿವರನ್ನು ಭೇಟಿಯಾಗಿ ಪ್ರಧಾನಿ ಮೋದಿ ಅವರು ಆಡಳಿತ, ಮೂಲಸೌಕರ್ಯ ಮತ್ತು ಅಂತಾರಾಷ್ಟ್ರೀಯ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಐ ಕುರಿತು ಚರ್ಚೆ ನಡೆಸಲಿದ್ದಾರೆ. ಅದೇ ಸಂಜೆ 5.30ರ ವೇಳೆಗೆ ಕಂಪನಿಗಳ ಸಿಇಒಗಳ ಜತೆ ಹೂಡಿಕೆ, ಸಂಶೋಧನಾ ಸಹಕಾರ, ಪೂರೈಕೆ ಸರಪಳಿ, ಎಐ ವ್ಯವಸ್ಥೆ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ.ಶೃಂಗದಲ್ಲಿ 20ಕ್ಕೂ ಅಧಿಕ ದೇಶದ ಮುಖ್ಯಸ್ಥರು, 60 ಸಚಿವರು, 100ಕ್ಕೂ ಹೆಚ್ಚು ಸರ್ಕಾರದ ಪ್ರತಿನಿಧಿಗಳು, 500 ಎಐ ದಿಗ್ಗಜರು, 100 ಸಿಇಒ ಮತ್ತು ಸ್ಥಾಪಕರು, 150 ಶಿಕ್ಷಣ ತಜ್ಞರು ಮತ್ತು ಸಂಶೋಧಕರು ಸೇರಿದಂತೆ ಟೆಕ್ ಲೋಕದ ಪ್ರಭಾವಿಗಳು ಭಾಗಿಯಾಗಿದ್ದಾರೆ.ನಾಯಕರಿಗೆ ಸ್ವಾಗತ:
ಪ್ರಧಾನಿ ಮೋದಿ ಅವರು ಬುಧವಾರ ಸಂಜೆ, ಸರ್ಬಿಯಾ ಅಧ್ಯಕ್ಷ, ಕ್ರೊಯೇಷಿಯಾ, ಫಿನ್ಲೆಂಡ್, ಸ್ಪೇನ್ ಪ್ರಧಾನಿಗಳು, ಗೂಗಲ್ ಸಿಇಒ ಸುಂದರ್ ಪಿಚ್ಚೈ ಸೇರಿದಂತೆ ಶೃಂಗಕ್ಕೆ ಆಗಮಿಸಿರುವ ಹಲವು ದಿಗ್ಗಜರನ್ನು ಭೇಟಿಯಾಗಿ ಸ್ವಾಗತಿಸಿದರು.ಶೃಂಗದ ಉದ್ಘಾಟನಾ ಭಾಷಣವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರಾನ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರೆಸ್ ಹಾಗೂ ಕೆಲ ಐಟಿ ಕಂಪನಿಗಳ ಮುಖ್ಯಸ್ಥರು ಮಾಡಲಿದ್ದಾರೆ.