;Resize=(412,232))
ನವದೆಹಲಿ: ‘ಭಾರತಕ್ಕೆ ಮೇಡ್ ಇನ್ ಚೀನಾ ಉತ್ಪನ್ನಗಳ ಆಮದು ಹೆಚ್ಚಾಗುತ್ತಿದೆ’ ಎಂಬ ಆರೋಪಗಳ ನಡುವೆಯೇ ಕೆಲ ತಿಂಗಳಿಂದ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳು ಭಾರೀ ಪ್ರಮಾಣದಲ್ಲಿ ಚೀನಾ ಪ್ರವೇಶಿಸುತ್ತಿವೆ. ಕಳೆದ ಐದು ತಿಂಗಳಲ್ಲಿ ಚೀನಾಗೆ ಭಾರತದ ಉತ್ಪನ್ನಗಳ ರಫ್ತು ಪ್ರಮಾಣ ಶೇ.40ರಷ್ಟು ಹೆಚ್ಚಾಗಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ವಸ್ತುಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಚೀನಾಗೆ ರಫ್ತು ಆಗುತ್ತಿವೆ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳುತ್ತಿವೆ ಎಂದು ‘ಬ್ಲೂಂಬರ್ಗ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಭಾರತದಿಂದ ಚೀನಾಗೆ ಆಗುತ್ತಿರುವ ರಫ್ತು 30,459 ಕೋಟಿ ರು. ತಲುಪಿದೆ. ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಅಸೆಂಬ್ಲಿಗಳು, ಸ್ಮಾರ್ಟ್‌ಫೋನ್‌ಗಳು, ಡಿಸ್‌ಪ್ಲೇ ಮೊಡ್ಯೂಲ್‌ಗಳು ಮತ್ತು ಟೆಲಿಕಾಂ ಉತ್ಪನ್ನಗಳ ರಫ್ತು ಚೀನಾಗೆ ಹೆಚ್ಚಾಗಿದೆ. ಏಪ್ರಿಲ್‌ನಿಂದ ಆಗಸ್ಟ್ ನಡುವೆ ಭಾರತದಿಂದ ಚೀನಾಗೆ ಎಲೆಕ್ಟ್ರಾನಿಕ್ಸ್ ವಸ್ತುಗಳ ರಫ್ತು ಶೇ.15ರಷ್ಟು ಏರಿಕೆಯಾಗಿದೆ.
ಎಐ ಆಧರಿತ ಉತ್ಪನ್ನಗಳು, ಡೇಟಾ ಸೆಂಟರ್‌ಗಳಿಗೆ ಬೇಕಾದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ರಫ್ತು ಹೆಚ್ಚಾಗಿದೆ ಎಂದು ಭಾರತೀಯ ಎಲೆಕ್ಟ್ರಾನಿಕ್ಸ್ ಇಂಡಸ್ಟ್ರೀಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಾಜೂ ಗೋಯೆಲ್ ಹೇಳುತ್ತಾರೆ.
ಆದರೆ ಚೀನಾದಿಂದ ಆಮದಾಗುತ್ತಿರುವ ವಸ್ತುಗಳಿಗೆ ಹೋಲಿಸಿದರೆ ಈ ಪ್ರಮಾಣ ತೀರಾ ಕಡಿಮೆ. ಭಾರತ ತನ್ನ ರಫ್ತಿನ ಶೇ.4.4ರಷ್ಟನ್ನು ಮಾತ್ರ ಚೀನಾಗೆ ರಫ್ತು ಮಾಡುತ್ತಿದೆ. ಭಾರತದ ಪಾಲಿಗೆ ಅಮೆರಿಕವೇ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ.
ಆದರೆ ಕಳೆದ 5 ತಿಂಗಳಲ್ಲಿ ಚೀನಾಕ್ಕೆ ಭಾರತದ ರಪ್ತು ಶೇ.40ರಷ್ಟು ಹೆಚ್ಚಳ
ರಫ್ತಾಗುವ ವಸ್ತುಗಳಲ್ಲಿ ಎಲೆಕ್ಟ್ರಾನಿಕ್, ಎಂಜಿನಿಯರಿಂಗ್ ವಸ್ತುಗಳೇ ಅಧಿಕ
ಎಐ ಆಧರಿತ ಉತ್ಪನ್ನ, ಡೇಟಾ ಸೆಂಟರ್‌ಗೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ
ಕಳೆದ ಹಣಕಾಸು ವರ್ಷದಲ್ಲಿ ಚೀನಾಗೆ ಭಾರತದ ರಫ್ತು ₹30459 ಕೋಟಿ