ನವದೆಹಲಿ: ಯುದ್ಧಗ್ರಸ್ಥ ರಷ್ಯಾದಿಂದ ಕಚ್ಛಾತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳ ಮೇಲೆ ಸದಾ ಕಾಲ ಕಿಡಿಕಾರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತದ ಮೇಲೆ ದಂಡ ಹೇರುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಭಾರತದ ಸ್ಥಿತಿ ಅತಂತ್ರಕ್ಕೆ ಸಿಲುಕಿದೆ.
ಉಕ್ರೇನ್ ಜತೆ ರಷ್ಯಾ ಯುದ್ಧ ಆರಂಭಕ್ಕೂ ಮುನ್ನ ಅಂದರೆ 2022ರ ಭಾರತದ ಇಂಧನ ಆಮದಿನಲ್ಲಿ ರಷ್ಯಾದ ಪಾಲು ಕೇವಲ ಶೇ.0.2ರಷ್ಟಿತ್ತು. ಯುದ್ಧ ಆರಂಭವಾದ ಬಳಿಕ ಈ ಪಾಲು ಬರೋಬ್ಬರಿ ಶೇ.35-40ಕ್ಕೆ ಏರಿಕೆಯಾಗಿದೆ. ಹೀಗಿರುವಾಗಿ ಟ್ರಂಪ್ ದಂಡ ಘೋಷಣೆಯು ಭಾರತ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದೇ ರೀತಿ ರಷ್ಯಾದಿಂದ ಆಮದು ಮಾಡಿಕೊಳ್ಳುವ ಇತರೆ ದೇಶಗಳಿಗೂ ಸಹ ಟ್ರಂಪ್ ದಂಡ ಬೀಳುವ ಭೀತಿ ಇದೆ.
ಟ್ರಂಪ್ ತೆರಿಗೆ: ಮೋದಿ ಬಗ್ಗೆ ವಿಪಕ್ಷ ಕಿಡಿ
ನವದೆಹಲಿ: ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಶೇ.25ರಷ್ಟು ಸುಂಕ ಘೋಷಿಸಿದ ಬೆನ್ನಲ್ಲೇ, ವಿಪಕ್ಷ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಇದರ ಜೊತೆಗೆ, ಭಾರತದ ಉದ್ಯಮಿಗಳು ಟ್ರಂಪ್ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಮಾತನಾಡಿ, ‘ಅಧ್ಯಕ್ಷ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ಮತ್ತು ದಂಡವನ್ನು ವಿಧಿಸಿದ್ದಾರೆ. ಅವರ ಮತ್ತು ‘ಹೌಡಿ ಮೋದಿ’ ನಡುವಿನ ಆ ಎಲ್ಲಾ ‘ತಾರೀಫ್’ (ಪ್ರಶಂಸೆ)ಗಳು ಅರ್ಥಹೀನವಾಗಿವೆ. ಮೋದಿಯವರು ಇಂದಿರಾ ಗಾಂಧಿಯವರಿಂದ ಸ್ಫೂರ್ತಿ ಪಡೆದು ಅಮೆರಿಕ ಅಧ್ಯಕ್ಷರ ಎದುರು ನಿಲ್ಲಬೇಕು’ ಎಂದಿದ್ದಾರೆ.
ಇದೇ ವೇಳೆ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್‌ಐಸಿಸಿಐ) ಟ್ರಂಪ್ ತೆರಿಗೆ ನೀತಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ‘ಈ ಕ್ರಮ ದುರದೃಷ್ಟಕರ. ಇದು ನಮ್ಮ ರಫ್ತುಗಳ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತದೆ’ ಎಂದಿದೆ.