ನವದೆಹಲಿ : ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶ ಆಗಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆಪರೇಷನ್ ಸಿಂದೂರವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಯಿತು ಎಂಬ ವಾದವನ್ನು ತಳ್ಳಿಹಾಕಿದ್ದಾರೆ.
ಆಪರೇಷನ್ ಸಿಂದೂರ ವಿಚಾರವಾಗಿ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಬುಧವಾರ ಟ್ರಂಪ್ ಹೇಳಿಕೆಗೆ ಸಂಬಂಧಿಸಿ ಗದ್ದಲ ಉಂಟಾಯಿತು. ಆಗ ಅವರು ಪ್ರತಿಕ್ರಿಯಿಸಿ, ‘ಮೋದಿ ಮತ್ತು ಟ್ರಂಪ್ ನಡುವೆ ಏ.22ರಿಂದ ಜೂ.16ರ ನಡುವೆ ಯಾವುದೇ ನೇರ ಫೋನ್ ಸಂಭಾಷಣೆ ನಡೆದಿಲ್ಲ’ ಎಂದು ಪುನರುಚ್ಚರಿಸಿದರು.
‘ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಮತ್ತು ಇದೇ ಕಾರಣಕ್ಕೆ ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲಾಯಿತು. ಒಂದು ವೇಳೆ ನೆರೆ ರಾಷ್ಟ್ರವು ತನ್ನ ಇದೇ ಬುದ್ಧಿ ಮುಂದುವರಿಸಿದರೆ ನಮ್ಮ ಕಾರ್ಯಾಚರಣೆ ಮತ್ತೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.
‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಸಿಂದೂ ನದಿ ಒಪ್ಪಂದವನ್ನು ರದ್ದುಪಡಿಸಿದ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಮೋದಿ ಸರ್ಕಾರವು ಸಿಂದೂ ನದಿ ಒಪ್ಪಂದವನ್ನು ರದ್ದು ಮಾಡುವ ಮೂಲಕ ನೆಹರೂ ನೀತಿಗಳಲ್ಲಿನ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಿದೆ. ನೆಹರು ಅವರು ಶಾಂತಿ ಬದಲು ಓಲೈಕೆಗಾಗಿ ಈ ನದಿ ಒಪ್ಪಂದ ಮಾಡಿಕೊಂಡಿದ್ದರು ಎಂದು ಇದೇ ವೇಳೆ ತಿಳಿಸಿದರು.
ಇದೀಗ ಭಯೋತ್ಪಾದನೆ ಎಂಬುದು ಅಂತಾರಾಷ್ಟ್ರೀಯ ಅಜೆಂಡಾ ಆಗಿದೆ. ಇದಕ್ಕೆ ಮೋದಿ ಅವರ ಪ್ರಯತ್ನವೇ ಕಾರಣ ಎಂದು ತಿಳಿಸಿದ ಜೈಶಂಕರ್, ಎಫ್‌ಎಟಿಎಫ್ ಪ್ರಕ್ರಿಯೆ ಮೂಲಕ ಭಾರತವು ಪಾಕ್ ಮೇಲೆ ತೀವ್ರ ಒತ್ತಡ ಹಾಕುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ಅಲ್ಲದಿದ್ದರೂ ರಿಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್)ಅನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಸಹ ಸಂಘಟನೆ ಎಂದು ಘೋಷಿಸುವಲ್ಲಿ ಯಶಸ್ವಿಯಾಗಿದೆ ಎಂದರು.
‘ಚೀನಾ ಗುರು’ ಎಂದು ರಾಹುಲ್‌ಗೆ ಜೈಶಂಕರ್ ಟಾಂಗ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಶ್ವಗುರು’ ಎಂದು ಟೀಕಿಸುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ‘ಚೀನಾ ಗುರು’ ಎಂದು ಸಂಬೋಧಿಸಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಾಲೆಳೆದಿದ್ದಾರೆ.ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಇಂತಹ ಜನರು ಬೀಜಿಂಗ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಹಾಜರಾಗುತ್ತಾರೆ ಮತ್ತು ಚೀನಾ ರಾಯಭಾರಿಯಿಂದ ವಿಶೇಷ ಬೋಧನೆ ಪಡೆಯುತ್ತಾರೆ. ಅದರ ಮುಖಾಂತರ ಚೀನಾದ ಬಗ್ಗೆ ಜ್ಞಾನವನ್ನು ಪಡೆಯುತ್ತಾರೆ’ ಎಂದು ರಾಹುಲ್ ಹೆಸರೆತ್ತದೇ ಪರೋಕ್ಷವಾಗಿ ಕಿಡಿಕಾರಿದರು.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.