ಶ್ರೀನಗರ: 3 ದಿನದ ಹಿಂದೆ ಹತರಾದ ಪಹಲ್ಗಾಂ ದಾಳಿಕೋರ ಸುಲೇಮಾನ್ ಅಲಿಯಾಸ್ ಶಾ ಅಲಿಯಾಸ್ ಮೂಸಾ ಸೇರಿ 3 ಉಗ್ರರು ಪಾಕಿಸ್ತಾನಕ್ಕೆ ಪರಾರಿ ಆಗುವ ಯೋಚನೆಯಲ್ಲಿದ್ದರು. ಆದರೆ, ಉಗ್ರರು ಪಾಕ್‌ಗೆ ಸಂಪರ್ಕ ಕಲ್ಪಿಸುವ ರಹಸ್ಯ ಸುರಂಗಗಳಲ್ಲಿ ಪ್ರವಾಹ ಸೃಷ್ಟಿಸುವ ಮೂಲಕ ಅವರು ಪರಾರಿ ಆಗದಂತೆ ತಡೆಯುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಭದ್ರತಾ ಪಡೆಗಳ ‘ಚಾಣಕ್ಯ ತಂತ್ರಗಾರಿಕೆ’ ಫಲ ನೀಡಿತು. ಅದರಂತೆ ಉಗ್ರರು ಭಾರತದಲ್ಲೇ ಇರುವಂತೆ ಮಾಡಿ ಹತ್ಯೆ ಮಾಡಲಾಯಿತು ಎಂಬ ಕುತೂಹಲಕರ ವಿಚಾರ ಬಹಿರಂಗವಾಗಿದೆ.
‘ಪಹಲ್ಗಾಂ ದಾಳಿಯ ಕೆಲವು ಗಂಟೆಗಳ ನಂತರ ಗೃಹ ಸಚಿವರು ಕಾಶ್ಮೀರಕ್ಕೆ ಬಂದಾಗ ಭದ್ರತಾ ಪಡೆಗಳು ಜತೆ ಚರ್ಚಿಸಿ ತಂತ್ರವನ್ನು ರೂಪಿಸಿದರು. ಭಯೋತ್ಪಾದಕರು ಪಾಕಿಸ್ತಾನಕ್ಕೆ ಮರಳುವಲ್ಲಿ ಯಶಸ್ವಿಯಾಗಬಾರದು ಎಂದು ಶಾ ಅವರು ಪಡೆಗಳಿಗೆ ತಾಕೀತು ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.
ಇದರಂತೆ, ಉಗ್ರರು ಪಾಕಿಸ್ತಾನಕ್ಕೆ ಪರಾರಿ ಆಗಲು ಬಳಸಬಹುದಾದ 8 ಕಿ.ಮೀ ಮಾರ್ಗವನ್ನು ಭದ್ರತಾ ಪಡೆಗಳು ಗುರುತಿಸಿದವು ಮತ್ತು ಆ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ಪಡೆಗಳು ಭಯೋತ್ಪಾದಕರು ಒಳನುಸುಳಲು ಬಳಸುತ್ತಿದ್ದ ರಹಸ್ಯ ಸುರಂಗಗಳನ್ನು ಪತ್ತೆಹಚ್ಚಿ ಅವುಗಳನ್ನು ಅಗೆದವು. ಅಲ್ಲಿ ಪ್ರವಾಹ ಉಂಟಾಗುವಂತೆ ನೋಡಿಕೊಂಡವು. ಈ ಮೂಲಕ ಅವರ ಪರಾರಿ ಮಾರ್ಗಗಳನ್ನು ಬಂದ್ ಮಾಡಿ ತಪ್ಪಿಸಿಕೊಳ್ಳುವ ಯೋಜನೆಗಳನ್ನು ವಿಫಲಗೊಳಿಸಿದವು. ಅಂತಿಮವಾಗಿ, ಪಡೆಗಳು ಅವರನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡಿದವು’ ಎಂದು ಮೂಲಗಳು ಹೇಳಿವೆ.
ಹತ ಸುಲೇಮಾನ್ ಶಾ (ಮೂಸಾ) ಲಷ್ಕರ್ ಉಗ್ರ ಸಂಘಟನೆಯ ಎ-ಶ್ರೇಣಿಯ ಕಮಾಂಡರ್ ಆಗಿದ್ದ. ಇನ್ನಿಬ್ಬರು ಹತ ಉಗ್ರರಾದ ಅಫ್ಘಾನಿ ಮತ್ತು ಯಾಸಿರ್ ಜಿಬ್ರಾನ್ ಕೂಡ ಭಾರತಕ್ಕೆ ಬೇಕಾಗಿದ್ದರು.