ಕಾಂಗ್ರೆಸ್‌, ನೆಹರು ವಿರುದ್ಧ ಮೋದಿ ತೀಕ್ಷ್ಣ ವಾಗ್ದಾಳಿ

KannadaprabhaNewsNetwork |  
Published : Jul 30, 2025, 01:27 AM IST
ಮೋದಿ  | Kannada Prabha

ಸಾರಾಂಶ

ಆಪರೇಷನ್ ಸಿಂದೂರ ವಿಚಾರದಲ್ಲಿ ತಮ್ಮನ್ನು ಟೀಕಿಸಿದ್ದ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತ ಸ್ವಾವಲಂಬಿಯಾಗುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನವನ್ನು ಅವಲಂಬಿಸಿದೆ. ತನಗೆ ಬೇಕಾದ ಟೀಕೆಯ ಸರಕುಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದುರದೃಷ್ಟವಶಾತ್ ಪಾಕಿಸ್ತಾನಿ ಪ್ರಚಾರದ ವಕ್ತಾರರಾಗಿವೆ’ ಎಂದು ಕಿಡಿಕಾರಿದ್ದಾರೆ.

- ನೆಹರು ಪಿಒಕೆ ಬಿಟ್ಟುಕೊಟ್ಟರು, ಬಹುಪಾಲು ಸಿಂಧು ನೀರನ್ನು ಪಾಕ್‌ಗೆ ನೀಡಿದರು

- ಈಗ ಕಾಂಗ್ರೆಸ್ ನಮ್ಮ ಸೈನಿಕರ ಕಾರ್ಯಾಚರಣೆಯನ್ನೇ ಪ್ರಶ್ನಿಸುತ್ತಿದೆ: ಮೋದಿ ಕಿಡಿಪಿಟಿಐ ನವದೆಹಲಿ

ಆಪರೇಷನ್ ಸಿಂದೂರ ವಿಚಾರದಲ್ಲಿ ತಮ್ಮನ್ನು ಟೀಕಿಸಿದ್ದ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತ ಸ್ವಾವಲಂಬಿಯಾಗುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನವನ್ನು ಅವಲಂಬಿಸಿದೆ. ತನಗೆ ಬೇಕಾದ ಟೀಕೆಯ ಸರಕುಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದುರದೃಷ್ಟವಶಾತ್ ಪಾಕಿಸ್ತಾನಿ ಪ್ರಚಾರದ ವಕ್ತಾರರಾಗಿವೆ’ ಎಂದು ಕಿಡಿಕಾರಿದ್ದಾರೆ.

ಸಿಂದೂರ ಕುರಿತ 2 ದಿನಗಳ ಚರ್ಚೆಗೆ ಲೋಕಸಭೆಯಲ್ಲಿ ಸುದೀರ್ಘ ಉತ್ತರ ನೀಡಿದ ಮೋದಿ, ‘ಕಾಂಗ್ರೆಸ್ ತನ್ನ ಓಲೈಕೆ ಮತ್ತು ಮತಬ್ಯಾಂಕ್ ರಾಜಕೀಯಕ್ಕಾಗಿ ದೇಶದ ಭದ್ರತೆಯನ್ನು ತ್ಯಾಗ ಮಾಡಿದೆ. ಭಾರತೀಯ ಸಶಸ್ತ್ರ ಪಡೆಗಳು ಸರ್ಜಿಕಲ್ ದಾಳಿ ನಡೆಸಿವೆ. ಆದರೆ ಕಾಂಗ್ರೆಸ್ ಸಶಸ್ತ್ರ ಪಡೆಗಳಿಂದ ಪುರಾವೆ ಕೇಳಿದೆ. ಆದರೆ ಸಾರ್ವಜನಿಕರ ಮನಸ್ಥಿತಿಯನ್ನು ಅರ್ಥಮಾಡಿಕೊಂಡಾಗ, ಕಾಂಗ್ರೆಸ್ ತನ್ನ ರಾಗ ಬದಲಿಸಿ ತಮ್ಮ ಸರ್ಕಾರಗಳು ಕೂಡ ಸರ್ಜಿಕಲ್ ಸ್ಟ್ರೈಕ್ ನಡೆಸಿವೆ ಎಂದು ಹೇಳಿಕೊಂಡಿತು’ ಎಂದು ಛೇಡಿಸಿದರು.

‘ಪೈಲಟ್ ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆಹಿಡಿಯಲ್ಪಟ್ಟಾಗ ಅನೇಕರು ಸಂತೋಷಪಟ್ಟರು. ಇದು ಮೋದಿಯನ್ನು ಸಿಲುಕಿಸುತ್ತದೆ ಎಂದು ಭಾವಿಸಿದರು. ಆದರೆ ಅವರ ಆಸೆಗಳು ಹುಸಿಯಾದವು. ಈಗ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತು ಅವರ ಯಜಮಾನರು ಕಣ್ಣೀರು ಸುರಿಸುತ್ತಿದ್ದಾರೆ ಮತ್ತು ಕೆಲವರು ಇಲ್ಲಿಯೂ ಅಳುತ್ತಿದ್ದಾರೆ’ ಎಂದು ಕುಟುಕಿದರು.‘ಸಶಸ್ತ್ರ ಪಡೆಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದುವುದು ಕಾಂಗ್ರೆಸ್‌ನ ಹಳೆಯ ಅಭ್ಯಾಸ. ಕಾಂಗ್ರೆಸ್ ಇನ್ನೂ ಕಾರ್ಗಿಲ್ ವಿಜಯವನ್ನು ಸ್ವೀಕರಿಸಿಲ್ಲ. ಪಾಕಿಸ್ತಾನಕ್ಕೆ ಕಾಂಗ್ರೆಸ್ ಕ್ಲೀನ್ ಚಿಟ್ ನೀಡಿ ಅವರಂತೆಯೇ ರಾಗ ಹಾಡುವುದನ್ನು ನೋಡಿ ಇಡೀ ದೇಶವೇ ಅಚ್ಚರಿಗೊಂಡಿದೆ’ ಎಂದರು.

ಸೇನೆಯನ್ನೇ ಟೀಕಿಸುತ್ತಾರೆ:

‘ಭಾರತದ ಆದಂಪುರ ವಾಯುನೆಲೆಯಲ್ಲಿ ನಷ್ಟವಾಗಿದೆ ಎಂದು ಪಾಕಿಸ್ತಾನ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿತು. ನಾನು ಮರುದಿನ ಅಲ್ಲಿಗೆ ಹೋಗಿ ಪಾಕಿಸ್ತಾನದ ಸುಳ್ಳುಗಳನ್ನು ಬಹಿರಂಗಪಡಿಸಿದೆ. ಆದರೂ ದೇಶವನ್ನು ಇಷ್ಟು ದಿನ ಆಳಿದವರು ಭಾರತದ ರಕ್ಷಣಾ, ವಿದೇಶಾಂಗ ಮತ್ತು ಗೃಹ ಸಚಿವರನ್ನು ನಂಬದಿರುವುದು ದುರದೃಷ್ಟಕರ. ಕಾಂಗ್ರೆಸ್ ಈಗ ಪಾಕಿಸ್ತಾನದ ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತದೆ’ ಎಂದು ಕಿಡಕಾರಿದರು.

‘ಕೆಲ ನಾಯಕರು ಆಪರೇಷನ್ ಸಿಂದೂರ್ ಅನ್ನು ‘ತಮಾಷಾ’ ಎಂದು ಕರೆದರು. ಅಷ್ಟೇ ಅಲ್ಲ, ಹತಾಶೆಯಿಂದ, ಸೋಮವಾರ ಪಹಲ್ಗಾಂ ದಾಳಿಯ ದುಷ್ಕರ್ಮಿಗಳನ್ನು ಕೊಂದ ಆಪರೇಷನ್ ಮಹಾದೇವ್‌ನ ಸಮಯವನ್ನು ಕಾಂಗ್ರೆಸ್ ಪ್ರಶ್ನಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಆಳ್ವಿಕೆಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಯಾವುದೇ ಚಿಂತನೆ ಇರಲಿಲ್ಲ. ವಿದೇಶಿ ಆಮದಿನ ಮೇಲೆ ಅವಲಂಬಿತವಾಗಿತ್ತು. ಆದರೆ ಈಗ ಭಾರತದ ಸೇನೆ ಶಸ್ತ್ರಾಸ್ತ್ರ ಸ್ವಾವಲಂಬಿಯಾಗಿದೆ. ಭಾರತದಲ್ಲೇ ರಕ್ಷಣಾ ಸಲಕರಣೆ ಉತ್ಪಾದನೆ ಆಗುತ್ತಿವೆ’ ಎಂದರು.

ನೆಹರು ವಿರುದ್ಧ ವಾಗ್ದಾಳಿ:ನೆಹರು ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಮೋಡಿ, ‘ರಾಷ್ಟ್ರೀಯ ಭದ್ರತೆಯ ಬಗ್ಗೆ ಕಾಂಗ್ರೆಸ್‌ಗೆ ಮೊದಲು ಯಾವುದೇ ದೃಷ್ಟಿಕೋನವಿರಲಿಲ್ಲ. ಪಿಒಕೆಯನ್ನು ಇನ್ನೂ ಏಕೆ ಹಿಂದಕ್ಕೆ ತೆಗೆದುಕೊಂಡಿಲ್ಲ ಎಂದು ಕೇಳುವ ಮೊದಲು ಅವರು (ಕಾಂಗ್ರೆಸ್), ಅದನ್ನು ಯಾರು ಬಿಟ್ಟರು ಎಂದು ಉತ್ತರಿಸಬೇಕು. ನೆಹರು ಅವರಿಂದ ಹಿಡಿದು ಹಿಂದಿನ ಕಾಂಗ್ರೆಸ್ ಸರ್ಕಾರಗಳು ಮಾಡಿದ ತಪ್ಪುಗಳ ನೋವನ್ನು ಭಾರತ ಇನ್ನೂ ಅನುಭವಿಸುತ್ತಿದೆ’ ಎಂದು ಕಿಡಿಕಾರಿದರು,‘ಭಾರತವು ಪಾಕಿಸ್ತಾನದ ಭೂಮಿ, ಸೈನಿಕರನ್ನು ವಶಕ್ಕೆ ಪಡೆದಾಗ, ಕಾಂಗ್ರೆಸ್ ಸರ್ಕಾರಗಳು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಅವಕಾಶಗಳನ್ನು ಕಳೆದುಕೊಂಡವು. ಭಾರತದಿಂದ ಹುಟ್ಟುವ ನದಿಗಳ ನೀರಿನ ಭವಿಷ್ಯವನ್ನು ನಿರ್ಧರಿಸುವ ಹೊಣೆಯನ್ನು ನೆಹರು ವಿಶ್ವಬ್ಯಾಂಕ್‌ಗೆ ಬಿಟ್ಟುಕೊಟ್ಟು ಸಿಂಧು ಜಲ ಒಪ್ಪಂದವನ್ನು ಮಾಡಿಕೊಂಡರು. ಭಾರತದಲ್ಲಿ ಹುಟ್ಟುವ ನದಿಗಳಿಂದ ಪಾಕಿಸ್ತಾನಕ್ಕೆ ಶೇ.80ರಷ್ಟು ನೀರು ನೀಡಲು ನೆಹರು ಒಪ್ಪಿದರು. ನಮ್ಮಂತಹ ದೊಡ್ಡ ದೇಶಕ್ಕೆ ಶೇ. 20ರಷ್ಟು ಮಾತ್ರ ಉಳಿಸಿದರು’ ಎಂದು ಮೋದಿ ಆರೋಪಿಸಿದರು.

‘ಪಾಕಿಸ್ತಾನದೊಂದಿಗೆ ನೀರು ಹಂಚಿಕೊಂಡ ನಂತರ, ನೆಹರು ಇಸ್ಲಾಮಾಬಾದ್‌ಗೆ ಅಣೆಕಟ್ಟುಗಳನ್ನು ನಿರ್ಮಿಸಲು ಹಣವನ್ನು ನೀಡಿದರು. ನೆಹರು ಮಾಡಿದ ತಪ್ಪನ್ನು ನಂತರದ ಸರ್ಕಾರಗಳು ಸರಿಪಡಿಸಲಿಲ್ಲ. ಈಗ ಇದನ್ನು ಸರಿ ಮಾಡುತ್ತಿದ್ದೇವೆ, ಆದರೆ ರಕ್ತ, ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ’ ಎಂದರು.

PREV

Recommended Stories

ಇಡೀ ವಕ್ಫ್‌ ಕಾಯ್ದೆ ಬದಲು 2 ಅಂಶಕ್ಕಷ್ಟೆ ಸುಪ್ರೀಂ ತಡೆ
30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಸಾರ್ಥಕತೆ