ಟ್ರಂಪ್ ಹೇಳಿಕೆ ಸುಳ್ಳೆಂದು ಮೋದಿ ಹೇಳಲಿ: ರಾಗಾ ಸವಾಲು

KannadaprabhaNewsNetwork |  
Published : Jul 30, 2025, 12:46 AM IST
ರಾಹುಲ್ | Kannada Prabha

ಸಾರಾಂಶ

‘ಭಾರತ-ಪಾಕಿಸ್ತಾನ ನಡುವೆ ವ್ಯಾಪಾರ ಬೆದರಿಕೆ ಒಡ್ಡಿ ಕದನವಿರಾಮ ಮಾಡಿಸಿದ್ದು ನಾನು ಎಂದು ಈಗಾಗಲೇ 29 ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಿರುವುದು ಅಸತ್ಯವೇ ಆದರೆ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ನಿಂತು ಟ್ರಂಪ್‌ ಅವರನ್ನು ಸುಳ್ಳುಗಾರ ಎಂದು ಕರೆಯಲಿ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸವಾಲೆಸೆದಿದ್ದಾರೆ.

- ಮೋದಿಗೆ ಇಂದಿರಾರ ಶೇ.50ರಷ್ಟು ಧೈರ್ಯ ಇದೆಯೇ?

- ಇದ್ದರೆ 29 ಬಾರಿ ಟ್ರಂಪ್‌ ಹೇಳಿದ್ದು ಸುಳ್ಳು ಎನ್ನಲಿ: ರಾಗಾ

----

ಮುನೀರ್‌ಗೆ ಭೋಜನದ ಬಗ್ಗೆ ಮೋದಿ ಯಾಕೆ ಪ್ರಶ್ನಿಸಲಿಲ್ಲ?ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯುದ್ಧವಿಮಾನ ನಷ್ಟಆಪರೇಷನ್‌ ಶುರುವಾದ 30 ನಿಮಿಷದಲ್ಲೇ ಪಾಕ್‌ಗೆ ಮಾಹಿತಿ

ಯುದ್ಧ ಮುಂದುವರೆಸಲು ಬಯಸಲ್ಲ ಎಂದು ಪಾಕ್‌ಗೆ ಮಾಹಿತಿ

ಪಾಕ್‌-ಚೀನಾ ದೂರ ಮಾಡೋದು ನಮ್ಮ ವಿದೇಶಾಂಗ ನೀತಿಗೆ ಸವಾಲು

---ಪಿಟಿಐ ನವದೆಹಲಿ

‘ಭಾರತ-ಪಾಕಿಸ್ತಾನ ನಡುವೆ ವ್ಯಾಪಾರ ಬೆದರಿಕೆ ಒಡ್ಡಿ ಕದನವಿರಾಮ ಮಾಡಿಸಿದ್ದು ನಾನು ಎಂದು ಈಗಾಗಲೇ 29 ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಿರುವುದು ಅಸತ್ಯವೇ ಆದರೆ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ನಿಂತು ಟ್ರಂಪ್‌ ಅವರನ್ನು ಸುಳ್ಳುಗಾರ ಎಂದು ಕರೆಯಲಿ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸವಾಲೆಸೆದಿದ್ದಾರೆ. ಆಪರೇಷನ್‌ ಸಿಂದೂರದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ರಾಹುಲ್‌, ‘ಮೋದಿಯವರಲ್ಲಿ ಇಂದಿರಾ ಗಾಂಧಿ ಅವರಿಗಿದ್ದ ಧೈರ್ಯದ ಶೇ.50ರಷ್ಟಾದರೂ ಇದ್ದರೆ, ಟ್ರಂಪ್‌ ಕದನವಿರಾಮದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಲಿ’ ಎಂದು ಆಗ್ರಹಿಸಿದ್ದಾರೆ. ಜತೆಗೆ, ಭಾರತ-ಪಾಕ್‌ ನಡುವಿನ ಉದ್ವಿಗ್ನತೆ ಕೊಂಚ ತಣ್ಣಗಾಗುತ್ತಿದ್ದಂತೆ, ಪಾಕ್‌ನ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗಾಗಿ ಟ್ರಂಪ್‌ ಭೋಜನಕೂಟ ಏರ್ಪಡಿಸಿದ್ದನ್ನು ನೆನಪಿಸಿದ ಅವರು, ‘ಈ ಬಗ್ಗೆ ಮೋದಿ ಟ್ರಂಪ್‌ ಅವರನ್ನು ಏಕೆ ಪ್ರಶ್ನಿಸಲಿಲ್ಲ? ಇದರಿಂ, ನಮ್ಮ ನಿಯೋಗಗಳು ವಿದೇಶಗಳಿಗೆ ತೆರಳಿ ಸಿಂದೂರದ ಬಗ್ಗೆ ಮಾಹಿತಿ ನೀಡಿದ್ದು ನಿಷ್ಪ್ರಯೋಜಕವಾಗಲಿಲ್ಲವೇ?’ ಎಂದು ಕೇಳಿದ್ದಾರೆ. ವಿಮಾನನಷ್ಟ ವೈಫಲ್ಯ ಸೇನೆಯದ್ದಲ್ಲ:

ಆಪರೇಷನ್‌ ಸಿಂದೂರದಲ್ಲಿ ಭಾರತೀಯ ಸೇನೆಗಾದ ನಷ್ಟದ ಬಗ್ಗೆ ಮಾತನಾಡುತ್ತಾ, ‘ನಮ್ಮ ಕೆಲ ಯುದ್ಧ ವಿಮಾನಗಳು ಖಂಡಿತವಾಗಿ ನಷ್ಟವಾಗಿವೆ. ಆದರೆ ಇದರಲ್ಲಿ ವಾಯುಪಡೆಯ ತಪ್ಪಿಲ್ಲ. ಬದಲಿಗೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಹೀಗಾಯಿತು. ಪಹಲ್ಗಾಂ ನರಮೇಧದಿಂದ ಪ್ರಧಾನಿ ಮೋದಿ ಅವರ ಕೈಗೆ ರಕ್ತದ ಕಲೆ ಅಂಟಿಕೊಂಡಿತ್ತು. ಅದನ್ನು ತೊಳೆದುಕೊಳ್ಳಲು ಕಾರ್ಯಾಚರಣೆ ನಡೆಸಲಾಯಿತು. ಆದರೆ ಸೇನೆಯ ಶೇ.100ರಷ್ಟು ಸಾಮರ್ಥ್ಯ ಬಳಕೆಯಾಗಿರಲಿಲ್ಲ. ತಮ್ಮ ವರ್ಛಸ್ಸು ಉಳಿಸಿಕೊಳ್ಳಲು ಮಾತ್ರ ಮೋದಿ ಸೇನೆಯನ್ನು ಬಳಸಿಕೊಂಡರು’ ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ. ಜತೆಗೆ, ‘ನಮ್ಮ ಯಾವುದೇ ಯದ್ಧವಿಮಾನ ನಷ್ಟವಾಗಿಲ್ಲ’ ಎಂದು ಸದನದಲ್ಲಿ ಹೇಳುವಂತೆಯೂ ಸವಾಲೆಸೆದಿದ್ದಾರೆ. ಕಾರ್ಯಾಚರಣೆ ಬಗ್ಗೆ ಪಾಕ್‌ಗೆ ಮಾಹಿತಿ:

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಒಂದೊಮ್ಮೆ ನೀಡಿದ್ದ ಮಾಹಿತಿಯನ್ನು ಉಲ್ಲೇಖಿಸಿದ ರಾಹುಲ್‌, ‘ನಡುರಾತ್ರಿ 1.05ಕ್ಕೆ ಆಪರೇಷನ್‌ ಸಿಂದೂರ ಆರಂಭವಾಗಿತ್ತು ಹಾಗೂ ಅದರ ಬಗ್ಗೆ 1.35ಕ್ಕೇ ಪಾಕಿಸ್ತಾನಕ್ಕೆ ಕರೆ ಮಾಡಿ, ನಾವು ನಿಮ್ಮ ಸೇನಾ ಸೌಕರ್ಯಗಳ ಮೇಲೆ ದಾಳಿ ಮಾಡಿಲ್ಲ ಮತ್ತು ಯುದ್ಧವನ್ನು ಮುಂದುವರೆಸಲು ನಮಗೆ ಇಷ್ಟವಿಲ್ಲ ಎಂದು ಹೇಳಿತು. ಆಪರೇಷನ್‌ ಶುರುವಾರ 30 ನಿಮಿಷದಲ್ಲೇ ನಮ್ಮ ಡಿಜಿಎಂಒಗಳಿಗೆ ಕದನವಿರಾಮಕ್ಕೆ ಕೋರಲು ಸೂಚಿಸಲಾಗಿತ್ತು. ಜತೆಗೆ, ಯುದ್ಧ ಮಾಡಲು ಇಷ್ಟವೆಲ್ಲ ಎನ್ನುವ ಮೂಲಕ ರಾಜಕೀಯ ಹಿತಾಸಕ್ತಿಯನ್ನೂ ಹೇಳಿಬಿಡಲಾಯಿತು. ಈ ಮೂಲಕ, ಸೇನೆಗೆ ದಾಳಿಯ ಸ್ವಾತಂತ್ರ್ಯ ನೀಡಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ. ಜತೆಗೆ, ಇದರಿಂದಾಗಿಯೇ ನಮ್ಮ ಯುದ್ಧವಿಮಾನಗಳಿಗೆ ಹಾನಿಯಾಗಿದ್ದು ಎಂದು ಹೇಳಿದ್ದಾರೆ. ಚೀನಾ ಜತೆ ಪರೋಕ್ಷ ಕದನ:

‘ನಾವು ಯುದ್ಧ ಮಾಡುತ್ತಿದ್ದದ್ದು ಪಾಕಿಸ್ತಾನದ ಜತೆ ಮಾತ್ರವಲ್ಲ. ಅವರಿಗೆ ಚೀನಾದಿಂದ ಬೆಂಬಲ ಸಿಗುತ್ತಿತ್ತು. ಪಾಕಿಸ್ತಾನ ಮತ್ತು ಚೀನಾವನ್ನು ಪ್ರತ್ಯೇಕವಾಗಿ ಇಡುವುದು ಭಾರತದ ಅತಿದೊಡ್ಡ ವಿದೇಶಾಂಗ ನೀತಿ ಸವಾಲು. ನಾನು ಈ ಬಗ್ಗೆ ಮಾತನಾಡಿದಾಗ ನಕ್ಕಿದ್ದರು. ಆದರೆ ನಂತರ ಸರ್ಕಾರಕ್ಕೇ ಅರಿವಾಯಿತು’ ಎಂದು ರಾಹುಲ್‌ ಹೇಳಿದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ