ಮುಂಬೈ: ‘ಜಾಗತಿಕ ತಾಪಮಾನ ಏರಿಕೆ ಕಡಿಮೆ ಮಾಡಲು ಮತ್ತು ಭಾರತವು ಸ್ವಚ್ಛ ಇಂಧನದೆಡೆಗೆ ಸಾಗಲು ಗುಣಾತ್ಮಕವಾಗಿ ಕೆಲಸ ಮಾಡುತ್ತಿದೆ. ಫಾಸಿಲ್ ಇಂಧನ ಬಳಕೆ ಗಣನೀಯ ಇಳಿಕೆ ಆಗುತ್ತಿದೆ’ ಎಂದು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
‘2030ರ ವೇಳೆಗೆ ಫಾಸಿಲೇತರ ಮೂಲಗಳಿಂದ 500 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ, ಜೊತೆಗೆ ಹಾಲಿ ಇರುವ ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ ಶೇ.50ರಷ್ಟನ್ನು ಫಾಸಿಲೇತರ ಇಂಧನದಿಂದ ನಡೆಸುವುದು ಈ ಮೂಲಕ ಕಾರ್ಬನ್ ಹೊರಸೂಸುವಿಕೆಯನ್ನು 1 ಶತಕೋಟಿ ಟನ್‌ನಷ್ಟು ಕಡಿತಗೊಳಿಸುವ ಗುರಿ ಕೇಂದ್ರ ಸರ್ಕಾರದ ಬಳಿ ಇದೆ’ ಎಂದರು.
2070 ರ ವೇಳೆಗೆ ಶೂನ್ಯ ಹೊರಸೂಸುವಿಕೆಯನ್ನು ತಲುಪುವ ಉದ್ದೇಶದೊಂದಿಗೆ, ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯಲ್ಲಿ ಶೇ.45ರಷ್ಟು ಕಡಿತವನ್ನು ಸಾಧಿಸುವ ಗುರಿ ಇರಿಸಿಕೊಂಡಿದೆ ಎಂದರು.ಪರಿಸರ ಸ್ನೇಹಿ ಯೋಜನೆಗಳ ಕುರಿತು ಮಾತನಾಡಿದ ಸಚಿವರು, ‘ಪಿಎಂ- ಕುಸುಮ್, ಪಿಎಂ ಸೂರ್ಯ ಘರ್ ಯೋಜನೆಗಳು ನವೀಕರಿಸಬಹುದಾದ ಶಕ್ತಿಗಳಿಗೆ ಉತ್ತೇಜನ ನೀಡುತ್ತಿದೆ. ಪಿಎಂ ಕುಸುಂ ಯೋಜನೆ ಅಡಿಯಲ್ಲಿ 2025ರ ಅಂತ್ಯದೊಳಗೆ 35 ಲಕ್ಷ ಸೌರ ಶಕ್ತಿ ಆಧರಿತ ಕೃಷಿ ಪಂಪ್‌ಗಳನ್ನು ಅಳವಡಿಸುವ ಮಹಾರಾಷ್ಟ್ರ ಗುರಿ ದೇಶಕ್ಕೆ ಮಾದರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಭಾರತವು ನವೀಕರಿಸಬಹುದಾದ ಇಂಧನದೆಡೆ ಸಾಗುವಲ್ಲಿ ಮತ್ತು ಸ್ವಚ್ಛ ಮತ್ತು ಉಜ್ವಲ ಭಾರತ ನಿರ್ಮಿಸುವಲ್ಲಿ ರಾಜ್ಯಗಳು ಗುಣಾತ್ಮಕವಾಗಿ ಶ್ರಮಿಸುತ್ತಿವೆ ಎಂದು ಹೇಳಿದರು.