ತುರ್ತುಪರಿಸ್ಥಿತಿ ಖಂಡಿಸಿ ಸಂಸತ್ತಲ್ಲಿ ನಿರ್ಣಯ, ಮೌನಾಚರಣೆ

KannadaprabhaNewsNetwork | Updated : Jun 27 2024, 04:59 AM IST

ಸಾರಾಂಶ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯ ಮೂಲಕ ಸರ್ವಾಧಿಕಾರ ಹೇರಿಕೆ ಮಾಡಿದ್ದರು.

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯ ಮೂಲಕ ಸರ್ವಾಧಿಕಾರ ಹೇರಿಕೆ ಮಾಡಿದ್ದರು. ಇದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಮೇಲಿನ ದಾಳಿಯಾಗಿತ್ತು ಎಂದು ಲೋಕಸಭೆಯ ನೂತನ ಸ್ಪೀಕರ್‌ ಓಂ ಬಿರ್ಲಾ ಕಟು ನುಡಿಗಳಲ್ಲಿ ಟೀಕಿಸಿದ್ದಾರೆ.

ಬುಧವಾರ ನೂತನ ಸ್ಪೀಕರ್ ಆಗಿ ಆಯ್ಕೆಯಾದ ಬೆನ್ನಲ್ಲೇ 1975ರ ಜು.25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವೊಂದನ್ನು ಮಂಡಿಸಿ ಮಾತನಾಡಿದ ಓಂ ಬಿರ್ಲಾ, ‘1975ರ ಜೂ.25ನ್ನು ಭಾರತ ಇತಿಹಾಸದ ಕರಾಳ ಭಾಗವೆಂದು ನೆನಪಿಸಿಕೊಳ್ಳಲಾಗುತ್ತದೆ. ಈ ದಿನದಂದು ದೇಶದಲ್ಲಿ ತುರ್ತುಸ್ಥಿತಿ ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೆಡ್ಕರ್‌ ರಚಿಸಿದ ಸಂವಿಧಾನದ ಮೇಲೆ ಇಂದಿರಾ ಗಾಂಧಿ ದಾಳಿ ನಡೆಸಿದರು. 

ಭಾರತ ಪ್ರಜಾಪ್ರಭುತ್ವದ ತಾಯ್ನಾಡು ಎಂದು ವಿಶ್ವದೆಲ್ಲೆಡೆ ಹಿರಿಮೆ ಹೊಂದಿದೆ. ಆದರೆ ಇಂಥ ಭಾರತದ ಮೇಲೆ ಇಂದಿರಾ ಸರ್ವಾಧಿಕಾರ ಹೇರಿದರು. ಈ ವೇಳೆ ಭಾರತೀಯ ನಾಗರಿಕರ ಹಕ್ಕುಗಳನ್ನು ದಮನ ಮಾಡಲಾಯಿತು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಯಿತು. ವಿಪಕ್ಷ ನಾಯಕರನ್ನು ಜೈಲಿಗೆ ಹಾಕಲಾಯಿತು. ಇಡೀ ದೇಶವನ್ನೇ ಜೈಲಾಗಿ ಪರಿವರ್ತಿಸಲಾಯಿತು. ಪತ್ತ್ಕೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಮೇಲೂ ಕಡಿವಾಣ ಹಾಕಲಾಯಿತು’ ಎಂದು ಕಿಡಿಕಾರಿದರು.

ಮೋದಿ ಪ್ರಶಂಸೆ:

ಬಿರ್ಲಾರ ಮಾತಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ‘ಆ ಸಂದರ್ಭದಲ್ಲಿ ನೋವನ್ನನುಭವಿಸಿದವರ ಕಡೆಗೆ ಇದು ಒಳ್ಳೆಯ ನಡೆ. ಸಂವಿಧಾನವನ್ನು ತುಳಿದು, ಸಾರ್ವಜನಿಕ ಅಭಿಪ್ರಾಯವನ್ನು ಹತ್ತಿಕ್ಕಿ, ಸಂಸ್ಥೆಗಳನ್ನು ನಾಶಪಡಿಸಿದಾಗ ಏನಾಗುತ್ತದೆ ಎನ್ನುವುದಕ್ಕೆ ಇದು ಸೂಕ್ತ ಉದಾಹರಣೆಯಾಗಿರುವುದರಿಂದ 50 ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ಇಂದಿನವರೂ ತಿಳಿದುಕೊಳ್ಳುವುದು ಅಗತ್ಯ ಎಂದಿದ್ದಾರೆ.

ಕಾಂಗ್ರೆಸ್‌ ಟೀಕೆ:

ಈ ನಡುವೆ ಸ್ಪೀಕರ್‌ ಭಾಷಣವನ್ನು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಟೀಕಿಸಿದ್ದಾರೆ. ಇದೊಂದು ದುರದೃಷ್ಟಕರ ಬೆಳವಣಿಗೆ. ಒಮ್ಮತದ ಸ್ಪೂರ್ತಿಯನ್ನು ತಮ್ಮ ವಿಭಜನೆಕಾರಿ ಮಾತಿನಿಂದ ಸ್ಪೀಕರ್‌ ಅಳಿಸಿ ಹಾಕಿದರು. ಇದು ಅವಶ್ಯಕತೆ ಇರಲಿಲ್ಲ. ಇದು 49 ವರ್ಷಗಳ ಹಿಂದಿನ ಘಟನೆ ಎಂದು ಹೇಳಿದ್ದಾರೆ.

ಬಳಿಕ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಿ ಕಲಾಪ ಮುಂದೂಡಲಾಯಿತು. ತದನಂತರ ಬಿಜೆಪಿ ಮತ್ತು ಎನ್‌ಡಿಎ ಸದಸ್ಯರು ಸಂಸತ್ತಿನ ಹೊರಗೆ ತುರ್ತು ಪರಿಸ್ಥಿತಿ ಖಂಡಿಸಿದ ಘೋಷಣೆ ಕೂಗಿದರು.ಕಲಾಪ ಮುಂದೂಡಲಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತ ಸಂಸತ್‌ ಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ.

Share this article