ಸತತ 8ನೇ ವರ್ಷ ಇಂದೋರ್ ನಂ.1 ಮೈಸೂರು ದೇಶದ ನಂ.3 ಸ್ವಚ್ಛ ನಗರ

KannadaprabhaNewsNetwork |  
Published : Jul 18, 2025, 12:45 AM ISTUpdated : Jul 18, 2025, 05:21 AM IST
ಸ್ವಚ್ಛ ಭಾರತ | Kannada Prabha

ಸಾರಾಂಶ

10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್‌ ನಗರವು ದೇಶದಲ್ಲೇ ಅತ್ಯಂತ ಸ್ವಚ್ಛ ನಗರ(ಸೂಪರ್‌ ಸ್ವಚ್ಛ್‌ ಲೀಗ್‌) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನವದೆಹಲಿ: 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್‌ ನಗರವು ದೇಶದಲ್ಲೇ ಅತ್ಯಂತ ಸ್ವಚ್ಛ ನಗರ(ಸೂಪರ್‌ ಸ್ವಚ್ಛ್‌ ಲೀಗ್‌) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಸ್ವಚ್ಛ ನಗರವೆಂಬ ಮುಕುಟ ಇಂದೋರ್‌ ನಗರದ ಪಾಲಾಗುತ್ತಿರುವುದು ಇದು ಸತತ ಎಂಟನೇ ಬಾರಿ. ಇನ್ನು 3ರಿಂದ 10 ಲಕ್ಷ ಜನಸಂಖ್ಯೆಯ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಮೂರನೇ ಸ್ಥಾನಕ್ಕೆ ಭಾಜನವಾಗಿದ್ದರೆ, ರಾಜ್ಯಗಳ ಭರವಸೆಯ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ದಾವಣಗೆರೆ 15ನೇ ಸ್ಥಾನ ಪಡೆದಿದೆ.

ದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ಈ ಸ್ವಚ್ಛ ಸರ್ವೇಕ್ಷಣಾ 2024-25 ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

ಈ ಬಾರಿ ಹೊಸ ರ್‍ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸೂಪರ್‌ ಸ್ವಚ್ಛ್‌ ಲೀಗ್‌(ಅತ್ಯಂತ ಸ್ವಚ್ಛ ನಗರ) ಎಂಬ ನೂತನ ಕೆಟಗರಿ ರೂಪಿಸಲಾಗಿದ್ದು, ಈ ಪಟ್ಟಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರಗಳಲ್ಲಿ ಇಂದೋರ್‌ ಮೊದಲ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನ ಗುಜರಾತ್‌ನ ಸೂರತ್‌, ಮಹಾರಾಷ್ಟ್ರದ ನವಿ ಮುಂಬೈ, ಆಂಧ್ರಪ್ರದೇಶದ ವಿಜಯವಾಡದ ಪಾಲಾಗಿದೆ.

3 ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯ ಸೂಪರ್‌ ಸ್ವಚ್ಛ್‌ ಲೀಗ್‌ ನಗರಗಳ ಪಟ್ಟಿಯಲ್ಲಿ ಉತ್ತರಪ್ರದೇಶದ ನೋಯ್ಡಾಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಚಂಡೀಗಢ, ಮೈಸೂರು, ಉಜ್ಜಯಿನಿ, ಗಾಂಧಿನಗರ ನಂತರದ ಸ್ಥಾನಪಡೆದಿವೆ.

10 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೊಡ್ಡ ನಗರಗಳ ವಿಭಾಗದಲ್ಲಿ ನೀಡುವ ರಾಷ್ಟ್ರಪತಿಗಳ ಸ್ವಚ್ಛ ಶೆಹರ್‌ ಪ್ರಶಸ್ತಿ ಪಟ್ಟಿಯಲ್ಲಿ ಅಹಮದಾಬಾದ್‌ಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಭೋಪಾಲ್‌ ಮತ್ತು ಲಖನೌ ನಂತರದ ಸ್ಥಾನದಲ್ಲಿವೆ.

ಇನ್ನು ಸಚಿವಾಲಯದಿಂದ ನೀಡುವ ಭರವಸೆಯ ಸ್ವಚ್ಛ ನಗರಗಳ ಪ್ರಶಸ್ತಿ ಪಟ್ಟಿಯಲ್ಲಿ ಕರ್ನಾಟಕದ ದಾವಣಗೆರೆ 15ನೇ ಸ್ಥಾನಪಡೆದಿದೆ.

14 ಕೋಟಿ ಮಂದಿ ಸರ್ವೆ:

ಸ್ವಚ್ಛತಾ ಆ್ಯಪ್‌, ಮೈಗವ್‌ ಆ್ಯಪ್‌ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ 4500ಕ್ಕೂ ಹೆಚ್ಚು ನಗರಗಳಲ್ಲಿ ಒಟ್ಟು 14 ಕೋಟಿ ಮಂದಿ ಮುಖಾಮುಖಿ ಸಂವಹನದ ಮೂಲಕ ಸ್ವಚ್ಛ ಸರ್ವೆಯಲ್ಲಿ ಪಾಲ್ಗೊಂಡಿದ್ದರು. ಅವರ ಅಭಿಪ್ರಾಯದ ಆಧಾರದ ಮೇಲೆ ಸ್ವಚ್ಛ ನಗರಗಳ ಪಟ್ಟಿ ಸಿದ್ಧಪಡಿಸಲಾಗಿದೆ.

ಈ ಬಾರಿ 78 ಪ್ರಶಸ್ತಿಗಳನ್ನು ನಾಲ್ಕು ವಿಭಾಗಗಳಲ್ಲಿ ನೀಡಲಾಗಿದೆ. ಇದರಲ್ಲಿ ಜನಸಂಖ್ಯೆ ಆಧರಿಸಿ ಐದು ಕೆಟಗರಿಗಳಲ್ಲಿ ಸೂಪರ್‌ ಸ್ವಚ್ಛ್‌ ಲೀಗ್‌, ವಿಶೇಷ ಕೆಟಗರಿಗಳಾದ- ಗಂಗಾಟೌನ್ಸ್‌, ಕಂಟೋನ್ಮೆಂಟ್‌ ಬೋರ್ಡ್ಸ್‌, ಸಫಾಯಿ ಮಿತ್ರ ಸುರಕ್ಷ, ಮಹಾಕುಂಭ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಸೇರಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ದಾವಣಗೆರೆ ಭರವಸೆಯ ಸ್ವಚ್ಛ ಸಿಟಿ

ರಾಜ್ಯಗಳ ಭರವಸೆಯ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ದಾವಣಗೆರೆ 15ನೇ ಸ್ಥಾನ ಪಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ