ಮಧ್ಯಪ್ರಾಚ್ಯದಲ್ಲಿ ನಡುವೆ ನಡೆಯುತ್ತಿರುವ ಸಂಘರ್ಷ ತಾರಕಕ್ಕೇ : ಅಮೆರಿಕ, ಇಸ್ರೇಲ್‌ಗೆ ಇರಾನ್‌ ತೀಕ್ಷ್ಣ ಪ್ರತೀಕಾರದ ಎಚ್ಚರಿಕೆ

KannadaprabhaNewsNetwork |  
Published : Nov 04, 2024, 12:18 AM ISTUpdated : Nov 04, 2024, 06:06 AM IST
Ayatollah Ali Khamenei

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ಇರಾನ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ ಇರಾನ್‌ನ ಪರಮೋಚ್ಚ ನಾಯಕ ಅಯತೋಲ್ಲಾ ಖಮೇನಿ ಅಮೆರಿಕ ಮತ್ತು ಇಸ್ರೇಲ್‌ಗೆ ತೀಕ್ಷ್ಣ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.

ತೆಹರಾನ್: ಮಧ್ಯಪ್ರಾಚ್ಯದಲ್ಲಿ ಇರಾನ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ ಇರಾನ್‌ನ ಪರಮೋಚ್ಚ ನಾಯಕ ಅಯತೋಲ್ಲಾ ಖಮೇನಿ ಅಮೆರಿಕ ಮತ್ತು ಇಸ್ರೇಲ್‌ಗೆ ತೀಕ್ಷ್ಣ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.

‘ಶತ್ರುಗಳಾದ ಅಮೆರಿಕ ಮತ್ತು ಇಸ್ರೇಲ್‌ ಖಂಡಿತ ನಮ್ಮಿಂದ ತೀಕ್ಷ್ಣ ಪ್ರತೀಕಾರವನ್ನು ಅನುಭವಿಸಲಿದ್ದಾರೆ’ ಎಂದು ಖಮೇನಿ ನೇರವಾಗಿ ಹೇಳಿದ್ದಾರೆ. ಇದೇ ವೇಳೆ, ಖಮೇನಿ ಅವರ ಪ್ರಮುಖ ಸಲಹೆಗಾರರೊಬ್ಬರು, ‘ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾದರೆ ಇರಾನ್‌ನ ಅಣ್ವಸ್ತ್ರ ನೀತಿಯನ್ನು ಪರಿಷ್ಕರಣೆ ಮಾಡುತ್ತೇವೆ. ನಮ್ಮಲ್ಲಿ ಅಣ್ವಸ್ತ್ರಗಳನ್ನು ತಯಾರಿಸುವ ಶಕ್ತಿಯಿದೆ. ಈ ವಿಷಯದಲ್ಲಿ ಬೇರೆ ಯೋಚನೆ ಮಾಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್‌ ಮೇಲೆ ಅ.1ರಂದು ಇರಾನ್‌ ನಡೆಸಿದ ಭಾರೀ ಪ್ರಮಾಣದ ಕ್ಷಿಪಣಿ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ಅ.26ರಂದು ಇರಾನ್‌ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯ ಬೆನ್ನಲ್ಲೇ ಈ ಎಚ್ಚರಿಕೆ ಹೊರಬಿದ್ದಿದೆ.

ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಕಮಾಂಡರ್‌ ಬಲಿ

ಬೈರೂತ್‌: ಶನಿವಾರ ತಡರಾತ್ರಿ ಇಸ್ರೇಲ್ ರಕ್ಷಣಾ ಪಡೆಗಳು ದಕ್ಷಿಣ ಲೆಬನಾನ್‌ನ ಜುವಾಯಾದಲ್ಲಿ ನಾಸೀರ್ ಬ್ರಿಗೇಡ್ ಘಟಕದ ಉನ್ನತ ಹಿಜ್ಬುಲ್ಲಾ ಕಮಾಂಡರ್ ಜಾಫರ್ ಖಾದರ್ ಫೌರ್‌ನನ್ನು ಹತ್ಯೆ ಮಾಡಿವೆ. ಈತ ಕಳೆದ ವರ್ಷ ಅಕ್ಟೋಬರ್‌ನಿಂದ ಇಸ್ರೇಲ್‌ನ ಮೇಲೆ ನಡೆದ ಹಲವಾರು ದಾಳಿಗಳಿಗೆ ಕಾರಣನಾಗಿದ್ದ ಎಂದು ಇಸ್ರೇಲಿ ಸೇನೆ ಹೇಳಿಕೊಂಡಿದೆ. ಆದಾಗ್ಯೂ, ಹಿಜ್ಬುಲ್ಲಾ ಇನ್ನೂ ಫೌರ್ ಸಾವನ್ನು ದೃಢೀಕರಿಸಿಲ್ಲ.

ಈ ಮಧ್ಯೆ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್‌ ಸೇನಾಪಡೆ ಭಾರೀ ದಾಳಿ ಆರಂಭಿಸಿದೆ. ದಾಳಿಯಿಂದ 2000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ಪಲಾಯನ ಮಾಡಿದ್ದಾರೆ. ಈ ಬಗ್ಗೆ ಲೆಬನಾನ್‌ ವಿಶ್ವಸಂಸ್ಥೆಗೆ ದೂರು ನೀಡಿದೆ.

ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ದಾಳಿ:

ಇಸ್ರೇಲ್‌ನ ದಾಳಿಗೆ ಪ್ರತಿಯಾಗಿ ಲೆಬನಾನ್‌ನ ಹೆಜ್ಬುಲ್ಲಾ ಉಗ್ರರು ಕೂಡ ಇಸ್ರೇಲ್‌ನ ಹೈಫಾ ಮತ್ತು ಟೆಲ್‌ ಅವಿವ್‌ನಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ. ಅದಕ್ಕೆ ಉತ್ತರವೆಂಬಂತೆ ಅಮೆರಿಕದ ಸೇನಾಪಡೆಗಳು ಆ ಪ್ರದೇಶದಲ್ಲಿ ಬಿ-52 ಬಾಂಬರ್‌ ವಿಮಾನಗಳನ್ನು ನಿಯೋಜಿಸಿವೆ.

ಗಾಜಾ ಮೇಲೂ ಇಸ್ರೇಲ್‌ ದಾಳಿ:

ಇದೇ ವೇಳೆ, ಗಾಜಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯೂ ಮುಂದುವರೆದಿದೆ. ಅಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ನಡೆಸುತ್ತಿದ್ದ ಪೋಲಿಯೋ ಲಸಿಕೆ ನೀಡುವ ಕ್ಯಾಂಪ್‌ ಮೇಲೆ ಇಸ್ರೇಲ್‌ ಸೇನೆ ದಾಳಿ ನಡೆಸಿದೆ.

ಚಳಿಗಾಲ ನಿಮಿತ್ತ ಕೇದಾರನಾಥ ದೇವಾಲಯ ಬಾಗಿಲು ಬಂದ್‌

ಡೆಹ್ರಾಡೂನ್‌: ಚಳಿಗಾಲದ ಆರಂಭ ಹಿನ್ನೆಲೆಯಲ್ಲಿ ಕೇದಾರನಾಥ ದೇವಾಲಯದ ದ್ವಾರಗಳನ್ನು ಭಾನುವಾರ ವೈದಿಕ ಆಚರಣೆಗಳೊಂದಿಗೆ ಮುಚ್ಚಲಾಯಿತು.ಈ ವೇಳೆ ಶಿವನ ವಿಗ್ರಹವನ್ನು ಉಖಿಮಠದ ಓಂಕಾರೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ 18 ಸಾವಿರ ಭಕ್ತರ ಸಮ್ಮುಖದಲ್ಲಿ ತರಲಾಯಿತು. ಮುಂದಿನ 6 ತಿಂಗಳುಗಳ ಕಾಲ- ಅಂದರೆ ಚಳಿಗಾಲ ಮುಗಿಯುವವರೆಗೆ ಬಾಬಾ ಕೇದಾರನ ಆರಾಧನೆಯು ಉಖಿಮಠದ ಓಂಕಾರೇಶ್ವರ ದೇವಾಲಯದಲ್ಲಿ ನಡೆಯಿತ್ತದೆ.

ಸಮಾರೋಪ ಆಚರಣೆಗಳು ಬೆಳಗ್ಗೆ 4 ಗಂಟೆಗೆ ಆರಂಭವಾಗಿ ದೇಗುಲವನ್ನು ಬೆಳಗ್ಗೆ 8.30ಕ್ಕೆ ಮುಚ್ಚಲಾಯಿತು. ಈ ಬಾರಿಯ ಯಾತ್ರೆಯಲ್ಲಿ 16.5 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ ಎಂದು ದೇಗುಲ ಸಮಿತಿ ಹೇಳಿದೆ.ದೇಶದ 12 ಜೋರ್ತಿಲಿಂಗಗಳಲ್ಲಿ ಒಂದಾದ ಕೇದರನಾಥ ಹಿಮಾಲಯದಲ್ಲಿ 11,000 ಅಡಿ ಎತ್ತರದಲ್ಲಿದೆ.

ತ್ರಿಶೂರ್‌ ಪೂರಂ ಉತ್ಸವಕ್ಕೆ ಆ್ಯಂಬುಲೆನ್ಸ್‌ ಬಳಸಿ ಸಾಗಿದ ಗೋಪಿ: ಕೇಸು

ತಿರುವನಂತಪುರ: ನಟ, ಕೇಂದ್ರ ಸಚಿವ ಸುರೇಶ್‌ ಗೋಪಿ ವಿರುದ್ಧ ಕೇರಳ ಪೋಲೀಸರು ಅಜಾಗರೂಕ ವಾಹನ ಚಾಲನೆ ಮತ್ತು ಆ್ಯಂಬುಲೆನ್ಸ್‌ ದುರ್ಬಳಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳೆದ ಏ.20ರಂದು ನಡೆದ ತ್ರಿಶೂರು ಪೂರಂ ಉತ್ಸವದ ವೇಳೆ ಏಕಮುಖ ಪ್ರಯಾಣಕ್ಕೆ ಇದ್ದ ರಸ್ತೆಯಲ್ಲಿ ವಾಹನ ಸಂಚರಿಸಿದ ಆರೋಪವನ್ನು ಸುರೇಶ್‌ ಗೋಪಿ ಮೇಲೆ ಹೊರಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ‘ಪೂರಂ ಉತ್ಸವಕ್ಕೆ ಬೇಗ ತೆರಳಬೇಕು’ ಎಂಬ ಉದ್ದೇಶದಿಂದ ಆ್ಯಂಬುಲೆನ್ಸ್‌ ಬಳಸಿದ ಆರೋಪ ಹೊರಿಸಲಾಗಿದೆ.

ಈ ಮೊದಲು ’ಆ್ಯಂಬುಲೆನ್ಸ್‌ ಬಳಸಿರಲೇ ಇಲ್ಲ, ಬೇಕಿದ್ದರೆ ಸಿಬಿಐ ತನಿಖೆ ನಡೆಸಿ’ ಎಂದಿದ್ದ ಗೋಪಿ, ಬಳಿಕ ‘ನಾನು ಕಾಲು ನೋವಿನಿಂದಾಗಿ ನಡೆಯಲಾಗದ ಸ್ಥಿತಿಯಲ್ಲಿದ್ದೆ. ಹೀಗಾಗಿ ದೇಗುಲಕ್ಕೆ ತೆರಳಲು ಕೆಲ ಯುವ ಸ್ನೇಹಿತರು ಆ್ಯಂಬುಲೆನ್ಸ್‌ ಮೂಲಕ ನೆರವು ನೀಡಿದ್ದರು’ ಎಂದು ತೆರಳಿದ್ದನ್ನು ಒಪ್ಪಿಕೊಂಡಿದ್ದರು.

ಶ್ರೀನಗರದಲ್ಲಿ ಉಗ್ರರಿಂದ ಗ್ರೆನೇಡ್‌ ದಾಳಿ: 12 ಜನರಿಗೆ ಗಾಯ

ಶ್ರೀನಗರ: ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ಎಸೆದ ಗ್ರೆನೇಡ್‌ ಬಾಂಬ್‌, ರಸ್ತೆ ಮೇಲೆ ಸಿಡಿದ ಕಾರಣ ಅಂಗಡಿಕಾರರು ಸೇರಿ 12 ಜನರು ಗಾಯಗೊಂಡ ಘಟನೆ ಭಾನುವಾರ ಶ್ರೀನಗರದ ಲಾಲ್‌ ಚೌಕ್‌ ಸನಿಹ ನಡೆದಿದೆ.ಭಾನುವಾರ ಸಂಡೇ ಬಜಾರ್‌ ಇದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಉಗ್ರರು, ಪ್ರವಾಸಿ ಮಾಹಿತಿ ಕೇಂದ್ರದ ಬಳಿ ಇದ್ದ ಸಿಆರ್‌ಪಿಎಫ್‌ ವಾಹನದ ಮೇಲೆ ದಾಳಿ ಮಾಡಲು ಗ್ರೆನೇಡ್‌ ಎಸೆದಿದ್ದಾರೆ. ಆದರೆ ಗ್ರೆನೇಡ್‌ ಗುರಿತಪ್ಪಿ, ರಸ್ತೆ ಬಳಿ ಸ್ಫೋಟಗೊಂಡಿದೆ. ಹೀಗಾಗಿ ಅಲ್ಲಿದ್ದ ಅಂಗಡಿಕಾರರು ಸೇರಿ 12 ಮಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯನ್ನು ಸಿಎಂ ಒಮರ್ ಅಬ್ದುಲ್ಲಾ ಖಂಡಿಸಿದ್ದು, ‘ಭದ್ರತಾ ಪಡೆಗಳು ಇಂಥ ಕೃತ್ಯ ತಡೆಯಬೇಕು’ ಎಂದು ಕೋರಿದ್ದಾರೆ.ಶನಿವಾರ ಪಾಕ್‌ನ ಲಷ್ಕರ್‌ ಕಮಾಂಡರ್‌ ಉಸ್ಮಾನ್‌ ಭಾಯಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ಮರುದಿನವೇ ಬೆಳವಣಿಗೆ ನಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ