ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆ : ಬಿಸ್ಕತ್‌ ಬಳಸಿ ಕಾಶ್ಮೀರ ಲಷ್ಕರ್‌ ಉಗ್ರನ ಬೇಟೆ

KannadaprabhaNewsNetwork | Updated : Nov 04 2024, 06:08 AM IST

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ನಿಷೇಧಿತ ಲಷ್ಕರ್‌ ಎ ತೊಯ್ಬಾದ ಕಮಾಂಡರ್‌ ಉಸ್ಮಾನ್‌ ಭಾಯಿಯನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಇದು ಶ್ರೀನಗರ ಸಿಟಿಯಲ್ಲಿ 2 ವರ್ಷದಲ್ಲಿ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾಚರಣೆ ಆಗಿದೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ನಿಷೇಧಿತ ಲಷ್ಕರ್‌ ಎ ತೊಯ್ಬಾದ ಕಮಾಂಡರ್‌ ಉಸ್ಮಾನ್‌ ಭಾಯಿಯನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಇದು ಶ್ರೀನಗರ ಸಿಟಿಯಲ್ಲಿ 2 ವರ್ಷದಲ್ಲಿ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾಚರಣೆ ಆಗಿದೆ.

ವಿಶೇಷ ಎಂದರೆ ಉಸ್ಮಾನ್‌ ಹತ್ಯೆಯಲ್ಲಿ ಕುರುಕುಲು ತಿಂಡಿಯಾದ ‘ಬಿಸ್ಕೆಟ್‌’ ಮಹತ್ವದ ಪಾತ್ರ ವಹಿಸಿದೆ. ಆತ ವಾಸವಿದ್ದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಬೀದಿ ನಾಯಿಗಳು ಇದ್ದು, ಅವುಗಳ ಬೊಗಳುವಿಕೆಯಿಂದ ಉಗ್ರ ಎಚ್ಚೆತ್ತುಕೊಂಡು ಪರಾರಿಯಾಗುವ ಸಾಧ್ಯತೆಯಿತ್ತು. ಹೀಗಾಗಿ ಯೋಧರು ಬಿಸ್ಕತ್‌ ನೀಡಿ ಬೊಗಳುವ ನಾಯಿಗಳ ಬಾಯಿ ಮುಚ್ಚಿಸಿ ತಮ್ಮ ಗುರಿ ತಲುಪುವಲ್ಲಿ ಯಶಸ್ವಿ ಆಗಿದ್ದಾರೆ.

ಹತ್ಯೆ ಹೇಗೆ?:

ಇನ್ಸ್‌ಪೆಕ್ಟರ್‌ ಮನ್ಸೂರ್‌ ವಾನಿ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಉಸ್ಮಾನ್‌ ಭಾಗಿಯಾಗಿದ್ದ, ಹಲವು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯನಾಗಿದ್ದ ಉಸ್ಮಾನ್‌, ಶ್ರೀನಗರದ ಜನನಿಬಿಡ ಖಾನ್ಯಾರ್‌ ಎಂಬಲ್ಲಿ ಅವಿತುಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶನಿವಾರ ಕಾರ್ಯಾಚರಣೆ ನಡೆಸಿವೆ. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ನಾಯಿಗಳು ಬೊಗಳುವುದನ್ನು ತಪ್ಪಿಸಲು ಬಿಸ್ಕತ್‌ ಬಳಸಿವೆ.

‘ಇದು ಶ್ರೀನಗರ ಸಿಟಿಯಲ್ಲಿ 2 ವರ್ಷದಲ್ಲಿ ನಡೆದ ಮೊದಲ ಕಾರ್ಯಾಚರಣೆ ಆಗಿದ್ದು, ಈತನ ಹತ್ಯೆ ನಮಗೆ ಒಂದು ದೊಡ್ಡ ಯಶಸ್ಸು. ಲಷ್ಕರ್‌ನ ಅತಿ ಹಿರಿಯ ಕಮಾಂಡರ್ ಆಗಿದ್ದ ಆತನ ಹತ್ಯೆ ಲಷ್ಕರ್‌ಗೆ ದೊಡ್ಡ ಹೊಡೆತ’ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಇದೇ ವೇಳೆ, ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಜೈಷ್‌ ಎ ಮೊಹಮ್ಮದ್‌ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.

ಬಿಸ್ಕತ್‌ ನೆರವು

- ಪೊಲೀಸರ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಲಷ್ಕರ್‌ ಉಗ್ರ ಉಸ್ಮಾನ್‌ ಭಾಗಿಯಾಗಿದ್ದ

- ಹಲವು ವರ್ಷಗಳಿಂದ ಸಕ್ರಿಯನಾಗಿದ್ದ ಈತ ಜನನಿಬಿಡ ಬಡಾವಣೆಯಲ್ಲಿ ಅಡಗಿಕೊಂಡಿದ್ದ- ಆತ ಇರುವ ಸ್ಥಳ ಗೊತ್ತಾಯಿತು. ಆದರೆ ಅಲ್ಲಿ ಅಪಾರ ಬೀದಿ ನಾಯಿಗಳು ನೆಲೆಸಿದ್ದವು- ಯೋಧರು ಹೋದರೆ ಆ ನಾಯಿಗಳು ಬೊಗಳಿ, ಉಗ್ರ ಪರಾರಿಯಾಗುವ ಸಾಧ್ಯತೆ ಇತ್ತು- ಹೀಗಾಗಿ ಯೋಧರು ನಾಯಿಗಳಿಗೆ ಬಿಸ್ಕತ್‌ ಹಾಕಿ ಬಾಯ್ಮುಚ್ಚಿಸಿ, ಉಗ್ರನ ಕೊಂದರು-

Share this article