ಶಾರುಖ್‌ ಪುತ್ರನ ಮಾದಕ ವಸ್ತು ಪ್ರಕರಣದಲ್ಲಿ ಸೆರೆ ಹಿಡಿದಿದ್ದ ವಾಂಖೆಡೆ, ಶಿಂಧೆ ಬಣದ ಸೇನೆ ಅಭ್ಯರ್ಥಿ?

KannadaprabhaNewsNetwork | Updated : Oct 18 2024, 06:59 AM IST

ಸಾರಾಂಶ

ಮಾದಕ ವಸ್ತು ಪ್ರಕರಣದಲ್ಲಿ ನಟ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ರನ್ನು ಬಂಧಿಸಿದ್ದ ಐಆರ್‌ಎಸ್‌ ಅಧಿಕಾರಿ ಸಮೀರ್‌ ವಾಂಖೆಡೆ ಅವರು ಶಿವಸೇನೆಯಿಂದ (ಶಿಂಧೆ ಬಣ) ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂಬೈ: ಮಾದಕ ವಸ್ತು ಪ್ರಕರಣದಲ್ಲಿ ನಟ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ರನ್ನು ಬಂಧಿಸಿದ್ದ ಐಆರ್‌ಎಸ್‌ ಅಧಿಕಾರಿ ಸಮೀರ್‌ ವಾಂಖೆಡೆ ಅವರು ಶಿವಸೇನೆಯಿಂದ (ಶಿಂಧೆ ಬಣ) ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಸಮೀರ್‌ ವಾಂಖೆಡೆ ಅವರು ಮುಂಬೈನಲ್ಲಿ ಕಸ್ಟಮ್ಸ್‌ ಮತ್ತು ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಯಾಗಿದ್ದ ವೇಳೆ ಕಾಡೇಲಿಯಾ ಎಂಬ ಕ್ರೂಸ್‌ ಹಡಗಿನ ಮೇಲೆ ದಾಳಿ ನಡೆಸಿ ಅದರಲ್ಲಿ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಅವರನ್ನು ಡ್ರಗ್ಸ್‌ ಕೇಸ್‌ ಮೇಲೆ ಬಂಧಿಸಿದ್ದರು. ಇದರಿಂದಾಗಿ ಅವರು ಭಾರಿ ಸುದ್ದಿ ಮಾಡಿದರು. ಬಳಿಕ ಅವರನ್ನು ಪ್ರಕರಣದಿಂದ ತೆಗೆದುಹಾಕಿ, ಚೆನ್ನೈಗೆ ವರ್ಗಾಯಿಸಲಾಗಿತ್ತು.

ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹79,350: ಭಾರೀ ಏರಿಕೆ

ನವದೆಹಲಿ: ಹಬ್ಬದ ಋತುಗಳು ಆರಂಭವಾದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಗುರುವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ 24 ಕ್ಯಾರೆಟ್‌ ಶುದ್ಧ ಚಿನ್ನದ ದರ ಪ್ರತಿ 10 ಗ್ರಾಂಗೆ 450 ರು. ಏರಿಕೆಯಾಗಿ 79,350ಕ್ಕೆ ತಲುಪಿದೆ. ಇದು ದೆಹಲಿಯಲ್ಲಿ ಚಿನ್ನದ ಬೆಲೆಯ ಸಾರ್ವಕಾಲಿಕ ದಾಖಲೆಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 79,980 ರು. ತಲುಪಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

ಅದೇ ರೀತಿ ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 79,180 ರು., ಚೆನ್ನೈನಲ್ಲಿ 78,180 ರು. ಹಾಗೂ ಮುಂಬೈನಲ್ಲಿ 78,935 ರು.ಗೆ ತಲುಪಿದೆ. ಇನ್ನು ಬೆಳ್ಳಿ ದರ ಚೆನ್ನೈನಲ್ಲಿ ಕೇಜಿಗೆ 1,03,000 ರು., ದೆಹಲಿಯಲ್ಲಿ 93,500 ರು., ಮುಂಬೈನಲ್ಲಿ 97,000 ಹಾಗೂ ಬೆಂಗಳೂರಿನಲ್ಲಿ 94,000 ರು. ನಷ್ಟಿದೆ.

ಬಹ್ರೈಚ್ ಕೋಮುಗಲಭೆ: ಎನ್‌ಕೌಂಟರ್‌ ಬಳಿಕ 5 ಆರೋಪಿಗಳ ಬಂಧನ

ಬಹ್ರೈಚ್‌: ಇತ್ತೀಚೆಗೆ ಉತ್ತರಪ್ರದೇಶ ಬಹ್ರೈಚ್‌ನಲ್ಲಿ ರಾಮ್‌ಗೋಪಾಲ್ ವರ್ಮಾ ಎಂಬ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಸಂಭವಿಸಿದ್ದ ಕೋಮುಗಲಭೆ ಪ್ರಕರಣದ 5 ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗುವ ಯತ್ನ ಮಾಡುತ್ತಿದ್ದ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಕೂಡಾ ಪ್ರತಿದಾಳಿ ನಡೆಸಿದ್ದಾರೆ. ಬಳಿಕ ಮೊಹಮ್ಮದ್ ಫಹೀನ್, ಮೊಹಮ್ಮದ್ ಸರ್ಫರಾಜ್ ಮತ್ತು ಅಬ್ದುಲ್ ಹಮೀದ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಕಳೆದ ಭಾನುವಾರ ದುರ್ಗಾ ದೇವಿ ಮೂರ್ತಿ ಮೆರವಣಿಗೆ ವೇಳೆ ಡಿಜೆ ಹಾಡುಗಳು ಹಾಕಬಾರದು ಎಂದು ಎರಡು ಗುಂಪಿನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗೋಪಾಲ್‌ ಶರ್ಮಾನನ್ನು ಅಪಹರಿಸಿದ್ದ ದುರ್ಷ್ಕಮಿಗಳು ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆಗೈದಿದ್ದರು.

ಅಸ್ಸಾಂನಲ್ಲಿ ಹಳಿ ತಪ್ಪಿದ ಅಗರ್ತಲಾ- ಮುಂಬೈ ರೈಲು: ಸಾವು ನೋವಿಲ್ಲ

ಗುವಾಹಟಿ: ಇತ್ತೀಚೆಗೆ ಚೆನ್ನೈ ಬಳಿ ಮೈಸೂರು- ದರ್ಬಂಗಾ ಬಾಗಮತಿ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಘಟನೆ ಬೆನ್ನಲ್ಲೇ, ಗುರುವಾರ ಅಸ್ಸಾಂನಲ್ಲಿ ಅಗರ್ತಲಾ- ಮುಂಬೈ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ. ತ್ರಿಪುರ ರಾಜಧಾನಿ ಅಗರ್ತಲಾದಿಂದ ಮುಂಬೈನ ಲೋಕಮಾನ್ಯ ಟರ್ಮಿನಸ್‌ಗೆ ಹೊರಟಿದ್ದ 12520 ಎಕ್ಸ್‌ಪ್ರೆಸ್‌ ರೈಲು ಅಸ್ಸಾಂನ ಲುಂಬ್ಡಿಂಗ್‌- ಬದರ್‌ಪುರ ಮಾರ್ಗದ ದಿಬೋಲೊಂಗ್‌ ನಿಲ್ದಾಣದಲ್ಲಿ ಹಳಿ ತಪ್ಪಿದೆ. ಮಧ್ಯಾಹ್ನ 3.55ಕ್ಕೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ. ಹಳಿ ತಪ್ಪಿದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಮಾರ್ಗದಲ್ಲಿ ರೈಲು ಸಂಚಾರ ಭಾಗಶಃ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್ಲೈನ್‌ ಬೆಟ್ಟಿಂಗ್‌ ಆ್ಯಪ್‌ ದೋಖಾ: ನಟಿ ತಮನ್ನಾ ಭಾಟಿಯಾಗೆ  ಇ.ಡಿ. ಗ್ರಿಲ್‌

ಗುವಾಹಟಿ: ಮೊಬೈಲ್‌ ಆ್ಯಪ್‌ನಲ್ಲಿ ಹಣಕಾಸಿನ ಮೋಸಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ.ಎಚ್‌ಪಿಜೆಡ್‌ ಟೋಕನ್‌ ಎಂಬ ಆ್ಯಪ್‌ ಹೂಡಿಕೆದಾರರಿಗೆ ಬಿಟ್‌ ಕಾಯಿನ್‌ ಮತ್ತು ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಹಣ ವಸೂಲಿ ಮಾಡಿ ಮೋಸ ಮಾಡಿದೆ ಎಂಬ ದೂರು ದಾಖಲಾಗಿದೆ. ನಟಿ ತಮನ್ನಾ ಈ ಆ್ಯಪ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ಹಣ ಪಡೆದಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಇವರನ್ನು ಇ.ಡಿ.ವಿಚಾರಣೆಗೆ ಒಳಪಡಿಸಿದೆ. ಆದರೆ ಇವರ ಯಾವುದೇ ಗಂಭೀರ ಆರೋಪಗಳಿಲ್ಲ.

Share this article