ನವದೆಹಲಿ: ತಮ್ಮ ತಂದೆ ಚಿದಂಬರಂ ಕೇಂದ್ರ ಸಚಿವರಾಗಿದ್ದ ವೇಳೆ ಕೆಲ ಚೀನಾ ನಾಗರಿಕರಿಗೆ ಭಾರತೀಯ ವೀಸಾ ಕೊಡಿಸಲು ಲಂಚ ಸ್ವೀಕರಿಸಿದ್ದರು ಎಂಬ ಆರೋಪದ ಪ್ರಕರಣ ಸಂಬಂಧ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಗುರುವಾರ ಹೊಸ ಆರೋಪಪಟ್ಟಿ ಸಲ್ಲಿಸಿದೆ.
ಅದರಲ್ಲಿ ಕಾರ್ತಿ ಮತ್ತು ಇತರರ ವಿರುದ್ಧ ಅಪರಾಧ ಪಿತೂರಿ, ವಂಚನೆ, ನಕಲಿ ಸಹಿ ಹಾಕಿದ ಆರೋಪ ಹೊರಿಸಲಾಗಿದೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ, ಎಫ್‌ಐಆರ್ ದಾಖಲಿಸಿದ 2 ವರ್ಷಗಳ ಬಳಿಕ ಜಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ಪ್ರಕರಣದ ಹಿನ್ನಲೆಯೇನು?
ಪಂಜಾಬ್ ಮೂಲದ ಟಿಎಸ್‌ಪಿಎಲ್ ಕಂಪನಿಯು 2011ರಲ್ಲಿ 1980 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಗುತ್ತಿಗೆಯನ್ನು ಚೀನಾ ಮೂಲದ ಕಂಪನಿಗೆ ನೀಡಿತ್ತು. ಈ ಕಂಪನಿಯ ಸಿಬ್ಬಂದಿಗಳು ಭಾರತಕ್ಕೆ ಬರಲು ಅಗತ್ಯವಾಗಿದ್ದ ವೀಸಾವನ್ನು ಕೊಡಿಸಲು ಕಾರ್ತಿ ಚಿದಂಬರಂ ತಮ್ಮ ತಂದೆಯ ಪ್ರಭಾವ ಬಳಸಿಕೊಂಡಿದ್ದರು. ಜೊತೆಗೆ ಅದಕ್ಕೆ ಲಂಚವನ್ನು ಸ್ವೀಕರಿಸಿದ್ದರು ಎಂಬ ಆರೋಪವಿದೆ.