ಐಸಿಸ್‌ನ ಭಾರತೀಯ ಘಟಕ ಮುಖ್ಯಸ್ಥ ಸೆರೆ!

KannadaprabhaNewsNetwork |  
Published : Mar 21, 2024, 01:45 AM ISTUpdated : Mar 21, 2024, 08:52 AM IST
ಉಗ್ರರು | Kannada Prabha

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಭಾರತೀಯ ಘಟಕದ ಮುಖ್ಯಸ್ಥ ಹ್ಯಾರಿಸ್‌ ಫಾರೂಖಿಯನ್ನು ಬುಧವಾರ ಅಸ್ಸಾಂನಲ್ಲಿ ಬಂಧಿಸಲಾಗಿದೆ.

ಪಿಟಿಐ ಗುವಾಹಟಿ

ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಭಾರತೀಯ ಘಟಕದ ಮುಖ್ಯಸ್ಥ ಹ್ಯಾರಿಸ್‌ ಫಾರೂಖಿಯನ್ನು ಬುಧವಾರ ಅಸ್ಸಾಂನಲ್ಲಿ ಬಂಧಿಸಲಾಗಿದೆ. 

ಹ್ಯಾರಿಸ್‌ ತನ್ನ ಆಪ್ತ ಅನುರಾಗ್‌ ಸಿಂಗ್‌ ಅಲಿಯಾಸ್ ರೆಹಾನ್‌ ಜೊತೆ ಬಾಂಗ್ಲಾದೇಶದಿಂದ ಭಾರತ ಪ್ರವೇಶಿಸುತ್ತಿದ್ದಾನೆ ಎಂಬ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

ಬಂಧಿತ ಇಬ್ಬರೂ ವ್ಯಕ್ತಿಗಳ ಗುರುತು ಖಚಿತಪಡಿಸಲಾಗಿದೆ. ಈ ಇಬ್ಬರೂ ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಉಗ್ರ ಕೃತ್ಯಗಳಲ್ಲಿ ಆರೋಪಿಗಳಾಗಿರುವ ಹಿನ್ನೆಲೆಯಲ್ಲಿ ಅವರನ್ನು ಎನ್‌ಐಎ ವಶಕ್ಕೆ ಒಪ್ಪಿಸಲು ಅಸ್ಸಾಂನ ಎಸ್‌ಟಿಎಫ್‌ ನಿರ್ಧರಿಸಿದೆ.

ಉಗ್ರರ ಸೆರೆ: ಐಸಿಸ್‌ ಮುಖ್ಯಸ್ಥನ ಬಂಧನದ ಕುರಿತು ಮಾಹಿತಿ ನೀಡಿರುವ ಅಸ್ಸಾಂ ಪೊಲೀಸರು, ‘ಹ್ಯಾರಿಸ್‌ ಮತ್ತು ರೆಹಾನ್‌ ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. 

ಅದನ್ನು ಆಧರಿಸಿ ನಡೆಸಿದ ಕಾರ್ಯಾಚರಣೆ ವೇಳೆ ಇಬ್ಬರೂ ಬಾಂಗ್ಲಾದೇಶ ಗಡಿಯಲ್ಲಿ ಬರುವ ದುಭ್ರಿ ಜಿಲ್ಲೆಯ ಧರ್ಮಶಾಲಾ ಪ್ರದೇಶದಲ್ಲಿ ಮಾ.20ರ ಬೆಳಗಿನ ಜಾವ 4.30ರ ವೇಳೆಗೆ ಸಿಕ್ಕಿಬಿದ್ದರು’ ಎಂದು ತಿಳಿಸಿದ್ದಾರೆ.

ಈ ಪೈಕಿ ಹ್ಯಾರಿಸ್‌ ಫಾರೂಖಿ ಅಲಿಯಾಸ್‌ ಹರೀಶ್‌ ಅಜ್ಮಲ್‌ ಫಾರೂಖಿ ಡೆಹ್ರಾಡೂನ್‌ ಮೂಲದ ಚಕ್ರತಾ ಪ್ರದೇಶದನು. ಈತ ಐಸಿಸ್‌ ಇಂಡಿಯಾದ ಮುಖ್ಯಸ್ಥ. 

ಇನ್ನು ಪಾಣಿಪತ್‌ನ ಅನುರಾಗ್‌ ಸಿಂಗ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತನ್ನ ಹೆಸರನ್ನು ರೆಹಾನ್‌ ಎಂದು ಬದಲಿಸಿಕೊಂಡಿದ್ದ. ಈತನ ಪತ್ನಿ ಬಾಂಗ್ಲಾದೇಶದವಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐಸಿಸ್‌ ಸಿದ್ಧಾಂತ ಪ್ರಚಾರ:ಬಂಧಿತ ಇಬ್ಬರೂ ಅತ್ಯಂತ ಮತೀಯ ಭಾವನೆಗಳನ್ನು ಹೊಂದಿದವರಾಗಿದ್ದಾರೆ. ಭಾರತದಲ್ಲಿ ಐಸಿಸ್‌ ಸಿದ್ಧಾಂತ ಹರಡುವುದು ಇವರ ಉದ್ದೇಶವಾಗಿತ್ತು. 

ಇದಕ್ಕಾಗಿ ಭಾರತದಲ್ಲೇ ಉಗ್ರ ಸಂಘಟನೆಗೆ ಕಾರ್ಯಕರ್ತರ ನೇಮಕ ಮಾಡಿಕೊಳ್ಳುತ್ತಿದ್ದರು. ಸುಧಾರಿತ ಸ್ಫೋಟಕ ಬಳಸಿ ದೇಶಾದ್ಯಂತ ದುಷ್ಕೃತ್ಯದ ಸಂಚು ರೂಪಿಸಿದ್ದರು. 

ಇದೇ ಕಾರಣಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದ ವೇಳೆ ಇಬ್ಬರನ್ನೂ ಬಂಧಿಸಲಾಗಿದೆ. ಇಬ್ಬರ ವಿರುದ್ಧವೂ ದೆಹಲಿ, ಲಖನೌ ಸೇರಿ ದೇಶದ ಹಲವು ರಾಜ್ಯಗಳಲ್ಲಿ ವಿವಿಧ ಪ್ರಕರಣಗಳು ಬಾಕಿ ಇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ