ನವದೆಹಲಿ: ಜಗತ್ತಿನ ಅತ್ಯುಗ್ರ ಭಯೋತ್ಪಾದಕ ಸಂಘಟನೆಯೆಂಬ ಕುಖ್ಯಾತಿ ಪಡೆದಿರುವ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಜನ್ಮ ತಳೆದು ಹತ್ತು ವರ್ಷಗಳು ತುಂಬಿದ್ದು, ಅದರ ‘ಸಂಭ್ರಮಾಚರಣೆ’ಗೆ ಜಗತ್ತಿನಾದ್ಯಂತ ‘ನಾಸ್ತಿಕರ’ ಮೇಲೆ ದಾಳಿ ನಡೆಸುವಂತೆ ಸಂಘಟನೆಯು ತನ್ನ ‘ಒಂಟಿ ತೋಳಗಳಿಗೆ’ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಗುಪ್ತಚರ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿವೆ ಎಂದು ಹೇಳಲಾಗಿದೆ.
ಇಡೀ ಜಗತ್ತನ್ನು ಇಸ್ಲಾಮಿಕ್ ಸಾಮ್ರಾಜ್ಯವಾದ ‘ಕ್ಯಾಲಿಫೇಟ್’ನ ಆಳ್ವಿಕೆಗೆ ತರುವಂತೆ 2014ರ ರಂಜಾನ್‌ನಂದು ಐಸಿಸ್ ಕರೆ ನೀಡಿತ್ತು. ಆ ಘೋಷಣೆಯೇ ಐಸಿಸ್‌ನ ಹುಟ್ಟು ಎಂದು ಹೇಳಲಾಗುತ್ತದೆ. ಮೂಲತಃ 1999ರಲ್ಲಿ ಜೋರ್ಡಾನ್‌ನ ಉಗ್ರ ಅಬು ಮುಸಬ್ ಅಲ್ ಜರ್ಕಾವಿ ಎಂಬಾತ ಈ ಸಂಘಟನೆಯನ್ನು ಹುಟ್ಟುಹಾಕಿದ್ದರೂ, 2014ರಲ್ಲಿ ಇದರ ಹೆಸರನ್ನು ಇಸ್ಲಾಮಿಕ್ ಸ್ಟೇಟ್ ಎಂದು ಅಬು ಬಕ್ರ್ ಅಲ್ ಬಗ್ದಾದಿ ಬದಲಿಸಿ, ‘ಕ್ಯಾಲಿಫೇಟ್’ ಸ್ಥಾಪಿಸಿರುವುದಾಗಿ ಘೋಷಿಸಿದ್ದ. ಅಂದಿನಿಂದ ಇದು ಐಸಿಸ್ ಎಂದು ಕುಖ್ಯಾತಿ ಪಡೆದಿದೆ.
41 ನಿಮಿಷದ ಆಡಿಯೋ ಬಿಡುಗಡೆ: ‘ಜಗತ್ತಿನಾದ್ಯಂತ ಇರುವ ಐಸಿಸ್ ಮಾಡ್ಯೂಲ್‌ಗಳ ‘ಒಂಟಿ ತೋಳಗಳು’ ನಾಸ್ತಿಕರ ಮಾರಣಹೋಮ ನಡೆಸಬೇಕು. ಎಲ್ಲಾ ಮುಹಾಜಿರಿನ್‌ಗಳು (ವಿದೇಶಗಳಲ್ಲಿರುವ ಹೋರಾಟಗಾರರು) ಇದಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡುವ ಆಡಿಯೋವನ್ನು ಐಸಿಸ್ ವಕ್ತಾರ ಅಬು ಹುದಾಯ್‌ಫಾ ಅಲ್ ಅನ್ಸಾರಿ ಬಿಡುಗಡೆ ಮಾಡಿದ್ದಾನೆ. 41 ನಿಮಿಷದ ಈ ಆಡಿಯೋದಲ್ಲಿ ಹೇಗೆ ಕ್ಯಾಲಿಫೇಟ್‌ನ ಸ್ಥಾಪನೆಯು ಜಗತ್ತಿನ ಇತಿಹಾಸದಲ್ಲಿ ದೊಡ್ಡ ತಿರುವಾಗಿದ್ದು, ಹೇಗೆ ಈಗ ಅದು ಆಫ್ರಿಕಾದ ಮೊಜಾಂಬಿಕ್‌ವರೆಗೂ ಜಗತ್ತಿನಾದ್ಯಂತ ವಿಸ್ತರಿಸಿಕೊಂಡಿದೆ ಎಂಬುದನ್ನು ಹೇಳಿದ್ದಾನೆ.
ಐಸಿಸ್ ಸೇರಲು ಮುಸ್ಲಿಮರಿಗೆ ಕರೆ:
ಇದೇ ವೇಳೆ ಆಡಿಯೋದಲ್ಲಿ ಆತ ಇತ್ತೀಚೆಗೆ ರಷ್ಯಾದ ಮಾಸ್ಕೋದಲ್ಲಿ ನೂರಾರು ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯನ್ನು ಶ್ಲಾಘಿಸಿದ್ದಾನೆ. ಅಲ್ಲದೆ ಜಗತ್ತಿನ ಎಲ್ಲೆಡೆ ಇರುವ ಮುಸ್ಲಿಮರು ಇಸ್ಲಾಮಿಕ್ ಸ್ಟೇಟ್ ಸೇರ್ಪಡೆಯಾಗಬೇಕು ಎಂದೂ ಕರೆ ನೀಡಿದ್ದಾನೆ. ‘ಪ್ರವಾದಿ ಹೇಳಿದಂತೆ ಕ್ರಮೇಣ ಜಗತ್ತಿನಲ್ಲಿ ಇಸ್ಲಾಂ ಒಂದೇ ಉಳಿಯಲಿದೆ’ ಎಂದೂ ಹೇಳಿದ್ದಾನೆ. ಈ ಆಡಿಯೋಕ್ಕೆ ‘ಅಲ್ಲಾನಿಂದಾಗಿ ಇದು ಸಾಧ್ಯವಾಗಲಿದೆ’ ಎಂದು ಶೀರ್ಷಿಕೆ ನೀಡಲಾಗಿದೆ. ಇದೇ ಆಡಿಯೋದಲ್ಲಿ ಅಲ್ ಖೈದಾ ಸಂಘಟನೆಯು ದಾರಿ ತಪ್ಪಿದೆ ಎಂದು ದೂಷಣೆ ಮಾಡಲಾಗಿದೆ.
ಕಳೆದ ಜನವರಿ ತಿಂಗಳಲ್ಲೂ ಅನ್ಸಾರಿ ಒಂದು ಆಡಿಯೋ ಬಿಡುಗಡೆ ಮಾಡಿ ಯಹೂದಿಗಳ ಮಾರಣ ಹೋಮಕ್ಕೆ ಕರೆ ನೀಡಿದ್ದ.