ಡಮಾಸ್ಕಸ್: ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ಪತನದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಸಂತಸ ವ್ಯಕ್ತಪಡಿಸಿದ್ದು, ಕ್ರೂರಿಯ ಆಡಳಿತ ಅಂತ್ಯವಾಗಿದೆ ಎಂದಿದ್ದಾರೆ.
ಸಿರಿಯಾ ಬಂಡುಕೋರರ ಸಂಪರ್ಕದಲ್ಲಿದ್ದೇವೆ: ರಷ್ಯಾ
ಮಾಸ್ಕೋ: ’ಸಿರಿಯಾ ನಿರ್ಗಮಿತ ಅಧ್ಯಕ್ಷ ಬಷರ್ ಅಲ್ ಅಸಾದ್ ದೇಶ ಬಿಟ್ಟು ಓಡಿ ಹೋದ ನಂತರ ಎಲ್ಲಾ ಸಿರಿಯನ್ ವಿರೋಧ ಗುಂಪುಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಹಿಂಸಾಚಾರದಿಂದ ದೂರವಿರಲು ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದ್ದೇವೆ’ ಎಂದು ಎಂದು ಅಸಾದ್ ಬೆಂಬಲಿಗ ದೇಶವಾದ ರಷ್ಯಾ ಹೇಳಿದೆ.2015ರಿಂದ ಸಿರಿಯಾದಲ್ಲಿ ಅಸಾದ್ ಬೆಂಬಲಕ್ಕೆ ನಿಂತು ಉಗ್ರರ ದಮನ ಕಾರ್ಯದಲ್ಲಿ ಪಾಲ್ಗೊಂಡಿದ್ದ ರಷ್ಯಾ ಹೇಳಿಕೆ ನೀಡಿ, ‘ಅಧಿಕಾರ ಹಸ್ತಾಂತರಕ್ಕೆ ಸೂಚನೆ ನೀಡಿ ಅಸಾದ್ ದೇಶ ತೊರೆದಿದ್ದಾರೆ’ ಎಂದು ಹೇಳಿದೆ. ಆದರೆ ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಸಿರಿಯಾದಲ್ಲಿನ ತನ್ನ ನೌಕಾನೆಲೆಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿದೆ.
ಸಿರಿಯಾದಲ್ಲಿ ಐಸಿಸ್ ಚಟುವಟಿಕೆ ಶುರು: ಅಮೆರಿಕ ಆತಂಕ
ವಾಷಿಂಗ್ಟನ್: ಸಿರಿಯಾದಲ್ಲಿನ ಅಸ್ಥಿರತೆಯನ್ನು ದುರ್ಬಳಕೆ ಮಾಡಿಕೊಂಡು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಮತ್ತೆ ತನ್ನ ಚಟುವಟಿಕೆ ಆರಂಭಿಸಬಹುದು ಎಂದು ಅಮೆರಿಕ ಅತಂಕ ವ್ಯಕ್ತಪಡಿಸಿದೆ. ‘ಆದರೆ ಪೂರ್ವ ಸಿರಿಯಾದಲ್ಲಿರುವ ಮನ್ನ ನೆಲೆಗಳಲ್ಲಿ ಉಪಸ್ಥಿತಿಯನ್ನು ಮುಂದುವರಿಸಲಿದ್ದೇವೆ ಹಾಗೂ ಯಾವುದೇ ಉಗ್ರ ಚಟುವಟಿಕೆ ಆರಂಭವಾಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿರಿಯಾ ರಾಸಾಯನಿಕ ಅಸ್ತ್ರ ಉಗ್ರರ ಪಾಲಾಗುವ ಆತಂಕ
ಡಮಾಸ್ಕಸ್: ಸಿರಿಯಾವನ್ನು ಅಲ್ ಖೈದಾ ಬೆಂಬಲಿತ ಉಗ್ರ ಸಂಘಟನೆ ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆಯೇ, ಪದಚ್ಯುತ ಅಧ್ಯಕ್ಷ ಬಷರ್ ಅಲ್ ಅಸಾದ್ ಸರ್ಕಾರ ಸಿದ್ಧಪಡಿಸಿ ಇಟ್ಟುಕೊಂಡಿದ್ದ ರಾಸಾಯನಿಕ ಅಸ್ತ್ರಗಳು ಉಗ್ರರ ಪಾಲಾಗುವ ಆತಂಕವನ್ನು ಅಮೆರಿಕ ಹಾಗೂ ಕೆಲವು ಪಾಶ್ಚಾತ್ಯ ದೇಶಗಳು ವ್ಯಕ್ತಪಡಿಸಿವೆ. ಆದರೆ ಸಿರಿಯಾ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ವಿದೇಶಿ ಹಸ್ತಕ್ಷೇಪ ಇಲ್ಲದೆ ದೇಶದ ಭವಿಷ್ಯ ನಿರ್ಧರಿಸಿ: ಇರಾನ್
ಡಮಾಸ್ಕಸ್: ಸಂಘರ್ಷಪೀಡಿತ ಸಿರಿಯಾದಿಂದ ಪಲಾಯನಗೈದಿರುವ ಅಧ್ಯಕ್ಷ ಬಷರ್ ಅಸಾದ್ ಅವರ ಬೆಂಬಲಕ್ಕೆ ನಿಂತಿರುವ ಇರಾನ್, ದೇಶದ ಭವಿಷ್ಯವನ್ನು ಜನರೇ ನಿರ್ಧರಿಸಬೇಕು ಎಂದು ಹೇಳಿದೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇರಾನ್‌ನ ವಿದೇಶಾಂಗ ಇಲಾಖೆ, ‘ವಿನಾಶಕಾರಿಯಲ್ಲದ ಮಾರ್ಗದಲ್ಲಿ, ಬಲವಂತ ಹಾಗೂ ವಿದೇಶಿ ಹಸ್ತಕ್ಷೇಪವಿಲ್ಲದೆ ಸಿರಿಯಾದ ಜನರು ದೇಶದ ಭವಿಷ್ಯವನ್ನು ನಿರ್ಧರಿಸಬೇಕು’ ಎಂದು ಕರೆ ನೀಡಿದೆ.ಇದು ಬಂಡುಕೋರರಿಗೆ ಬೆದರಿ ಅಸಾದ್ ದೇಶ ತೊರೆದ ಬಳಿಕ ಬಂದಿರುವ ಮೊದಲ ಪ್ರತಿಕ್ರಿಯೆಯಾಗಿದೆ.
ಝೆಲೆನ್ಸ್ಕಿ ಭೇಟಿ ಬೆನ್ನಲ್ಲೇ ಕದನವಿರಾಮಕ್ಕೆ ಟ್ರಂಪ್ ಕರೆ
ಕೀವ್: ಸಹಸಸ್ರಾರು ದಿನಗಳನ್ನು ಪೂರೈಸಿರುವ ರಷ್ಯಾ- ಉಕ್ರೇನ್ ಯುದ್ಧವನ್ನು ಕೊನೆಗೊಳಿಸಿ ಕದನವಿರಾಮ ಜಾರಿಗೊಳಿಸುವ ಬಗ್ಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಪ್ಯಾರಿಸ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಭೇಟಿಯಾದ ಬಳಿಕ ಟ್ರಂಪ್ ಹೀಗೆ ಹೇಳಿದ್ದಾರೆ.ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಟ್ರುತ್‌ನಲ್ಲಿ ಪೋಸ್ಟ್ ಮಾಡಿದ ಅವರು, ‘ರಷ್ಯಾ ಹಾಗೂ ಉಕ್ರೇನ್ ನಡುವಿನ ಈ ಯುದ್ಧದಲ್ಲಿ ಎರಡೂ ಕಡೆಯಲ್ಲಿ ಅಪಾರ ಪ್ರಾಣಹಾನಿಯಾಗಿದೆ. ಆದ್ದರಿಂದ ಶೀಘ್ರವೇ ಕದನವಿರಾಮ ಘೋಷಿಸಿ ಮಾತುಕತೆ ನಡೆಸುವ ಅಗತ್ಯವಿದೆ’ ಎಂದರು. ಅಂತೆಯೇ, ಸಂಘರ್ಷವನ್ನು ಕೊನೆಗೊಳಿಸುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೂ ಕರೆ ನೀಡಿದ್ದಾರೆ.