ಗಾಜಾ ಮೇಲೆ ಇಸ್ರೇಲ್‌ ಭೀಕರ ದಾಳಿ: 400 ಸಾವು

KannadaprabhaNewsNetwork | Published : Mar 19, 2025 12:30 AM

ಸಾರಾಂಶ

ಇಸ್ರೇಲ್ ಮತ್ತು ಹಮಾಸ್‌ ನಡುವೆ ಕದನ ವಿರಾಮ ವಿಸ್ತರಣೆ ಮಾತುಕತೆ ಸ್ಥಗಿತ ಬೆನ್ನಲ್ಲೇ , ಇಸ್ರೇಲ್ ಮಂಗಳವಾರ ಮುಂಜಾನೆ ಗಾಜಾ ಪಟ್ಟಿಯಾದ್ಯಂತ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು, ಅಧಿಕಾರಿಗಳು ಸೇರಿದಂತೆ 400ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ದೇರ್ ಅಲ್-ಬಲಾಹ್: ಇಸ್ರೇಲ್ ಮತ್ತು ಹಮಾಸ್‌ ನಡುವೆ ಕದನ ವಿರಾಮ ವಿಸ್ತರಣೆ ಮಾತುಕತೆ ಸ್ಥಗಿತ ಬೆನ್ನಲ್ಲೇ , ಇಸ್ರೇಲ್ ಮಂಗಳವಾರ ಮುಂಜಾನೆ ಗಾಜಾ ಪಟ್ಟಿಯಾದ್ಯಂತ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು, ಅಧಿಕಾರಿಗಳು ಸೇರಿದಂತೆ 400ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ಜನವರಿಯಲ್ಲಿ ಇಸ್ರೇಲ್ ಮತ್ತು ಹಮಾಸ್‌ ನಡುವೆ ಕದನ ವಿರಾಮ ಜಾರಿಯಾಗಿತ್ತು. ಆದರೆ ವಿಸ್ತರಿಸುವ ಮಾತುಕತೆ ಮುರಿದು ಬಿದ್ದಿದ್ದ ಕಾರಣ ಮತ್ತೆ ಸಂಘರ್ಷ ಆರಂಭವಾಗಿದೆ. ಇದು 17 ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಮತ್ತೆ ಭುಗಿಲೇಳುವ ಆತಂಕ ಸೃಷ್ಟಿಸಿದೆ.

ಇಸ್ರೇಲ್ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಸ್ರೇಲ್ ದಾಳಿ ಮುಂದುವರೆಸಿರುವ ಕಾರಣ ಸಾವು- ನೋವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ.

ಈ ನಡುವೆ ಹಮಾಸ್‌ ಮೇಲಿನ ದಾಳಿಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದು, ‘ ಕದನ ವಿರಾಮವನ್ನು ವಿಸ್ತರಿಸುವ ಮಾತುಕತೆಗಳಲ್ಲಿ ಪ್ರಗತಿಯ ಕೊರತೆಯಿಂದಾಗಿ ದಾಳಿಗೆ ಆದೇಶಿಸಲಾಗಿದೆ.ಇನ್ನು ಮುಂದೆ ಇಸ್ರೇಲ್ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಿಕೊಂಡು ಹಮಾಸ್ ವಿರುದ್ಧ ಕ್ರಮ ಕೈಗೊಳ್ಳಲಿದೆ’ ಎಂದಿದೆ.

ಆದರೆ ಇತ್ತ ಇಸ್ರೇಲ್ ನಡೆಸಿದ ದಾಳಿಗೆ ಹಮಾಸ್‌ ಕೂಡ ಪ್ರತೀಕಾರದ ಎಚ್ಚರಿಕೆಯನ್ನು ನೀಡಿದ್ದು, ನೆತನ್ಯಾಹು ಯುದ್ಧ ನೀತಿಯು ಹಮಾಸ್‌ ವಶದಲ್ಲಿರುವ ಒತ್ತೆಯಾಳುಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದಂತೆ ಆಗಲಿದೆ ಎಂದಿದೆ.

===

ಅಮೆರಿಕ ಬೆಂಬಲ:

ಹಮಾಸ್‌ ಮತ್ತು ಗಾಜಾದ ನಡುವೆ ಮತ್ತೊಂದು ಸುತ್ತಿನ ಯುದ್ಧದ ಕಾರ್ಮೋಡ ಎದ್ದಿರುವ ನಡುವೆಯೇ ಶ್ವೇತಭವನವು ಇಸ್ರೇಲ್ ಬೆನ್ನಿಗೆ ನಿಂತಿದೆ. ಅಲ್ಲದೇ ಹಮಾಸ್‌ ಅನ್ನು ದೂಷಿಸಿದ್ದು, ಕದನ ವಿರಾಮ ವಿಸ್ತರಣೆಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬಹುದಿತ್ತು. ಆದರೆ ಯುದ್ಧವನ್ನು ಆಯ್ಕೆಮಾಡಿಕೊಂಡಿದೆ ಎಂದಿದೆ.

ವ್ಯಾಪಕ ಹಿಂಸಾಚಾರ ಭುಗಿಲೆದ್ದಿರುವ ನಡುವೆ ಈಜಿಪ್ಟ್ , ಕತಾರ್‌ ಮತ್ತು ಅಮೆರಿಕ ಕದನ ವಿರಾಮದ ಮುಂದಿನ ಹಂತಗಳಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ.

Share this article