ಹೈದರಾಬಾದ್: ಗ್ಯಾರಂಟಿ ಸ್ಕೀಂಗಳ ಅನುಷ್ಠಾನದಿಂದ ಆರ್ಥಿಕ ಸುಳಿಯಲ್ಲಿ ಸಿಲುಕಿರುವ ತೆಲಂಗಾಣ ಸರ್ಕಾರ, ಇದೀಗ ನೌಕರರ ಸಂಬಳ ಪಾವತಿಗೂ ಪರದಾಡುತ್ತಿರುವ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೋಮವಾರ ಬಹಿರಂಗಪಡಿಸಿದ್ದಾರೆ. ‘ತುಟ್ಟಿ ಭತ್ಯೆ ಕೇಳಬೇಡಿ, ವೇತನ ನೀಡೋದೇ ಕಷ್ಟವಾಗಿದೆ. ಸಂಬಳಕ್ಕೆ ಆರ್‌ಬಿಐನಿಂದ 4000 ಕೋಟಿ ರು. ಸಾಲ ಪಡೆದಿದ್ದೇವೆ’ ಎಂದು ಸರ್ಕಾರಿ ನೌಕರರನ್ನು ಉದ್ದೇಶಿಸಿ ಹೇಳಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್ ಆಡಳಿತದ ಮತ್ತೊಂದು ರಾಜ್ಯವಾದ ಹಿಮಾಚಲಪ್ರದೇಶದಲ್ಲೇ ಇದೇ ಪರಿಸ್ಥಿತಿ ನಿರ್ಮಾಣವಾಗಿ, ಇತಿಹಾಸದಲ್ಲೇ ಮೊದಲ ಬಾರಿಗೆ ವೇತನ, ಪಿಂಚಣಿ ಪಾವತಿ ವಿಳಂಬವಾಗಿತ್ತು. ಸಿಎಂ, ಶಾಸಕರ ವೇತನ ಪಾವತಿ ಮುಂದೂಡಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಗ್ಯಾರಂಟಿ ಭಾಗ್ಯ ಮತ್ತೊಂದು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿರುವುದು ದೃಢಪಡಿಸಿದೆ.
ಸೋಮವಾರ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ‘ನಮ್ಮ ಸರ್ಕಾರ ಸಾಲದ ಹೊರೆ ಮತ್ತು ಇತರ ಕಾರಣಗಳಿಂದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಆರ್‌ಬಿಐನಿಂದ 4,000 ಕೋಟಿ ರು. ಕೈಸಾಲ ಪಡೆದು ನೌಕರರಿಗೆ ಸಂಬಳ ಪಾವತಿಸಿದ್ದೇವೆ’ ಎಂದು ತಿಳಿಸಿದ್ದಾರೆ.
‘ಪ್ರತಿ ತಿಂಗಳ ಮೊದಲ ತಾರೀಖಿನಂದು ಸಂಬಳ ಪಾವತಿಸುವುದು ಕಷ್ಟವಾಗುತ್ತಿದೆ. ನೌಕರರ ತುಟ್ಟಿ ಭತ್ಯೆ (ಡಿಎ) ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಒತ್ತಾಯಿಸಬೇಡಿ ಎಂದು ನೌಕರರಲ್ಲಿ ನಾನು ವಿನಂತಿಸುತ್ತೇನೆ. ಸರ್ಕಾರದ ಎಲ್ಲ ಅಂಕಿಅಂಶಗಳನ್ನು ನಿಮ್ಮ ಮುಂದಿಡುತ್ತೇನೆ, ಮುಂದಿನದನ್ನು ನೀವೇ ನಿರ್ಧರಿಸಿ’ ಎಂದು ರೇವಂತ್ ರೆಡ್ಡಿ ಸರ್ಕಾರಿ ನೌಕರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜೊತೆಗೆ ಹಿಂದಿನ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದೆ. ನಮ್ಮ ಪರಿಸ್ಥಿತಿ ಇದೀಗ ಕ್ಯಾನ್ಸರ್ ಪೀಡಿತವಾದಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ರೇವಂತ್ ರೆಡ್ಡಿ, ‘ರಾಜ್ಯದ ಸಾಲದ ಮೊತ್ತ ಇದೀಗ 7 ಲಕ್ಷ ಕೋಟಿ ರು. ತಲುಪಿದೆ. ರಾಜ್ಯದ ಮಾಸಿಕ ಆದಾಯ 18500 ಕೋಟಿ ರು.ನಷ್ಟಿದೆ. ಅದರಲ್ಲಿ 6500 ಕೋಟಿ ರು. ವೇತನ ಮತ್ತು ಪಿಂಚಣಿ ಪಾವತಿಗೆ ಬೇಕು. 6500 ಕೋಟಿ ರು. ಸಾಲ ಮತ್ತು ಬಡ್ಡಿ ಮರುಪಾವತಿಗೆ ಬೇಕು. ಉಳಿದ ಕೇವಲ 5000 ಕೋಟಿ ರು. ನಲ್ಲೇ ರಾಜ್ಯದ ಅಭಿವೃದ್ಧಿ ಮಾಡಬೇಕಿದೆ’ ಎಂದು ರಾಜ್ಯದ ಕರಾಳ ಆರ್ಥಿಕ ಪರಿಸ್ಥಿತಿ ಬಿಟ್ಟಿದ್ದರು.---
ರಾಜ್ಯದಲ್ಲಿ ಗ್ಯಾರಂಟಿ ನಿಲ್ಲಿಸಲ್ಲ: ಸಿಎಂ ಸಿದ್ದು
ವಿಧಾನಸಭೆ: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬುದಾಗಿ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಸೋಮವಾರ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿ, ಯೋಜನೆಯಲ್ಲಿ ತಪ್ಪುಗಳಿದ್ದರೆ ಅಥವಾ ಸರ್ಕಾರದ ಖಜಾನೆಗೆ ತೊಂದರೆಯಿದ್ದರೆ ಸರ್ಕಾರದ ಗಮನಕ್ಕೆ ತರುವುದು ಪ್ರತಿಪಕ್ಷಗಳ ಕೆಲಸ. ಪ್ರತಿಪಕ್ಷವು ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಬಾರದು’ ಎಂದ ಅವರು ‘ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುವ ಬಿಜೆಪಿ ಅವುಗಳನ್ನೇ ಕಾಪಿ (ನಕಲು) ಮಾಡಿ ಲೋಕಸಭೆ ಚುನಾವಣೆ ವೇಳೆ ‘ಮೋದಿ ಕಿ ಗ್ಯಾರಂಟಿ’ ನೀಡಿದೆ’ ಎಂದು ಕುಟುಕಿದರು.
ಸಿಎಂ ಹೇಳೋದೇನು?
- ತುಟ್ಟಿ ಭತ್ಯೆ ಕೇಳಬೇಡಿ, ವೇತನ ನೀಡೋದೇ ಕಷ್ಟವಾಗಿದೆ
- ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ರೇವಂತ ರೆಡ್ಡಿ ಮನವಿ
- ಸಂಬಳಕ್ಕೆ ಆರ್‌ಬಿಐನಿಂದ 4000 ಕೋಟಿ ರು. ಸಾಲ ಪಡೆದಿದ್ದೇವೆ
- ರಾಜ್ಯದ ಆರ್ಥಿಕ ಸಂಕಷ್ಟ ಮತ್ತೆ ತೆರೆದಿಟ್ಟ ರೇವಂತ್ ರೆಡ್ಡಿ