ನವದೆಹಲಿ: ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಬೃಹತ್ ಗುರಿ ರೂಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಈ ಕುರಿತ ಕೆಲಸಗಳನ್ನು ಆರಂಭಿಸಿದೆ.
ಈ ಕುರಿತ ನೀಲನಕ್ಷೆಯನ್ನೂ ಅದು ರೂಪಿಸಿದ್ದು, 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣದ ಕಾರ್ಯಾರಂಭದ ನಿರೀಕ್ಷೆ ಇಟ್ಟುಕೊಂಡಿದೆ.
400 ಕಿ.ಮೀ ಎತ್ತರದ ಭೂ ಕಕ್ಷೆಯಲ್ಲಿ ನೆಲೆಗೊಳ್ಳಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಅಗತ್ಯವಾದ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕೆಲಸವನ್ನು ಇಸ್ರೋ ಈಗಾಗಲೇ ಆರಂಭಿಸಿದ್ದು, ಇದು 2-4 ಜನರು ಒಮ್ಮೆ ಉಳಿದುಕೊಳ್ಳಬಹುದಾದ ವ್ಯವಸ್ಥೆ ಹೊಂದಿರಲಿದೆ.
ಹಾಲಿ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರವೇ ತಮ್ಮ ಬಾಹ್ಯಾಕಾಶ ನಿಲ್ದಾಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದು, 4ನೇ ದೇಶವಾಗಿ ಹೊರಹೊಮ್ಮುವ ಕನಸನ್ನು ಭಾರತ ಹೊಂದಿದೆ.
ದ ಭಾರತೀಯ ಅಂತರಿಕ್ಷ್ ಸ್ಟೇಷನ್ ಎಂದು ಹೆಸರಿಸಲಾಗಿರುವ ಈ ನಿಲ್ದಾಣದ ನೀಲನಕ್ಷೆಯನ್ನು ತಿರುವನಂತಪುರದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರದರ್ಶಿಸಲಾಗಿದೆ.
ಭಾರತದ ಅತ್ಯಂತ ಹೆಚ್ಚು ಸಾಮರ್ಥ್ಯ ಹೊಂದಿರುವ ಮಾರ್ಕ್ 3 ರಾಕೆಟ್ ಮೂಲಕ ನಿಲ್ದಾಣ ಉಡ್ಡಯನಕ್ಕೆ ಇಸ್ರೋ ಯೋಜಿಸಿದ್ದು, ನಿಲ್ದಾಣ ಪ್ರಾರಂಭದಲ್ಲಿ 20 ಟನ್ ತೂಕ ಹೊಂದಿರಲಿದೆ.
ಜೊತೆಗೆ ಮುಂದಿನ ದಿನಗಳಲ್ಲಿ 400 ಟನ್‌ವರೆಗೂ ವಿಸ್ತರಣೆಯ ಅವಕಾಶ ಹೊಂದಿರಲಿದೆ. ನಿಲ್ದಾಣದ ಒಂದು ಬದಿಯಲ್ಲಿ ಡಾಕಿಂಗ್ ಪೋರ್ಟ್ ಇರಲಿದ್ದು, ಅದರ ಮೂಲಕ ಬಾಹ್ಯಾಕಾಶ ಯಾನಿಗಳು ನಿಲ್ದಾಣಕ್ಕೆ ಆಗಮಿಸುವ ಅಲ್ಲಿಂದ ತೆರಳುವ ಕೆಲಸ ಮಾಡಲಿದ್ದಾರೆ.
ಅಲ್ಲದೆ ಈ ಪೋರ್ಟ್ ಹಾಲಿ ಅಸ್ತಿತ್ವದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪೋರ್ಟ್‌ಗೆ ಹೊಂದಿಕೊಳ್ಳುವ ರೀತಿಯಲ್ಲೇ ಇರಲಿದೆ. ಈ ಮೂಲಕ ವಿದೇಶಗಳ ರಾಕೆಟ್‌ಗಳ ಮೂಲಕ ಈ ನಿಲ್ದಾಣಕ್ಕೆ ಆಗಮಿಸುವ ಅವಕಾಶವನ್ನು ಇಸ್ರೋ ಕಲ್ಪಿಸಲಿದೆ.