ಯುದ್ಧ ನನ್ನಿಂದ ಸ್ಥಗಿತ : 12ನೇ ಸಲ ಟ್ರಂಪ್‌ ಹೇಳಿಕೆ!

KannadaprabhaNewsNetwork |  
Published : Jun 08, 2025, 01:49 AM ISTUpdated : Jun 08, 2025, 04:36 AM IST
Donald Trump

ಸಾರಾಂಶ

  ಭಾರತ ಮತ್ತು ಪಾಕ್‌ ನಡುವಿನ ಕದನವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್‌ ಇದೀಗ 12ನೇ ಬಾರಿ ಹೇಳಿಕೊಂಡಂತಾಗಿದೆ.

 ವಾಷಿಂಗ್ಟನ್‌: ’ಭಾರತ ಮತ್ತು ಪಾಕಿಸ್ತಾನದ ನಡುವೆ ಅಣು ಯುದ್ಧ ನಡೆಯುವ ಸಾಧ್ಯತೆ ಇತ್ತು. ನಾನು ವ್ಯಾಪಾರವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಎರಡೂ ದೇಶಗಳ ನಾಯಕರನ್ನು ಕದನ ವಿರಾಮಕ್ಕೆ ಒಪ್ಪಿಸಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಮೂಲಕ ಭಾರತ ಮತ್ತು ಪಾಕ್‌ ನಡುವಿನ ಕದನವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್‌ ಇದೀಗ 12ನೇ ಬಾರಿ ಹೇಳಿಕೊಂಡಂತಾಗಿದೆ.

ಶುಕ್ರವಾರ ತಮ್ಮ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಬಹುತೇಕರಿಗೆ ಗೊತ್ತಿಲ್ಲದ ಕೆಲಸ ನಾನು ಮಾಡಿದ್ದೇನೆ. ನಾವು ಗಂಭೀರ ಸಮಸ್ಯೆಯೊಂದನ್ನು ಪರಿಹರಿಸಿದ್ದೇವೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಅಣುಯುದ್ಧದ ಸಾಧ್ಯತೆ ತಪ್ಪಿಸಿದ್ದೇವೆ’ ಎಂದರು.

‘ಪಾಕ್‌-ಭಾರತ ಎರಡೂ ದೇಶಗಳ ಪ್ರಧಾನಿಗಳು ಒಳ್ಳೆಯ ನಾಯಕರು. ಇವೆರಡೂ ಅಣ್ವಸ್ತ್ರ ಹೊಂದಿರುವ ಬಲಿಷ್ಠ ರಾಷ್ಟ್ರಗಳು. ನಾನು ಎರಡೂ ದೇಶಗಳ ನಾಯಕರ ಜತೆ ಮಾತನಾಡಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಅಮೆರಿಕವು ನಿಮ್ಮ ಜತೆಗೆ ವ್ಯಾಪಾರ ನಿಲ್ಲಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಆಗ ಎರಡೂ ದೇಶಗಳು ತಕ್ಷಣ ಯುದ್ಧ ನಿಲ್ಲಿಸಿದವು’ ಎಂದರು.

ಪಹಲ್ಗಾಂ ದಾಳಿ ಬಳಿಕ ಭಾರತವು ಆಪರೇಷನ್‌ ಸಿಂದೂರ ಕಾರ್ಯಾಚರಣೆ ಮೂಲಕ ಪ್ರತಿದಾಳಿ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆ ನಾಶ ಮಾಡಿತ್ತು. ಈ ವೇಳೆ ಎರಡೂ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿದ್ದು, ಕೊನೆಗೆ ಪಾಕಿಸ್ತಾನದ ಮನವಿ ಮೇರೆಗೆ ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು.

ಮಸ್ಕ್‌-ಟ್ರಂಪ್‌ ಕದನವಿರಾಮ?

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಸ್ನೇಹ ಮುರಿದುಬಿದ್ದ ಬೆನ್ನಲ್ಲೇ, ‘ಕದನವಿರಾಮ’ ಏರ್ಪಟ್ಟಿದೆ ಎಂಬ ಸುದ್ದಿಯೂ ಹೊರಬಿದ್ದಿದೆ. ಅಮೆರಿಕದಲ್ಲಿ ಕುಖ್ಯಾತಿ ಪಡೆದಿರುವ ಎಪ್ಸ್ಟೀನ್ ಲೈಂಗಿಕ ಹಗರಣದ ಕಡತಗಳಲ್ಲಿ ಟ್ರಂಪ್‌ ಹೆಸರಿದೆ ಎಂಬ ಟ್ವೀಟರ್‌ ಪೋಸ್ಟ್‌ ಅನ್ನು ಮಸ್ಕ್‌ ಶನಿವಾರ ಅಳಿಸಿ ಹಾಕಿದ್ದಾರೆ.

‘ನಿಜವಾಗಿಯೂ ದೊಡ್ಡ ಬಾಂಬ್ ಹಾಕುವ ಸಮಯ. ಡೊನಾಲ್ಡ್ ಟ್ರಂಪ್ ಎಪ್ಸ್ಟೀನ್ ಫೈಲ್‌ಗಳಲ್ಲಿದ್ದಾರೆ. ಅವುಗಳನ್ನು ಸಾರ್ವಜನಿಕಗೊಳಿಸದೇ ಇರಲು ಅದೇ ನಿಜವಾದ ಕಾರಣ’ ಎಂದು ಮಸ್ಕ್‌ ಪೋಸ್ಟ್ ಮಾಡಿದ್ದರು. ಇದು ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.ಆದರೆ ಶನಿವಾರ ಈ ಪೋಸ್ಟ್‌ ಅನ್ನು ಮಸ್ಕ್ ಅಳಿಸಿ ಹಾಕಿದ್ದಾರೆ. ಈ ಮೂಲಕ ಕದನವಿರಾಮದ ಸುಳಿವು ನೀಡಿದ್ದಾರೆ.

ಎಪ್ಸ್ಟೀನ್‌ ಎಂಬಾತ ಅಮೆರಿಕದ ಫೈನಾನ್ಷಿಯರ್‌ ಆಗಿದ್ದು, ಆತನ ವಿರುದ್ಧ ಲೈಂಗಿಕ ಹಗರಣ ಆರೋಪವಿದೆ. ಆದರೆ ಆತನ ಲೈಂಗಿಕ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಕೋರ್ಟ್‌ ದಾಖಲೆಗಳು, ಸಾಕ್ಷ್ಯಗಳು ಮತ್ತು ಮೊಹರು ಮಾಡಿದ ದಾಖಲೆಗಳು ಈವರೆಗೂ ಬಹಿರಂಗವಾಗಿಲ್ಲ. ಹೀಗಾಗಿ ಇದರಲ್ಲಿ ಅಂಶಗಳ ಬಗ್ಗೆ ಬಹಳ ಹಿಂದಿನಿಂದಲೂ ಊಹಾಪೋಹಗಳಿವೆ.ಕದನ ಬೇಡ- ರಷ್ಯಾ ಮಾಜಿ ಅಧ್ಯಕ್ಷ ಮನವಿ:

ಈ ನಡುವೆ, ‘ಕದನ ಬೇಡ.. ಹುಡುಗರೇ...ನಾನು ನಿಮ್ಮ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಶನಿವಾರ ಟ್ವೀಟ್ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ