ಬೆಳಗಾವಿ ವಂಚಕನಿಂದ ಸನ್ನಿ ಲಿಯೋನ್‌ಗೂ ಹಣ!

KannadaprabhaNewsNetwork |  
Published : Jun 08, 2026, 02:00 AM ISTUpdated : Jun 08, 2026, 04:48 AM IST
Sunny Leone Shivanand Neelannavar

ಸಾರಾಂಶ

ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸಾವಿರಾರು ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ, ಜನರಿಂದ ಸ್ವೀಕರಿಸಿದ ಹಣವನ್ನು ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್‌ ಸೇರಿದಂತೆ ಹಲವು ನಟ- ನಟಿಯರಿಗೆ ನೀಡಿರುವ ವಿಷಯ ಬಹಿರಂಗವಾಗಿದೆ.

  ಬೆಳಗಾವಿ :  ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸಾವಿರಾರು ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ, ಜನರಿಂದ ಸ್ವೀಕರಿಸಿದ ಹಣವನ್ನು ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್‌ ಸೇರಿದಂತೆ ಹಲವು ನಟ- ನಟಿಯರಿಗೆ ನೀಡಿರುವ ವಿಷಯ ಬಹಿರಂಗವಾಗಿದೆ.

ಮತ್ತೊಂದೆಡೆ, ನೀಲಣ್ಣವರ ಬಂಧನದ ಬಳಿಕವೂ ಜನರಿಗೆ ಆತನ ಮೇಲೆ ನಂಬಿಕೆ ಕಡಿಮೆಯಾಗಿಲ್ಲ. 20 ದಿನಗಳಲ್ಲಿ 5 ಕೋಟಿ ರು.ಗೂ ಅಧಿಕ ಹಣವನ್ನು ನೀಲಣ್ಣವರ ಖಾತೆಗೆ ವರ್ಗ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸನ್ನಿ ಲಿಯೋನ್‌ಗೆ ನೋಟಿಸ್‌:

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ, ಸನ್ನಿ ಲಿಯೋನ್ ಸೇರಿದಂತೆ ಸಿನಿಮಾ ನಟರಿಗೆ ನೀಲಣ್ಣವರ ಹಣ ಕೊಟ್ಟ ಬಗ್ಗೆ ಮಾಹಿತಿ ಇದೆ. ಅವರಿಗೆಲ್ಲ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಿಸುತ್ತೇವೆ ಎಂದು ಹೇಳಿದರು.

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ಅಸೋಸಿಯೇಟ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡು ಸಿಐಡಿ ತನಿಖೆ ನಡೆಸುತ್ತಿದೆ. ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ದಿಗೋಷ್ಠಿ ಮಾಡುವುದಿಲ್ಲ. ಊಹಾಪೋಹಗಳು ಹಬ್ಬುತ್ತಿವೆ. ಆದ್ದರಿಂದ ಸತ್ಯಾಂಶ ತಿಳಿಸಲು ಸುದ್ದಿಗೋಷ್ಠಿ ಮಾಡಬೇಕಾಯಿತು. ಜನರು ಇವತ್ತಿಗೂ ನೀಲಣ್ಣವರ ಖಾತೆಗೆ ಹಣ ಹಾಕುತ್ತಿದ್ದಾರೆ. ಈ ರೀತಿ ಯಾರೂ ಹಣ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.

ಶಿವಾನಂದ ನೀಲಣ್ಣವರ, ಆದಿತ್ಯರಾಜ್ ಪ್ರಕರಣದಲ್ಲಿ ಠೇವಣಿ ಸಂಗ್ರಹಕ್ಕೆ ಯಾವುದೇ ಅನುಮತಿ ಇಲ್ಲ. ಭಾರತದಲ್ಲಿ ಎಲ್ಲೂ ಶೇ.30ಕ್ಕಿಂತ ಹೆಚ್ಚು ಲಾಭ ಕೊಡುವ ಕಂಪನಿ ಇಲ್ಲ. ಸಾರ್ವಜನಿಕರು ಬಡ್ಡಿಯ ದುರಾಸೆ ಬಿಡಬೇಕು ಎಂದು ಮನವಿ ಮಾಡಿದರು.

2400 ಕೋಟಿ ರು. ಸಂಗ್ರಹ:

ಹೊಸದಾಗಿ ಹೂಡಿಕೆ ಆದ ಹಣವನ್ನು ಹಳೆಯ ಹೂಡಿಕೆದಾರರ ಮೊತ್ತಕ್ಕೆ ಬಡ್ಡಿಯಾಗಿ ನೀಲಣ್ಣವರ ಕೊಡುತ್ತಿದ್ದ. 2025ರಲ್ಲಿ ₹1000 ಠೇವಣಿ ಇಟ್ಟಿದ್ದರೆ 2026ರಲ್ಲಿ ಅದಕ್ಕೆ ಬಡ್ಡಿ ಕೊಡಬೇಕು. ಹೊಸಬರ ಠೇವಣಿ ಹಳಬರಿಗೆ ಕೊಡುತ್ತಿದ್ದ. ಎಲ್ಲಿಯವರೆಗೆ ಹೊಸ ಠೇವಣಿ ಬರುತ್ತದೆಯೋ ಅಲ್ಲಿಯವರೆಗೆ ಸ್ಕೀಮ್ ನಡೆಯುತ್ತದೆ. 40700 ಹೂಡಿಕೆದಾರರಿಂದ ನೀಲಣ್ಣವರ 2400 ಕೋಟಿ ರು. ಸಂಗ್ರಹ ಮಾಡಿದ್ದಾನೆ. ₹540 ಕೋಟಿ ಹಣವನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ₹170 ಕೋಟಿ ಕಳೆದುಕೊಂಡಿದ್ದಾನೆ. ₹660 ಕೋಟಿ ಶೇರಿಂಗ್ ಅಮೌಂಟ್, ₹390 ಕೋಟಿ ಬೇರೆ ಕಡೆಯಿಂದ ಬರುವ ಸಾಧ್ಯತೆ ಇದೆ. ಚಿನ್ನಾಭರಣ, ಆಸ್ತಿ ಖರೀದಿ ಮಾಡಿದ್ದಾನೆ. ಐದು ಕಾರು, 250 ಗ್ರಾಂ ಚಿನ್ನಾಭರಣ ಇವೆ ಎಂದು ತಿಳಿಸಿದರು.

ಹೆಚ್ಚು ಲಾಭ ಪಡೆದವರಿಗೂ ನೋಟಿಸ್‌:

ಕಂಪನಿ ಹಣವನ್ನು ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ₹55 ಕೋಟಿ ಹಣ ವರ್ಗಾವಣೆಯಾಗಿದೆ. ವೆಲ್ಫೈರ್, 2 ಮರ್ಸಿಡಿಸ್, ಡಿಫೆಂಡರ್, ವರ್ನಾ, 11 ವೋಲ್ವೋ ಎಕ್ಸ್‌ಸಿ90 ಕಾರು ಖರೀದಿಸಿದ್ದಾನೆ. 11 ವಾಹನಗಳು ಬೇರೆ ರಾಜ್ಯದಲ್ಲಿ ನೋಂದಣಿಯಾಗಿವೆ. ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇವೆ. ವಾಪಸ್ ಕಂಪನಿಗೆ ಪಡೆದು ಜನರಿಗೆ ತಲುಪಿಸಲಾಗುವುದು. 

 ₹400 ಕೋಟಿ ಹಣ ಹೂಡಿಕೆದಾರರಿಗೆ ಹೆಚ್ಚುವರಿಯಾಗಿ ಹೋಗಿದೆ. ಅದನ್ನೂ ವಸೂಲಿ ಮಾಡುತ್ತೇವೆ. ಆರಂಭದಲ್ಲಿ ನಿಯಮ ಮೀರಿ ಲಾಭ ಪಡೆದವರನ್ನು ವಿಚಾರಿಸುತ್ತೇವೆ. ಹೆಚ್ಚು ಹಣ ಪಡೆದವರಿಂದ ವಸೂಲಿ ಮಾಡಿಸುತ್ತೇವೆ. 20 ಸಾವಿರ ಠೇವಣಿದಾರರ ದಾಖಲೆ ಪರಿಶೀಲಿಸಿದ್ದೇವೆ. ಇದರಲ್ಲಿ 10 ಸಾವಿರ ಮಹಾರಾಷ್ಟ್ರದವರು ಇದ್ದಾರೆ. ನೀಲಣ್ಣವರ 30 ಬ್ಯಾಂಕ್ ಖಾತೆ ಸಿಕ್ಕಿವೆ. 7 ಖಾತೆಯಲ್ಲಿ ಹೆಚ್ಚು ಹಣ ವರ್ಗಾವಣೆಯಾಗಿದೆ. ಒಂದು ಖಾತೆಯಲ್ಲೇ 36,200 ಪುಟಗಳ ವರ್ಗಾವಣೆ ಹಿಸ್ಟರಿ ಇದೆ ಎಂದು ಮಾಹಿತಿ ನೀಡಿದರು.

40700 ಜನ: ಶಿವಂ ಅಸೋಸಿಯೇಟ್ಸ್‌ನಲ್ಲಿ ಹಣ ಹೂಡಿರುವವರು

₹2400 ಕೋಟಿ: ನೀಲಣ್ಣವರ್‌ ಕಂಪನಿಯಲ್ಲಿ ಹೂಡಿಕೆಯಾದ ಮೊತ್ತ

₹5 ಕೋಟಿ: ನೀಲಣ್ಣವರ ಬಂಧನ ಬಳಿಕ 20 ದಿನದಲ್ಲಿ ಹೂಡಿಕೆ!

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರಶ್ನೆಪತ್ರಿಕೆ ಲೀಕ್‌ಗೆ 10 ವರ್ಷ ಜೈಲು, ₹10 ಕೋಟಿ ದಂಡ : ನಾಳೆ ಬಿಲ್‌ ಮಂಡನೆ
ಸಿಜೆಐಗೆ ಸಿಜೆಪಿ ಥ್ಯಾಂಕ್ಸ್!