ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಈ ಸಂಬಂಧ ಕಾಕ್ರೋಚ್‌ ಜನತಾ ಪಾರ್ಟಿ ಹೋರಾಟಕ್ಕೆ ದೇಶವ್ಯಾಪಿ ದೊಡ್ಡಮಟ್ಟದಲ್ಲಿ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಅಂಶಗಳನ್ನು ಒಳಗೊಂಡ ಕಾಯ್ದೆ ಜಾರಿಗೆ ಮುಂದಾಗಿದೆ. ಶುಕ್ರವಾರ ಸಚಿವ ಸಂಪುಟದಲ್ಲಿ ಅಂಗೀಕಾರವಾದ ಈ ಕರಡು (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸರ್ಕಾರ ಸೋಮವಾರವೇ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಸಜ್ಜಾಗಿದೆ.

ಇದಕ್ಕಾಗಿ ಸರ್ಕಾರ 2 ವರ್ಷಗಳ ಹಿಂದೆ ಜಾರಿಯಾದ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ಕಾಯ್ದೆ-2024ಕ್ಕೆ ತಿದ್ದುಪಡಿ ತಂದಿದೆ.

ಮಸೂದೆಯಲ್ಲಿ ಏನಿದೆ?:

- ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗೆ ಪ್ರತಿ ರಾಜ್ಯದಲ್ಲೂ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ

- ಪ್ರಶ್ನೆಪತ್ರಿಕೆ ಸೋರಿಕೆ ತನಿಖೆಗೆ 2 ತಿಂಗಳು ಮತ್ತು ಆರೋಪಪಟ್ಟಿ ಸಲ್ಲಿಕೆ ಬಳಿಕ 3 ತಿಂಗಳಲ್ಲಿ ವಿಚಾರಣೆ ಪೂರ್ಣ


- ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ದೈನಂದಿನ ಸ್ವರೂಪದಲ್ಲಿ ನಡೆಯಲಿದೆ

- ಯಾವುದೇ ವ್ಯಕ್ತಿ ಸೋರಿಕೆಯಲ್ಲಿ ಭಾಗಿಯಾಗಿದ್ದರೆ ಕನಿಷ್ಠ 5 ಗರಿಷ್ಠ 10 ವರ್ಷ ಜೈಲು. ಗರಿಷ್ಠ ₹50 ಲಕ್ಷ ದಂಡ

- ಸಂಘಟಿತವಾಗಿ ಸೋರಿಕೆ ಮಾಡಿದವರಿಗೆ ಕನಿಷ್ಠ 7 ಗರಿಷ್ಠ 10 ವರ್ಷ ಜೈಲು. 10 ಕೋಟಿ ರು.ವರೆಗೆ ದಂಡ

- ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಗೊತ್ತಿದ್ದೂ ಮುಚ್ಚಿಟ್ಟರೆ ಅಂಥವರಿಗೆ 1 ಕೋಟಿ ರು.ವರೆಗೆ ದಂಡದ ಅವಕಾಶ

- ಇಂಥ ಪ್ರಕರಣಗಳ ತನಿಖೆಗೆ ವಿಶೇಷ ಕಾರ್ಯಪಡೆ ರಚಿಸುವ ಕೇಂದ್ರ ಸರ್ಕಾರಕ್ಕೆ ನೀಡುವ ಅಂಶವೂ ಇದೆ