ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಘೋಷಿಸಿದ್ದಂತೆ ಕಠಿಣ ಕಾನೂನು ಜಾರಿಗೆ ನಿರ್ಧರಿಸಿದೆ.
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಘೋಷಿಸಿದ್ದಂತೆ ಕಠಿಣ ಕಾನೂನು ಜಾರಿಗೆ ನಿರ್ಧರಿಸಿದೆ. ಈ ಪ್ರಕಾರ, ಪ್ರಶ್ನೆಪತ್ರಿಕೆ ಲೀಕ್ ಮಾಡಿದರೆ 10 ವರ್ಷದವರೆಗೆ ಜೈಲು ಹಾಗೂ ₹10 ಕೋಟಿ ದಂಡ ಬೀಳಲಿದೆ. ಪ್ರಕರಣಗಳ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯಗಳು ಕೂಡ ಸ್ಥಾಪನೆ ಆಗಲಿವೆ.
ಶುಕ್ರವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು, ಈ ಕುರಿತಂತೆ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ) ಕಾಯ್ದೆ- 2024ಕ್ಕೆ ತಿದ್ದುಪಡಿ ತರುವ ಮಸೂದೆಗೆ ಅನುಮೋದನೆ ನೀಡಿದೆ. ಸೋಮವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ.
ಮಸೂದೆಯಲ್ಲೇನಿದೆ?:
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆ ನಡೆಸಲು ತ್ವರಿತ ನ್ಯಾಯಾಲಯಗಳು ಸ್ಥಾಪನೆ ಆಗಲಿವೆ. ಅವುಗಳಿಗೆ ವಿಚಾರಣೆ ನಡೆಸಲು 3 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.
ಈ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ಸದ್ಯದ 3ರಿಂದ 5 ವರ್ಷ ಜೈಲುಶಿಕ್ಷೆಯನ್ನು 10 ವರ್ಷದವರೆಗೆ ಹಾಗೂ 10 ಲಕ್ಷ ರು. ದಂಡವನ್ನು 10 ಕೋಟಿ ರು.ವರೆಗೆ ಹಚ್ಚಿಸಲಾಗುತ್ತದೆ.
ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಗೊತ್ತಿದ್ದೂ ಮುಚ್ಚಿಟ್ಟರೆ 1 ಕೋಟಿ ರು.ಗಳವರೆಗೆ ದಂಡ ಬೀಳಲಿದೆ. ಸಂಘಟಿತ ಅಪರಾಧ ಪ್ರಕರಣಗಳಲ್ಲಿ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ನೀಡಲಾಗುತ್ತದೆ ಹಾಗೂ ಕನಿಷ್ಠ 1 ಕೋಟಿ ರು. ದಂಡ ಬೀಳಲಿದೆ.
ಮಸೂದೆಯಲ್ಲೇನಿದೆ?
- ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ ಸ್ಥಾಪನೆ
- ತ್ವರಿತ ಕೋರ್ಟ್‌ಗಳು 3 ತಿಂಗಳೊಳಗೆ ಪ್ರಕರಣ ಇತ್ಯರ್ಥಪಡಿಸಿ ಶಿಕ್ಷೆ ಪ್ರಕಟಿಸಬೇಕು
- ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿ ಆದವರ ಜೈಲು ಶಿಕ್ಷೆ ಮತ್ತು ದಂಡ ಎರಡೂ ಹೆಚ್ಚಳ
- ಪ್ರಸ್ತುತ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರು.ವರೆಗೆ ದಂಡ ಇದೆ
- ಇನ್ನು ಸೋರಿಕೆ ರೂವಾರಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, 10 ಕೋಟಿ ರು. ದಂಡ
- ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಗೊತ್ತಿದ್ದೂ ಮುಚ್ಚಿಟ್ಟರೆ 1 ಕೋಟಿ ರು.ಗಳವರೆಗೆ ದಂಡ
- ಸಂಘಟಿತ ಅಪರಾಧ ಪ್ರಕರಣಗಳಲ್ಲಿ 5 ರಿಂದ 10 ವರ್ಷಗಳ ಜೈಲು. ಕನಿಷ್ಠ 1 ಕೋಟಿ ರು. ದಂಡ
ಈಗ ಶಿಕ್ಷೆ ಎಷ್ಟಿದೆ?
- ಪರೀಕ್ಷಾ ಅಕ್ರಮ ತಡೆಗೆ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ) ಕಾಯ್ದೆ- 2024 ಇದೆ
- ಪ್ರಶ್ನೆಪತ್ರಿಕೆಯಲ್ಲಿ ಸೋರಿಕೆಯಲ್ಲಿ ಭಾಗಿಯಾದವರಿಗೆ 3ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ
- ಗರಿಷ್ಠ 10 ಲಕ್ಷ ರು.ವರೆಗೆ ಮಾತ್ರ ಆ ಕಾಯ್ದೆಯಡಿ ದಂಡ ವಿಧಿಸಬಹುದು. ಶಿಕ್ಷೆ, ದಂಡ ಹೆಚ್ಚಿಸಲು ಈಗ ತಿದ್ದುಪಡಿ
ಎನ್‌ಟಿಎ ಕ್ಲೀನಿಂಗ್ ಆಪರೇಷನ್ ಶುರು: 47 ಜನರ ವಜಾ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಕ್ರೋಶವಿರುವ ಹೊತ್ತಿನಲ್ಲಿ ಸಂಸ್ಥೆಯನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿದ್ದು, 47 ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.
ಇವರಲ್ಲಿ ಕೆಲವರ ವಿರುದ್ಧ ಕಾನೂನಾತ್ಮಕ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. ಎನ್‌ಟಿಎ ಪುನಾರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ಪಂಚಾಯತ್ ರಾಜ್ ಸಚಿವಾಲಯಕ್ಕೆ ವರ್ಗಾಯಿಸಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

