ಹೊಸಪೇಟೆ: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಹಗರಣ ತಡೆಯುವಲ್ಲಿ ವಿಫಲವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಬೃಹತ್ ತಮಟೆ ಚಳವಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿ ಮೃಗೀಯ ರೀತಿಯಲ್ಲಿ ಪ್ರತಿಭಟನಾಕಾರರನ್ನು ನಡೆಸಿಕೊಂಡ ಪೊಲೀಸ್ ಹಾಗೂ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಆತ್ಮಹತ್ಯೆಗೆ ಶರಣಾದ ಮಕ್ಕಳ ಕುಟುಂಬಕ್ಕೆ ₹1 ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಬೇಕು. ಪ್ರಧಾನ ಮಂತ್ರಿ ದೇಶದ ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕು. ವೈದ್ಯಕೀಯ ಶಿಕ್ಷಣದ ಪೂರ್ಣ ಅಧಿಕಾರ ಆಯಾ ರಾಜ್ಯಗಳಿಗೆ ನೀಡಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರದ್ದುಗೊಳಿಸಬೇಕು. ದ್ವಿತೀಯ ಪಿಯುಸಿ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು. ಹೋರಾಟಗಾರ ಸೋನಂ ವಾಂಗ್‌ಚುಕ್ ಅವರನ್ನು ಬಂಧನದಿಂದ ಮುಕ್ತಿಗೊಳಿಸಬೇಕು. ಪ್ರತಿಭಟನಾನಿರತ ವಿದ್ಯಾರ್ಥಿ ಮುಖಂಡರ ಜತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿ, ದೇಶದಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಬೇಕಾದ ಸಲಹೆಗಳನ್ನು ಪಡೆಯಬೇಕು ಎಂದು ಒತ್ತಾಯಿಸಿದರು.ಮುಷ್ಕರನಿರತ ವಿದ್ಯಾರ್ಥಿಗಳು ಹೋರಾಟಗಾರರ ಮೇಲೆ ದಾಖಲಾದ ಎಲ್ಲ ಕೇಸ್‌ಗಳನ್ನು ವಾಪಸ್ ಪಡೆಯಬೇಕು ಎಂದು ಸಮಿತಿ ಮುಖಂಡರಾದ ಬಿ. ಮರಿಸ್ವಾಮಿ, ಎಚ್. ಸೋಮಶೇಖರ್, ಕೆ. ಲಕ್ಷ್ಮಣ, ಎಲ್. ಜಗನ್ನಾಥ, ಎಚ್. ಗೋಪಾಲ್, ಎಚ್. ನಾಗಪ್ಪ, ಕೆ. ವೀರೇಶ್, ಎಚ್. ಆರ್. ಉದಯಕುಮಾರ್, ಸಂತೋಷ, ಶಿವರಾಮ್, ಕೆ. ಶಿವರಾಜ, ಕೆ. ರಾಜ, ಕೆ. ಕೊಟ್ರೇಶ್, ಕರಿಯಪ್ಪ, ಮರಿದಾಸ್ ಇದ್ದರು.