ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಘಟಕದ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆ (ಎಸ್‌ಐಎಸ್‌ಎಸ್‌ಟಿ), ಚೆನ್ನೈ ವತಿಯಿಂದ ಗೋಲ್ಡ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಘಟಕದ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆ (ಎಸ್‌ಐಎಸ್‌ಎಸ್‌ಟಿ), ಚೆನ್ನೈ ವತಿಯಿಂದ ಗೋಲ್ಡ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಚೆನ್ನೈನಲ್ಲಿ ನಡೆದ ಎಸ್‌ಐಎಸ್‌ಎಸ್‌ಟಿ ಸಮಾರಂಭದಲ್ಲಿ ಕಾರ್ಖಾನೆಯ ಪರವಾಗಿ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಡಿಸ್ಟಿಲರಿ ಘಟಕದ ಹಿರಿಯ ಸಿಬ್ಬಂದಿ ಪ್ರಶಸ್ತಿ ಸ್ವೀಕರಿಸಿದರು. ಸಕ್ಕರೆ ಉದ್ಯಮದಲ್ಲಿನ ಡಿಸ್ಟಿಲರಿ ಹಾಗೂ ಉಪ ಉತ್ಪನ್ನ ಘಟಕಗಳ ಕುರಿತು ಅಧ್ಯಯನ, ತಾಂತ್ರಿಕತೆ ಅಭಿವೃದ್ಧಿ ಹಾಗೂ ಮಾಹಿತಿ ಶಿಬಿರಗಳನ್ನು ನಡೆಸುತ್ತಿರುವ ಸಂಸ್ಥೆಯು, ದೇಶದ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ವಾರ್ಷಿಕ ಕಾರ್ಯನಿರ್ವಹಣೆಯ ಮಾನದಂಡಗಳನ್ನು ಮೌಲ್ಯಮಾಪನ ಮಾಡಿ ಉತ್ತಮ ಸಾಧನೆ ಮಾಡಿದ ಕಾರ್ಖಾನೆಗಳಿಗೆ ಪ್ರಶಸ್ತಿ ನೀಡುತ್ತಿದೆ.ಇದೇ ಸಂದರ್ಭದಲ್ಲಿ ಕಾರ್ಖಾನೆಯ ರೂವಾರಿಗಳು ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಬ.ಕೋರೆ ಅವರ ಸಕ್ಕರೆ ಉದ್ಯಮ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಜೀವನಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪದ್ಮಶ್ರೀ ಪುರಸ್ಕೃತರಾದ ಡಾ.ಪ್ರಭಾಕರ ಬ.ಕೋರೆ ಮಾತನಾಡಿ, ಆರಂಭದಲ್ಲಿ ಕಾರ್ಖಾನೆಯು 2,000 ಟಿಸಿಡಿ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿತ್ತು. ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಕಬ್ಬು ಬೆಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ಕಬ್ಬನ್ನು ಸಮಯಕ್ಕೆ ಸರಿಯಾಗಿ ಕಾರ್ಖಾನೆಗೆ ಪೂರೈಸಲು ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಅಂದಿನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕಾರ್ಖಾನೆಯ ಸಾಮರ್ಥ್ಯವನ್ನು 3,500 ಟಿಸಿಡಿಗೆ ಹೆಚ್ಚಿಸುವ ನಿರ್ಣಯ ಕೈಗೊಂಡು ಕಾರ್ಯರೂಪಕ್ಕೆ ತರಲಾಯಿತು. ನಂತರ ಕಬ್ಬು ಬೆಳೆಯ ಪ್ರಮಾಣ ಹೆಚ್ಚಾದಂತೆ ರೈತರ ಹಿತದೃಷ್ಟಿಯಿಂದ ಹಂತ ಹಂತವಾಗಿ ಕಾರ್ಖಾನೆಯ ನುರಿಸುವ ಸಾಮರ್ಥ್ಯವನ್ನು ವಿಸ್ತರಿಸಲಾಯಿತು. ಪ್ರಸ್ತುತ ಪ್ರತಿದಿನ 10,000 ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಸಾಮರ್ಥ್ಯ, 200 ಕೆಎಲ್‌ಪಿಡಿ ಸಾಮರ್ಥ್ಯದ ಎಥನಾಲ್ ಘಟಕ ಹಾಗೂ 31.7 ಮೆಗಾವಾಟ್‌ ಸಾಮರ್ಥ್ಯದ ಸಹವಿದ್ಯುತ್ ಘಟಕ ಹೊಂದಿದೆ ಎಂದರು.ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಪ್ರಶಸ್ತಿ ಕುರಿತು ಮಾತನಾಡಿ, ಕಾರ್ಖಾನೆಯ ರೂವಾರಿಗಳಾದ ಡಾ.ಪ್ರಭಾಕರ ಬ.ಕೋರೆ ಮಾರ್ಗದರ್ಶನ, ಕಾರ್ಖಾನೆಯ ಸಂಚಾಲಕ ಅಮಿತ ಪ್ರಭಾಕರ ಕೋರೆ ನೇತೃತ್ವ, ಆಡಳಿತ ಮಂಡಳಿಯ ಸೂಕ್ತ ನಿರ್ಣಯ, ರೈತರ ಸಹಕಾರ ಹಾಗೂ ಅಧಿಕಾರಿ ಮತ್ತು ಕಾರ್ಮಿಕರ ಸತತ ಪರಿಶ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದರು.ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ನಿರ್ದೇಶಕ ಹಾಗೂ ಕಾರ್ಖಾನೆಯ ಸಂಚಾಲಕ ಅಮಿತ ಕೋರೆ ಮಾತನಾಡಿ, ಕಳೆದ ಹಂಗಾಮಿನಲ್ಲಿ ಕಾರ್ಖಾನೆಯು ಇತಿಹಾಸದಲ್ಲೇ ಅತಿ ಹೆಚ್ಚು ಕಬ್ಬು ನುರಿಸುವ ಮೂಲಕ ಸಾಧನೆ ಮಾಡಿದೆ. ಇದರೊಂದಿಗೆ ಉಪ ಉತ್ಪನ್ನ ಘಟಕಗಳಾದ ಸಹವಿದ್ಯುತ್ ಹಾಗೂ ಡಿಸ್ಟಿಲರಿ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದ್ದರಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಇದರ ಶ್ರೇಯಸ್ಸು ಕಾರ್ಖಾನೆಯ ಸದಸ್ಯರು, ಕಬ್ಬು ಪೂರೈಸಿದ ರೈತರು ಹಾಗೂ ಕಾರ್ಮಿಕ ವರ್ಗಕ್ಕೆ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.ಅತ್ಯಾಧುನಿಕ, ಸ್ವಯಂಚಾಲಿತ ಹಾಗೂ ಸುರಕ್ಷಿತ ಯಂತ್ರೋಪಕರಣಗಳ ಅಳವಡಿಕೆಯೊಂದಿಗೆ ಮಾದರಿ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿ ಹೊರಹೊಮ್ಮಿರುವುದು ಈ ಭಾಗದ ರೈತ ಸದಸ್ಯರಿಗೆ ಹೆಮ್ಮೆಯ ವಿಷಯ. ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಯ ಸಾಧನೆ ಶ್ಲಾಘನೀಯ.

-ಡಾ.ಪ್ರಭಾಕರ ಬ.ಕೋರೆ, ಪದ್ಮಶ್ರೀ ಪುರಸ್ಕೃತರು.2025-26ನೇ ಹಂಗಾಮಿನಲ್ಲಿ ಕಾರ್ಖಾನೆಯ ಇತಿಹಾಸದಲ್ಲೇ ಗರಿಷ್ಠ 10,59,813.292 ಮೆಟ್ರಿಕ್‌ ಟನ್‌ ಕಬ್ಬು ನುರಿಸಿ ದಾಖಲೆ ನಿರ್ಮಿಸಲಾಗಿದೆ. ಡಿಸ್ಟಿಲರಿ ಘಟಕಕ್ಕೆ ಪ್ರಶಸ್ತಿ ದೊರೆತಿರುವುದು ಕಾರ್ಖಾನೆಯ ಎಲ್ಲ ನಿರ್ದೇಶಕರು, ಸಿಬ್ಬಂದಿ, ಕಾರ್ಮಿಕರು ಹಾಗೂ ರೈತರಿಗೆ ಹೆಮ್ಮೆಯ ಸಂಗತಿಯಾಗಿದೆ.

-ಮಲ್ಲಿಕಾರ್ಜುನ ಕೋರೆ,

ಕಾರ್ಖಾನೆಯ ಅಧ್ಯಕ್ಷರು.