ವಿಜಯಪುರ:ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠವಾದ ಬಬಲೇಶ್ವರದ ಗುರುಪಾದೇಶ್ವರ ಸಂಸ್ಥಾನ ಬೃಹನ್ಮಠದದಲ್ಲಿ ಸೆ.12ರಿಂದ 15ರವರೆಗೆ ಗುರುಪಟ್ಟಾಧಿಕಾರ ಮಹೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಬೃಹನ್ಮಠದ ಪೀಠಾಧಿಪತಿ ಮಹಾದೇವ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠವಾದ ಬಬಲೇಶ್ವರದ ಗುರುಪಾದೇಶ್ವರ ಸಂಸ್ಥಾನ ಬೃಹನ್ಮಠದದಲ್ಲಿ ಸೆ.12ರಿಂದ 15ರವರೆಗೆ ಗುರುಪಟ್ಟಾಧಿಕಾರ ಮಹೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಬೃಹನ್ಮಠದ ಪೀಠಾಧಿಪತಿ ಮಹಾದೇವ ಶಿವಾಚಾರ್ಯರು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ.ಮಹಾದೇವ ಶಿವಾಚಾರ್ಯ ಶ್ರೀಗಳ ವಜ್ರಮಹೋತ್ಸವ ಮತ್ತು ತುಲಾಭಾರ ಸಮಾರಂಭ ಹಾಗೂ ಮಹಾತಪಸ್ವಿ ಗುರುಪಾದೇಶ್ವರ ಶಿವಯೋಗಿಗಳವರ 184ನೇ ಮಹಾಗಣಾರಾಧನೆ ಕಾರ್ಯಕ್ರಮಗಳು, ನೂತನ ಉತ್ತರಾಧಿಕಾರಿ ಮಲ್ಲಿಕಾರ್ಜುನ ದೇವರ ಗುರುಪಟ್ಟಾಭಿಷೇಕ ನಡೆಯಲಿದೆ. ಗುರುಪಾದೇಶ್ವರ ಬೆಳಕು ಮಹಾಮಂಟಪದ ಉದ್ಘಾಟನೆ, ಶಕ್ತಿ ವಿಶಿಷ್ಠಾದ್ವೈತ ಸಿದ್ಧಾಂತ ಗ್ರಂಥ ಹಾಗೂ ಶ್ರೀಮಠದ ಚರಿತ್ರೆ ಗ್ರಂಥಗಳ ಬಿಡುಗಡೆ, ಬಬಲೇಶ್ವರ ಬೆಳಕು ಶಾಂತವೀರ ಶ್ರೀಗಳ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ, ಶಾಂತವೀರ ವೃತ್ತದಲ್ಲಿ ಶಾಂತವೀರ ಕಂಚಿನ ಪ್ರತಿಮೆ ಅನಾವರಣ, ಮೂರ್ನಾಲ್ಕು ಗ್ರಂಥಗಳ ಬಿಡುಗಡೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಣಕವಾಡಿಯ ಅಭಿನವ ಮೃತ್ಯುಂಜಯ ಶ್ರೀಗಳು ಕಾರ್ಯಕ್ರಮಗಳ ವಿವರಣೆ ನೀಡಿ, ಸೆ.12ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ, 9.30ಕ್ಕೆ ಸಾಮೂಹಿಕ ಲಿಂಗದೀಕ್ಷೆ ಹಾಗೂ ಜಂಗಮ ವಟುಗಳಿಗೆ ವೀರಮಾಹೇಶ್ವರ (ಅಯ್ಯಾಚಾರ) ದೀಕ್ಷಾ ಸಂಸ್ಕಾರ ಜರುಗಲಿದೆ. ಸಂಜೆ 4ಕ್ಕೆ ಶ್ರೀಗುರು ನಿವಾಸ ಕಟ್ಟಡದ ಲಿಫ್ಟ್ ಉದ್ಘಾಟನೆ, 5ಕ್ಕೆ ಶ್ರೀ ಗುರುಪಾದೇಶ್ವರ ಬೆಳಕು ಮಹಾಮಂಟಪದ ಉದ್ಘಾಟನೆ ಹಾಗೂ ಸಂಜೆ 6ಕ್ಕೆ ಧರ್ಮಸಭೆ ಜರುಗಲಿದೆ. ಸೆ.13ರಂದು ಬೆಳಗ್ಗೆ 9.30ಕ್ಕೆ ಶ್ರೀ ಮಠದಲ್ಲಿ ಶಾಂತವೀರ ಮಹಾಶಿವಯೋಗಿಗಳ ಅಮೃತಶಿಲಾ ಪುತ್ಥಳಿ ಹಾಗೂ ಮಂಟಪದ ಉದ್ಘಾಟನೆ, 10.30ಕ್ಕೆ ಸುಮಂಗಲೆಯರ ಕುಂಭದೊಂದಿಗೆ ಪಾದಯಾತ್ರೆ, ಸಂಜೆ 6ಕ್ಕೆ ವಜ್ರಮಹೋತ್ಸವ ಹಾಗೂ ತುಲಾಭಾರ ಸೇವೆ, ಸನ್ಮಾನ ಸಮಾರಂಭ ಹಾಗೂ ರಾತ್ರಿ 10ಕ್ಕೆ ಶಿವಭಜನೆ ಜಾಗರಣೆ ನಡೆಯಲಿದೆ. ಸೆ.14ರಂದು ಬೆಳಗ್ಗೆ 8ಕ್ಕೆ ಮೆರವಣಿಗೆ, 9ಕ್ಕೆ ಮಹಾಪಾದ ಪೂಜಾ ಸಮಾರಂಭ, 10.30ಕ್ಕೆ ಪುತ್ರದಾನ ಸಮಾರಂಭ, 11ಕ್ಕೆ ನೂತನ ಶ್ರೀಗಳ ಗುರು ಪಟ್ಟಾಧಿಕಾರ ಧರ್ಮ ಸಮಾರಂಭ,11.30ಕ್ಕೆ ಶ್ರೀಗುರು ಪಟ್ಟಾಧಿಕಾರ ಮಹೋತ್ಸವ, ವಜ್ರಮಹೋತ್ಸವ ಮತ್ತು ತುಲಾಭಾರ ಸಮಾರಂಭ ಜರುಗಲಿವೆ. ಸೆ.15ರಂದು ಬೆಳಗ್ಗೆ 9ಕ್ಕೆ ಶಿವಾಚಾರ್ಯರತ್ನ ಸಮಾರಂಭ, ಮಧ್ಯಾಹ್ನ 12ಕ್ಕೆ ಮಹಾದಾಸೋಹ/ಸಾಮೂಹಿಕ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಸತ್ಕಾರ ಹಾಗೂ ಪ್ರವಚನ ಮಂಗಲ ಸಮಾರಂಭ, ಬಳಿಕ ದಾನಿಗಳು, ದಾಸೋಹಿಗಳು ಹಾಗೂ ಸದ್ಭಕ್ತರಿಗೆ ಸನ್ಮಾನ ಸಮಾರಂಭ ಜರುಗಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಠಾಧೀಶರಾದ ಮಲ್ಲಿಕಾರ್ಜುನ ಮರಿದೇವರು, ನಿರಂಜನ ದೇವರು, ಶ್ರೀಗುರುದೇವ ದೇವರು ಹಾಗೂ ಮುಖಂಡರಾದ ವಿ.ಎನ್. ಬಿರಾದಾರ, ಶಂಕರಗೌಡ ಪಾಟೀಲ, ಬಸನಗೌಡ ಬಿರಾದಾರ, ಮುರುಗೇಶ ಸಂಗಮ, ಗೌಡಪ್ಪಗೌಡ ಬಿರಾದಾರ, ಗುರು ಬೂದಿಹಾಳ, ಮಲ್ಲನಗೌಡ ಬಿರಾದಾರ, ವಿನೋದ ಬಿರಾದಾರ ಉಪಸ್ಥಿತರಿದ್ದರು.